ಸಚಿನ್​ ಪಂದ್ಯದ ಮೊದಲ ಎಸೆತ ಎದುರಿಸಲು ಇಷ್ಟ ಪಡುತ್ತಿರಲಿಲ್ಲ, ಕಾರಣ ಬಿಚ್ಚಿಟ್ಟ ಗಂಗೂಲಿ

dada sach
Published on

ನವದೆಹಲಿ: ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಟೀಮ್​ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಮತ್ತು ದಿಗ್ಗಜ ಬ್ಯಾಟ್ಸ್​ಮನ್​ ಸಚಿನ್​ ತೆಂಡುಲ್ಕರ್​ ಒಂದು ಕಾಲದಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಯಶಸ್ವಿ ಆರಂಭಿಕ ಜೋಡಿಯಾಗಿದ್ದರು. ಹಲವಾರು ಅಮೋಘ ಜತೆಯಾಟಗಳನ್ನು ಇವರಿಬ್ಬರು ಆಡಿದ್ದಾರೆ. ಆದರೆ ಇಬ್ಬರೂ ಜತೆಯಾಗಿ ಬ್ಯಾಟ್​ ಹಿಡಿದು ಮೈದಾನಕ್ಕೆ ಇಳಿದಾಗ ಸಚಿನ್​ ತೆಂಡುಲ್ಕರ್​ ಮೊದಲ ಎಸೆತವನ್ನು ಎದುರಿಸಲು ಇಷ್ಟ ಪಡುತ್ತಿರಲಿಲ್ಲವಂತೆ. ಇದಕ್ಕೆ ಕಾರಣವೇನೆಂದು ಸೌರವ್​ ಗಂಗೂಲಿ ಅವರು ಈಗ ಬಹಿರಂಗಪಡಿಸಿದ್ದಾರೆ.

ಸಚಿನ್​ ಜತೆಗೆ ಇನಿಂಗ್ಸ್​ ಆರಂಭಿಸುತ್ತಿದ್ದಾಗ ನಾನೇ ಯಾವಾಗಲೂ ಪಂದ್ಯದ ಮೊದಲ ಎಸೆತವನ್ನು ಎದುರಿಸುತ್ತಿದ್ದೆ ಎಂದು ಸೌರವ್​ ಗಂಗೂಲಿ ಕನ್ನಡಿಗ ಮಯಾಂಕ್​ ಅಗರ್ವಾಲ್​ ಜತೆಗಿನ ಆನ್​ಲೈನ್​ ಮಾತುಕತೆಯ ವೇಳೆ ತಿಳಿಸಿದ್ದಾರೆ. 'ಕೆಲವೊಮ್ಮೆ ನೀವು ಕೂಡ ಮೊದಲ ಎಸೆತವನ್ನು ಎದುರಿಸಿ ಎಂದು ಸಚಿನ್​ಗೆ ಹೇಳುತ್ತಿದ್ದೆ. ಆದರೆ ಅವರು ಅದನ್ನು ನಿರಾಕರಿಸುತ್ತಿದ್ದರು ಮತ್ತು ನನಗೆ 2 ಕಾರಣಗಳನ್ನು ನೀಡುತ್ತಿದ್ದರು. ಮೊದಲನೆಯದಾಗಿ ಅವರ ಫಾರ್ಮ್​ ಉತ್ತಮವಾಗಿದ್ದರೆ, ಅದು ಮುಂದುವರಿಯಬೇಕಾದರೆ ಅವರು ನಾನ್​-ಸ್ಟ್ರೈಕರ್​ನಲ್ಲಿರಬೇಕೆಂಬ ನಂಬಿಕೆ ಹೊಂದಿದ್ದರು. ಎರಡನೆಯದಾಗಿ ಅವರ ಫಾರ್ಮ್​ ಕೆಟ್ಟದಾಗಿದ್ದರೆ, ಒತ್ತಡವನ್ನು ನೀಗಿಸಿಕೊಳ್ಳುವ ಸಲುವಾಗಿ ನಾನ್​-ಸ್ಟ್ರೈಕರ್​ನಲ್ಲಿರುವೆ ಎನ್ನುತ್ತಿದ್ದರು' ಎಂದು ಗಂಗೂಲಿ ವಿವರಿಸಿದ್ದಾರೆ. ಗಂಗೂಲಿ-ಮಯಾಂಕ್​ ಮಾತುಕತೆಯ 'ದಾದಾ ಓಪನ್ಸ್​ ವಿತ್​ ಮಯಾಂಕ್​'ನ ಈ ವಿಡಿಯೋವನ್ನು ಬಿಸಿಸಿಐ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಹಾಗೆಂದು ಗಂಗೂಲಿ ಜತೆಗಿನ ಜತೆಯಾಟದ ವೇಳೆ ಸಚಿನ್​ ಮೊದಲ ಇನಿಂಗ್ಸ್​ ಎದುರಿಸಿಲ್ಲ ಎಂದಿಲ್ಲ. ಒಂದೆರಡು ಬಾರಿ ಸಚಿನ್​ ಕೂಡ ಮೊದಲ ಎಸೆತ ಎದುರಿಸಿದ್ದಾರೆ ಎಂದಿರುವ ಗಂಗೂಲಿ ಅದಕ್ಕೂ ಕಾರಣ ವಿವರಿಸಿದ್ದಾರೆ. 'ಉತ್ತಮ ಮತ್ತು ಕೆಟ್ಟ ಫಾರ್ಮ್​ ಎರಡರ ಕಾರಣವನ್ನೂ ಸಚಿನ್​ ಹೊಂದಿದ್ದರು. ಆದರೆ ಒಂದೆರಡು ಬಾರಿ ನಾನೇ ಅವರಿಗಿಂತ ಮುನ್ನ ಹೋಗಿ ನಾನ್​-ಸ್ಟ್ರೈಕರ್​ ಬದಿಯಲ್ಲಿ ನಿಂತಿದ್ದೆ. ಪಂದ್ಯ ಆಗಲೇ ಟಿವಿಯಲ್ಲಿ ನೇರಪ್ರಸಾರವಾಗಲು ಆರಂಭಿಸಿರುತ್ತಿದ್ದರೆ ಅವರೇ ಅನಿವಾರ್ಯವಾಗಿ ಹೋಗಿ ಸ್ಟ್ರೈಕ್​ ತೆಗೆದುಕೊಳ್ಳುತ್ತಿದ್ದರು. ಆದರೆ ಇದು ಒಂದು ಅಥವಾ 2 ಬಾರಿ ಅಷ್ಟೇ ನಡೆದಿದೆ' ಎಂದು ಗಂಗೂಲಿ ಹೇಳಿದ್ದಾರೆ.

ಗಂಗೂಲಿ ಮತ್ತು ಸಚಿನ್​ ಏಕದಿನ ಕ್ರಿಕೆಟ್​ ಜತೆಯಾಟದಲ್ಲಿ ಒಟ್ಟು 176 ಇನಿಂಗ್ಸ್​ಗಳಲ್ಲಿ 8,227 ರನ್​ ಕೂಡಿಹಾಕಿದ್ದಾರೆ. 47.55ರ ಸರಾಸರಿಯಲ್ಲಿ ಈ ರನ್​ ಪೇರಿಸಿದ್ದಾರೆ. ಇವರಿಬ್ಬರ ಹೊರತಾಗಿ ಬೇರೆ ಯಾವ ಆರಂಭಿಕ ಜೋಡಿಯೂ ಏಕದಿನ ಕ್ರಿಕೆಟ್​ನಲ್ಲಿ ಇದುವರೆಗೆ 6 ಸಾವಿರಕ್ಕಿಂತ ಅಧಿಕ ರನ್​ ಕೂಡಿಹಾಕಿಲ್ಲ. ಗಂಗೂಲಿ ನಂತರದಲ್ಲಿ ವೀರೇಂದ್ರ ಸೆಹ್ವಾಗ್​ ಜತೆಗೆ ಇನಿಂಗ್ಸ್​ ಆರಂಭಿಸುವಾಗಲೂ ಸಚಿನ್​ ತೆಂಡುಲ್ಕರ್​ ಇನಿಂಗ್ಸ್​ನ ಮೊದಲ ಎಸೆತ ಎದುರಿಸುತ್ತಿರಲಿಲ್ಲ ಎಂಬುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net