

ಕೊಲಂಬೊ: ವೃದ್ಧ ಸೈಕ್ಲಿಸ್ಟ್ಗೆ ಕಾರು ಡಿಕ್ಕಿ ಹೊಡೆಸಿ ಸಾವಿಗೆ ಕಾರಣವಾದ ಆರೋಪದಲ್ಲಿ ಶ್ರೀಲಂಕಾದ ಕ್ರಿಕೆಟಿಗ ಕುಸಲ್ ಮೆಂಡಿಸ್ ಈಗಾಗಲೆ ಬಂಧನಕ್ಕೊಳಗಾಗಿದ್ದು, ಘಟನೆಯ ಸಿಸಿಟಿವಿ ದೃಶ್ಯ ಈಗ ಮಾಧ್ಯಮಗಳ ಮೂಲಕ ಬಹಿರಂಗಗೊಂಡಿದೆ.
ಭಾನುವಾರ ಬೆಳಗ್ಗೆ 5 ಗಂಟೆಯ ವೇಳೆಗೆ ಪನದುರದ ಹೊರೆಥುದುವ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಸಿಸಿಟಿವಿ ದೃಶ್ಯಗಳು ತೋರಿಸುತ್ತಿದೆ. 64 ವರ್ಷದ ಸೈಕ್ಲಿಸ್ಟ್ಗೆ 25 ವರ್ಷದ ಕ್ರಿಕೆಟಿಗ ಕುಸಲ್ ಮೆಂಡಿಸ್ ಕಾರು ಡಿಕ್ಕಿ ಹೊಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಸೈಕಲ್ಗೆ ಸಂಪೂರ್ಣವಾಗಿ ಹಾನಿಯಾಗಿದ್ದರೆ, ಕುಸಲ್ ಕಾರಿಗೂ ಡ್ಯಾಮೇಜ್ಗಳಾಗಿವೆ.
ಶ್ರೀಲಂಕಾದ ಪತ್ರಿಕೆ ಡೈಲಿ ಮಿರರ್ನ ಟ್ವಿಟರ್ ಖಾತೆಯಲ್ಲಿ ಅಪಘಾತದ ಸಿಸಿಟಿವಿ ದ್ಯಶ್ಯವನ್ನು ಪ್ರಕಟಿಸಲಾಗಿದ್ದು, ವೇಗವಾಗಿ ಚಲಿಸಿದ ಕಾರು ಮುಂಜಾನೆಯ ಕತ್ತಲೆಯಲ್ಲಿ ಸೈಕ್ಲಿಸ್ಟ್ಗೆ ರಭಸದಿಂದ ಗುದ್ದಿರುವುದು ಕಾಣಿಸಿದೆ. ಕಾರು ಚಲಾಯಿಸುತ್ತಿದ್ದ ವೇಳೆ ಕುಸಲ್ ಮದ್ಯಪಾನ ಸೇವನೆ ಮಾಡಿದ್ದರೇ ಎಂಬ ಬಗ್ಗೆ ಪರೀಕ್ಷೆ ನಡೆದಿದೆ. ಲಂಕಾ ತಂಡದ ರೆಸಿಡೆನ್ಶಿಯಲ್ ತರಬೇತಿ ಶಿಬಿರದಲ್ಲಿ ಕುಸಲ್ ಪಾಲ್ಗೊಂಡಿದ್ದರು. ಪಲ್ಲೆಕಿಲೆಯಲ್ಲಿ ನಡೆದ ಶಿಬಿರ ಕಳೆದ ಬುಧವಾರ ಮುಕ್ತಾಯಗೊಂಡಿತ್ತು. ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಕುಸಲ್ ಲಂಕಾ ಪರ 44 ಟೆಸ್ಟ್, 76 ಏಕದಿನ ಮತ್ತು 26 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಕುಸಲ್ ಮೆಂಡಿಸ್ಗೆ ಜಾಮೀನು
ಕಾರು ಅಪಘಾತ ಪ್ರಕರಣದಲ್ಲಿ ಕುಸಲ್ ಮೆಂಡಿಸ್ಗೆ ಸೋಮವಾರ ಜಾಮೀನು ದೊರೆತಿದೆ. 1 ದಶಲಕ್ಷ ಶ್ರೀಲಂಕಾ ರೂಪಾಯಿ ಮೌಲ್ಯದ ಎರಡು ಶೂರಿಟಿಯ ಮೇರೆಗೆ ಪನದುರ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿ ಭಾನುವಾರ ಅವರನ್ನು ಬಂಧಿಸಲಾಗಿತ್ತು.