ನೀರಜ್​ ಚೋಪ್ರಾ ನಂತರ ಮತ್ತೋರ್ವ ಭಾರತೀಯನಿಗೆ ಡೈಮಂಡ್​ ಲೀಗ್​ ಫೈನಲ್​ ಅರ್ಹತೆ

avi web
Published on

ಕ್ಸಿಯಾಮೆನ್​ (ಚೀನಾ): ಭಾರತದ ಅವಿನಾಶ್​ ಸಾಬ್ಲೆ ಅವರು ಕ್ಸಿಯಾಮೆನ್​ ಚರಣದ ಡೈಮಂಡ್​ ಲೀಗ್​ನಲ್ಲಿ ಪುರುಷರ 3 ಸಾವಿರ ಮೀಟರ್​ ಸ್ಟೀಪಲ್​ಚೇಸ್​ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅಮೆರಿಕದಲ್ಲಿ ಸೆಪ್ಟೆಂಬರ್​ 16-17ರಂದು ನಡೆಯಲಿರುವ ಡೈಮಂಡ್​ ಲೀಗ್​ ಫೈನಲ್​ಗೆ ಅರ್ಹತೆ ಸಂಪಾದಿಸಿದ್ದಾರೆ. ಮಹಾರಾಷ್ಟ್ರದ 28 ವರ್ಷದ ಅವಿನಾಶ್​ ಡೈಮಂಡ್​ ಲೀಗ್​ ಫೈನಲ್​ಗೇರಿದ ಮೂರನೇ ಭಾರತೀಯರೆನಿಸಿದ್ದಾರೆ.

ಶನಿವಾರ ನಡೆದ ಸ್ಪರ್ಧೆಯಲ್ಲಿ ಅವಿನಾಶ್​ 8 ನಿಮಿಷ 16.27 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿದರು. ಇದು ಅವರ ಹಾಲಿ ಋತುವಿನ ಶ್ರೇಷ್ಠ ನಿರ್ವಹಣೆ (8:11.63) ಮತ್ತು ರಾಷ್ಟ್ರೀಯ ದಾಖಲೆಗಿಂತ (8:11.20) ಕೆಳಗಿನ ನಿರ್ವಹಣೆಯಾಗಿದೆ. ಈ ಮೂಲಕ ಅವರು 11 ಅಂಕ ಸಂಪಾದಿಸಿ ಇದೇ ಮೊದಲ ಬಾರಿಗೆ ಡೈಮಂಡ್​ ಲೀಗ್ ಫೈನಲ್​ನಲ್ಲಿ ಸ್ಪರ್ಧಿಸುವ ಅವಕಾಶ ಪಡೆದರು. ಅವಿನಾಶ್​ ಈ ಮುನ್ನ ಸ್ಪರ್ಧಿಸಿದ 3 ಡೈಮಂಡ್​ ಲೀಗ್​ ಚರಣಗಳಲ್ಲಿ ಕ್ರಮವಾಗಿ 10 (ಮೊರಾಕೊ), 5 (ಸ್ಟಾಕ್​ಹೋಮ್​) ಮತ್ತು 6ನೇ (ಪೋಲೆಂಡ್​) ಸ್ಥಾನ ಪಡೆದಿದ್ದರು. ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಮತ್ತು ಲಾಂಗ್​ ಜಂಪ್​ ಪಟು ಮುರಳಿ ಶ್ರೀಶಂಕರ್​ ಡೈಮಂಡ್​ ಲೀಗ್ ಫೈನಲ್​ಗೆ ಅರ್ಹತೆ ಪಡೆದಿದ್ದ ಮೊದಲಿಬ್ಬರು ಭಾರತೀಯರಾಗಿದ್ದಾರೆ.

ಕ್ಸಿಯಾಮೆನ್​ ಡೈಮಂಡ್​ ಲೀಗ್​ನ ಟ್ರಿಪಲ್​ ಜಂಪ್​ ಸ್ಪರ್ಧೆಯಲ್ಲಿ ಭಾರತದ ಪ್ರವಿಣ್​ ಚಿತ್ರವೇಲ್​ 16.42 ಮೀ. ದೂರ ಹಾರಿ 5ನೇ ಸ್ಥಾನ ಪಡೆದರೆ, ಅಬ್ದುಲ್ಲಾ ಅಬೂಬಕರ್​ 16.25 ಮೀ. ಹಾರಿ 6ನೇ ಸ್ಥಾನ ಗಳಿಸಿದರು. ಆದರೆ ಇವರಿಬ್ಬರೂ ಡೈಮಂಡ್​ ಲೀಗ್​ ಫೈನಲ್​ಗೇರಲು ವಿಫಲರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net