

ರಾಯ್ಪುರ (ಛತ್ತೀಸಗಢ): ನನ್ನ ಹೆಸರು ಮಹೇಂದ್ರ ಸಿಂಗ್ ಧೋನಿ. ನನಗೆ ಶಿಕ್ಷಕನಾಗುವ ಎಲ್ಲಾ ಅರ್ಹತೆ ಇದ್ದು, ನನಗೆ ಹುದ್ದೆ ನೀಡಿ ಎಂಬ ಅರ್ಜಿಯೊಂದು ಛತ್ತೀಸಘಡ ಸರ್ಕಾರಕ್ಕೆ ಬಂದಿದ್ದು, ಇದರಲ್ಲಿ ಸಚಿನ್ ತೆಂಡೂಲ್ಕರ್ ಅವರ ಹೆಸರೂ ಸೇರಿಸಲಾಗಿದೆ. ಈ ಅರ್ಜಿಯಲ್ಲಿ ತಂದೆಯ ಜಾಗದಲ್ಲಿ ಸಚಿನ್ ತೆಂಡೂಲ್ಕರ್ ಹೆಸರು ಹಾಕಲಾಗಿದ್ದು, ವಿಚಿತ್ರ ಎಂದರೆ ಈ ಅರ್ಜಿಯು ಷಾರ್ಟ್ಲಿಸ್ಟ್ನಲ್ಲಿ ಕೂಡ ಆಯ್ಕೆಯಾಗಿಬಿಟ್ಟಿದೆ!
ಛತ್ತೀಸಘಡದಲ್ಲಿ 14,850 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಇಂಥದ್ದೊಂದು ಅರ್ಜಿ ಕೂಡ ಬಂದಿದ್ದು, ಅದನ್ನು ಆಯ್ಕೆ ಮಾಡಲು ಷಾರ್ಟ್ಲಿಸ್ಟ್ನಲ್ಲಿ ಹಾಕಲಾಗಿದೆ. ಅಲ್ಲಿಯವರೆಗೂ ಈ ಅರ್ಜಿಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಯೇ ಇರಲಿಲ್ಲ. ಆದರೆ ಸಂದರ್ಶನ ನಡೆಯುವ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎಂಬ ಅಭ್ಯರ್ಥಿಯನ್ನು ಅಧಿಕಾರಿಗಳು ಕರೆದಿದ್ದಾರೆ. ಆದರೆ ಆಗ ಯಾರೂ ಬರಲಿಲ್ಲ. ಈ ಸಮಯದಲ್ಲಿ ಅರ್ಜಿಯನ್ನು ನೋಡಿದಾಗ ಏನೋ ಸಂದೇಹ ಶುರುವಾಗಿದೆ.
ಧೋನಿಯ ಜತೆಗೆ ತೆಂಡೂಲ್ಕರ್ ಹೆಸರೂ ಇದ್ದುದನ್ನು ಕಂಡ ಅಧಿಕಾರಿಗಳು ಆ ಅರ್ಜಿಯ ಮೇಲೆ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ನಂತರ ಇದು ನಕಲಿ ಎಂದು ತಿಳಿದಿದೆ. ಈಗ ಈ ನಕಲಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ ಅಧಿಕಾರಿಗಳು. ಈತನ ವಿರುದ್ಧ ಎಫ್ಐಆರ್ ದಾಖಲಿಸಲು ಮುಂದಾಗಿದ್ದಾರೆ. ಆದರೆ ಈ ಅರ್ಜಿ ನಕಲಿಯಾದರೆ ಮಹೇಂದ್ರಸಿಂಗ್ ಧೋನಿ ಹೆಸರಿನಲ್ಲಿ ಅಲ್ಲಿ ಇರುವ ಸರ್ಟಿಫಿಕೇಟ್ಗಳೂ ನಕಲಿಯೆಂದೇ ಆಗಿದೆ. ಹಾಗಿದ್ದರೆ ಈತನನ್ನು ಷಾರ್ಟ್ಲಿಸ್ಟ್ ಮಾಡಿದ್ದು ಹೇಗೆ ಎಂಬ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಸದ್ಯ ಜಾಲತಾಣದಲ್ಲಿ ಇದು ವೈರಲ್ ಆಗಿದ್ದು, ನಗೆಗಡಲಿನಲ್ಲಿ ತೇಲಿಸಿದೆ.