

ಪ್ಯಾರಿಸ್: ಭಾರತದ ಪಿಸ್ತೂಲ್ ಶೂಟರ್ ರುಬಿನಾ ಫ್ರಾನ್ಸಿಸ್ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ಕ್ರೀಡಾಸ್ಪರ್ಧೆಯ 3ನೇ ದಿನವಾದ ಶನಿವಾರ ಕಂಚಿನ ಪದಕಕ್ಕೆ ಗುರಿ ಇಟ್ಟರು. ಇದರೊಂದಿಗೆ ಭಾರತ ಕೂಟದಲ್ಲಿ ಗೆದ್ದ ಪದಕಗಳ ಸಂಖ್ಯೆ 5ಕ್ಕೇರಿದೆ. ಈ ಪೈಕಿ ಶೂಟಿಂಗ್ನಲ್ಲೇ 4 ಪದಕಗಳು ಒಲಿದಿವೆ. ಆದರೆ ಅದೃಷ್ಟದ ಬಲ ಇರದಿದ್ದರೆ ರುಬಿನಾ ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಿಂದ ವಂಚಿತರಾಗುತ್ತಿದ್ದರು. ಪ್ಯಾರಿಸ್ಗೆ ಭಾರತ ತಂಡ ತೆರಳುವುದಕ್ಕೆ ಕೆಲವೇ ದಿನ ಮುನ್ನ ರುಬಿನಾ ವೈಲ್ಡ್ಕಾರ್ಡ್ ಮೂಲಕ ಪ್ಯಾರಾಲಿಂಪಿಕ್ಸ್ಗೆ ಅರ್ಹತೆ ಗಳಿಸಿದ್ದರು. ಇದೀಗ ಅವರು ಪದಕ ವಿಜೇತೆಯಾಗಿ ಹೊರಹೊಮ್ಮಿರುವುದು ವಿಶೇಷವೆನಿಸಿದೆ.
ಮಧ್ಯ ಪ್ರದೇಶದ 25 ವರ್ಷದ ರುಬಿನಾ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಎಸ್ಎಚ್1 ವಿಭಾಗದ ಫೈನಲ್ನಲ್ಲಿ 211.1 ಅಂಕ ಕಲೆಹಾಕುವ ಮೂಲಕ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಅರ್ಹತಾ ಸುತ್ತಿನಲ್ಲಿ 7ನೇ ಸ್ಥಾನ ಪಡೆದಿದ್ದ ರುಬಿನಾ, ಅಗ್ರ 8 ಶೂಟರ್ಗಳ ಫೈನಲ್ನಲ್ಲಿ ಅಮೋಘ ನಿರ್ವಹಣೆ ತೋರಿಸಿದರು. ರುಬಿನಾ ಪ್ಯಾರಾಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಪಿಸ್ತೂಲ್ ಶೂಟರ್ ಆಗಿದ್ದಾರೆ. ಇರಾನ್ನ ಜವನ್ಮರ್ಡಿ ಸರೇಹ್ (236.8) ಸತತ 3ನೇ ಬಾರಿ ಸ್ವರ್ಣ ಪದಕ ಒಲಿಸಿಕೊಂಡರೆ, ಟರ್ಕಿಯ ಒಜ್ಗನ್ ಐಸೆಲ್ (231.1) ರಜತ ಪದಕ ಗೆದ್ದುಕೊಂಡರು.
ಕಳೆದ ವರ್ಷ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲೂ ಅವರು ಕಂಚಿನ ಪದಕ ಗೆದ್ದಿದ್ದರು.
ಮೆಕ್ಯಾನಿಕ್ ಪುತ್ರಿಯಾಗಿರುವ ರುಬಿನಾ, ಜನಿಸುವಾಗಲೇ ಕಾಲಿನ ಊನತೆ ಹೊಂದಿದ್ದರು. ಒಲಿಂಪಿಕ್ಸ್ ಪದಕ ವಿಜೇತ ಶೂಟರ್ ಗಗನ್ ನಾರಂಗ್ ಸ್ಫೂರ್ತಿಯಲ್ಲಿ ಅವರು ಶೂಟಿಂಗ್ನಲ್ಲಿ ತೊಡಗಿಸಿಕೊಂಡಿದ್ದರು. 3 ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲೂ ಸ್ಪರ್ಧಿಸಿದ್ದ ಅವರು 7ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು.