

ಪ್ಯಾರಿಸ್: ಭಾರತದ ಪ್ಯಾರಾ ಶೂಟರ್ ಅವನಿ ಲೇಖರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಐತಿಹಾಸಿಕ ಸ್ವರ್ಣ ಪದಕದ ಸಾಧನೆ ಮಾಡಿದ್ದಾರೆ. ಕೂಟದ ಕ್ರೀಡಾಸ್ಪರ್ಧೆಯ 2ನೇ ದಿನವಾದ ಶುಕ್ರವಾರ ಮಹಿಳೆಯರ 10 ಮೀ. ಏರ್ ರೈಫಲ್ (ಎಸ್ಎಚ್1) ವಿಭಾಗದಲ್ಲಿ ಪ್ಯಾರಾಲಿಂಪಿಕ್ಸ್ ದಾಖಲೆಯೊಂದಿಗೆ ಜೈಪುರದ ಅವನಿ ಲೇಖರ ಸ್ವರ್ಣ ಪದಕ ಗೆದ್ದುಕೊಂಡರು. ಈ ಮೂಲಕ ಪ್ಯಾರಾಲಿಂಪಿಕ್ಸ್ನಲ್ಲಿ ಅವಳಿ ಸ್ವರ್ಣ ಪದಕ ಗೆದ್ದ ಮೊಟ್ಟಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ. ಅವರು 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲೂ ಸ್ವರ್ಣ ಪದಕ ಗೆದ್ದುಕೊಂಡಿದ್ದರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲದೆ ನಿರಾಸೆ ಅನುಭವಿಸಿದ್ದ ಭಾರತ, ಪ್ಯಾರಾಲಿಂಪಿಕ್ಸ್ನಲ್ಲಿ 2ನೇ ದಿನವೇ ಚಿನ್ನ ಗೆದ್ದು "ಜನಮನಗಣ' ಮೊಳಗಿಸುವಲ್ಲಿ ಯಶಸ್ವಿಯಾಗಿದೆ. ಅವನಿ ಮತ್ತು ಕಂಚು ವಿಜೇತ ಮೋನಾ ಅಗರ್ವಾಲ್ ಮಾಜಿ ಶೂಟರ್ ಹಾಗೂ ಕನ್ನಡತಿ ಸುಮಾ ಶಿರೂರ್ ಮಾರ್ಗದರ್ಶನದಲ್ಲಿ ಪ್ಯಾರಾಲಿಂಪಿಕ್ಸ್ ಪದಕ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಚಿಕ್ಕಬಳ್ಳಾಪುರ ಮೂಲದ ಸುಮಾ, ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಪ್ಯಾರಾಲಿಂಪಿಕ್ಸ್ನಲ್ಲೂ ಭಾರತದ ರೈಫಲ್ ಶೂಟಿಂಗ್ ತಂಡದ ಕೋಚ್ ಆಗಿದ್ದಾರೆ. ಒಲಿಂಪಿಯನ್ ಸುಮಾ ಏಷ್ಯನ್ ಮತ್ತು ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆಯೂ ಆಗಿದ್ದಾರೆ. ಸದ್ಯ ಪತಿ ಸಿದ್ಧಾರ್ಥ್ ಶಿರೂರ್ ಜತೆ ಮುಂಬೈನಲ್ಲಿ ನೆಲೆಸಿದ್ದು, ಲಕ್ಷ್ಯ ಶೂಟಿಂಗ್ ಕ್ಲಬ್ ಮೂಲಕ ಯುವ ಶೂಟರ್ಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಟೋಕಿಯೊದಲ್ಲೂ ಅವನಿ ಅವಳಿ ಪದಕ ಗೆಲುವಿಗೆ ಮಾರ್ಗದರ್ಶನ ನೀಡಿದ್ದ 50 ವರ್ಷದ ಸುಮಾ, 2022ರಲ್ಲಿ ದ್ರೋಣಾಚಾರ್ಯ ಪ್ರಶಸ್ತಿಗೂ ಭಾಜನರಾಗಿದ್ದರು.
22 ವರ್ಷದ ಅವನಿ ಶುಕ್ರವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ 249.7 ಅಂಕ ಕಲೆಹಾಕಿದರು. ಈ ಮೂಲಕ 3 ವರ್ಷಗಳ ಹಿಂದೆ ಟೋಕಿಯೊದಲ್ಲಿ ತಾನೇ ನಿರ್ಮಿಸಿದ್ದ ಕೂಟದಾಖಲೆಯನ್ನು (249.6) ಮುರಿದರು. ಜಪಾನ್ನ ಯುನ್ರಿ ಲೀ (246.8) ಬೆಳ್ಳಿ ಜಯಿಸಿದರೆ, ಮೋನಾ ಅಗರ್ವಾಲ್ 228.7 ಅಂಕಗಳೊಂದಿಗೆ ಕಂಚಿನ ಪದಕ ಒಲಿಸಿಕೊಂಡರು. 11ನೇ ವಯಸ್ಸಿನಲ್ಲೇ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಸೊಂಟದ ಕೆಳಗೆ ಪಾರ್ಶ್ವವಾಯುವಿಗೆ ತುತ್ತಾಗಿರುವ ಅವನಿ ತನ್ನ ಓಡಾಟಕ್ಕೆ ಗಾಲಿ ಕುರ್ಚಿಯನ್ನೇ ಆಶ್ರಯಿಸಿದ್ದಾರೆ. ಎಸ್ಎಸ್1 ವರ್ಗವು ತಮ್ಮ ತೋಳು, ಕಾಲುಗಳ ಚಲನೆಯ ಮೇಲೆ ಪರಿಣಾಮ ಬೀರಿದ ಅಥವಾ ಕೈಕಾಲುಗಳನ್ನು ಹೊಂದಿರದ ಕ್ರೀಡಾಪಟುಗಳಿಗೆ ಸೀಮಿತವಾಗಿದೆ.
ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ ಅವನಿ ಅರ್ಹತಾ ಸುತ್ತಿನಲ್ಲಿ 625.8 ಅಂಕ ಗಳಿಸಿ 2ನೇ ಸ್ಥಾನದಲ್ಲಿದ್ದರು. ಅರ್ಹತಾ ಸುತ್ತಿನಲ್ಲಿ 627.5 ಅಂಕಗಳೊಂದಿಗೆ ಪ್ಯಾರಾಲಿಂಪಿಕ್ಸ್ ದಾಖಲೆ ಬರೆದು ಅಗ್ರಸ್ಥಾನ ಗಳಿಸಿದ ಯೂಕ್ರೇನ್ನ ಇರಿನಾ ಸ್ಚೆಟ್ನಿಕ್ ಫೈನಲ್ನಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟರು. 2 ಬಾರಿಯ ವಿಶ್ವಕಪ್ ಸ್ವರ್ಣ ವಿಜೇತೆ ಮೋನಾಗೆ ಇದು ಚೊಚ್ಚಲ ಪ್ಯಾರಾಲಿಂಪಿಕ್ಸ್ ಆಗಿದ್ದು, 623.1 ಅಂಕಗಳೊಂದಿಗೆ ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನ ಗಳಿಸಿದ್ದರು.
ಅವನಿಗೆ ತ್ರಿವಳಿ ಪದಕ ಸಾಧನೆ ಅವಕಾಶ!
ಟೋಕಿಯೊದಲ್ಲಿ ಅವಳಿ ಪದಕ (1 ಚಿನ್ನ, 1 ಕಂಚು) ಸಾಧನೆ ಮಾಡಿದ್ದ ಅವನಿ ಲೇಖರ ಈಗ ಪ್ಯಾರಾಲಿಂಪಿಕ್ಸ್ ಪದಕಗಳ ಸಂಖ್ಯೆಯನ್ನು 3ಕ್ಕೇರಿಸಿಕೊಂಡಿದ್ದಾರೆ. ಅವರಿಗೆ ಹಾಲಿ ಕೂಟದಲ್ಲಿ ಇನ್ನೂ 2 ಪದಕ ಜಯಿಸುವ ಅವಕಾಶವಿದೆ. ಅವನಿ ಇನ್ನು ಪ್ಯಾರಿಸ್ನಲ್ಲಿ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್ ಮತ್ತು ಮಿಶ್ರ 10 ಮೀ. ಏರ್ ರೈಫಲ್ ಪ್ರೊನ್ ವಿಭಾಗದಲ್ಲೂ ಸ್ಪರ್ಧಿಸಲಿದ್ದಾರೆ.