

ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಬಾಲ್ಯದ ಕೋಚ್ ರಮಾಕಾಂತ್ ಆಚ್ರೆಕರ್ ಪ್ರತಿಮೆಯನ್ನು ಶಿವಾಜಿ ಪಾರ್ಕ್ನಲ್ಲಿ ಸ್ಥಾಪಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಇದನ್ನು ಸಚಿನ್ ತೆಂಡುಲ್ಕರ್ ಸಾಮಾಜಿಕ ಜಾಲತಾಣದಲ್ಲಿ ಸ್ವಾಗತಿಸಿದ್ದಾರೆ.
ಶಿವಾಜಿ ಪಾರ್ಕ್ನ ಗೇಟ್ ನಂ. 5ರ ಬಳಿ 6 ಅಡಿ ಎತ್ತರದ ರಮಾಕಾಂತ್ ಆಚ್ರೆಕರ್ ಪ್ರತಿಮೆ ಸ್ಥಾಪಿಸುವ ಪ್ರಸ್ತಾಪವನ್ನು ಮಹಾರಾಷ್ಟ್ರದ ನಗರಾಭಿವೃದ್ಧಿ ಸಚಿವಾಲಯ ಬುಧವಾರ ಅಂಗೀಕರಿಸಿದೆ. ಇದೇ ಶಿವಾಜಿ ಪಾರ್ಕ್ನಲ್ಲಿ ಆಚ್ರೆಕರ್, ಸಚಿನ್ ತೆಂಡುಲ್ಕರ್ಗೆ ಬಾಲ್ಯದಲ್ಲಿ ತರಬೇತಿ ನೀಡಿದ್ದರು.
"ಆಚ್ರೆಕರ್ ಸರ್ ನನ್ನ ಮತ್ತು ಇತರ ಹಲವರ ಜೀವನದಲ್ಲಿ ಅಪಾರ ಪ್ರಭಾವ ಬೀರಿದ್ದಾರೆ. ಅವರ ಎಲ್ಲ ಶಿಷ್ಯರ ಪರವಾಗಿ ನಾನು ಮಾತನಾಡುತ್ತಿದ್ದೇನೆ. ಶಿವಾಜಿ ಪಾರ್ಕ್ ಸುತ್ತವೇ ಅವರ ಬಹುತೇಕ ಜೀವನ ಕಳೆದಿದೆ. ಅವರು ಸದಾ ಶಿವಾಜಿ ಪಾರ್ಕ್ನಲ್ಲೇ ಇರಲು ಬಯಸುತ್ತಿದ್ದರು. ಅವರ ಕರ್ಮಭೂಮಿಯಲ್ಲಿ ಈಗ ಪ್ರತಿಮೆ ಸ್ಥಾಪಿಸಲು ಮುಂದಾಗಿರುವ ಸರ್ಕಾರದ ನಿರ್ಧಾರ ನನಗೆ ಅಪಾರ ಖುಷಿ ತಂದಿದೆ' ಎಂದು ಸಚಿನ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಸಚಿನ್ ಜತೆಗೆ ವಿನೋದ್ ಕಾಂಬ್ಳಿ, ಪ್ರವಿಣ್ ಆಮ್ರೆ, ಸಂಜಯ್ ಬಂಗಾರ್, ಅಜಿತ್ ಅಗರ್ಕರ್, ಚಂದ್ರಕಾಂತ್ ಪಂಡಿತ್ ಸಹಿತ ಆಚ್ರೆಕರ್ರಿಂದ ತರಬೇತಿ ಪಡೆದ ಪಡೆದ ಒಟ್ಟು 12 ಆಟಗಾರರು ಭಾರತ ತಂಡದ ಪರ ಆಡಿದ್ದಾರೆ. 1990ರಲ್ಲಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಲಭಿಸಿತ್ತು. ಆಚ್ರೆಕರ್ 2019ರಲ್ಲಿ 87ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು.