ನವದೆಹಲಿ: ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಜಾಗತಿಕ ಕ್ರಿಕೆಟ್ ಆಡಳಿತ ಸಂಸ್ಥೆ ಐಸಿಸಿಯ ನೂತನ ಚೇರ್ಮನ್ ಆಗಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಐಸಿಸಿ ಮಂಗಳವಾರ ಅಧಿಕೃತ ಘೋಷಣೆ ಹೊರಡಿಸಿದೆ. 35 ವರ್ಷದ ಜಯ್ ಷಾ ಐಸಿಸಿ ಮುಖ್ಯಸ್ಥ ಹುದ್ದೆಗೇರಿದ ಅತ್ಯಂತ ಕಿರಿಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುಜರಾತ್ನ ಜಯ್ ಷಾ 2025ರ ಸೆಪ್ಟೆಂಬರ್ವರೆಗೆ ಬಿಸಿಸಿಐ ಹುದ್ದೆಯ ಅವಧಿ ಹೊಂದಿದ್ದರು. ಆದರೆ ಇದೀಗ ಅದಕ್ಕೆ ಒಂದು ವರ್ಷ ಮುನ್ನವೇ ಅಧಿಕಾರ ತ್ಯಜಿಸಬೇಕಾಗಿದೆ. ದೆಹಲಿ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿರುವ ಮಾಜಿ ಸಚಿವ ದಿವಂಗತ ಅರುಣ್ ಜೇಟ್ಲಿ ಪುತ್ರ ರೋಹನ್ ಜೇಟ್ಲಿ ಬಿಸಿಸಿಐನ ಹೊಸ ಕಾರ್ಯದರ್ಶಿಯಾಗುವ ನಿರೀಕ್ಷೆ ಇದೆ.
ಚೇರ್ಮನ್ ಹುದ್ದೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೇದಿನವಾಗಿತ್ತು ಮತ್ತು ಜಯ್ ಷಾ ಅವರೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿ ಕಾರಣ ಅವಿರೋಧವಾಗಿ ಆಯ್ಕೆಯಾದರು. ಹಾಲಿ ಚೇರ್ಮನ್ ಗ್ರೇಗ್ ಬಾಕ್ಲೇರ್ ಅವಧಿ ನವೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಡಿಸೆಂಬರ್ 1ರಂದು ಐಸಿಸಿ ಅಧಿಕಾರ ಸ್ವೀಕರಿಸುವುದಕ್ಕೆ ಮುನ್ನ ಜಯ್ ಷಾ ಬಿಸಿಸಿಐ ಕಾರ್ಯದರ್ಶಿ ಪದವಿಯೊಂದಿಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನ ಅಧ್ಯಕ್ಷ ಸ್ಥಾನವನ್ನೂ ತ್ಯಜಿಸಬೇಕಾಗುತ್ತದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್ನಲ್ಲಿ ನಡೆಯುವ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ (ಎಜಿಎಂ) ಜಯ್ ಷಾ ಕಾರ್ಯದರ್ಶಿ ಹುದ್ದೆ ತ್ಯಜಿಸುವ ನಿರೀಕ್ಷೆ ಇದೆ. ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ರರಾಗಿರುವ ಜಯ್ ಷಾ, 2019ರ ಅಕ್ಟೋಬರ್ನಿಂದ ಬಿಸಿಸಿಐ ಕಾರ್ಯದರ್ಶಿ ಮತ್ತು 2021ರ ಜನವರಿಯಿಂದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿದ್ದರು. ಐಸಿಸಿ ಚೇರ್ಮನ್ ಆಗಿ ಜಯ್ ಷಾ 2 ವರ್ಷ ಅಂದರೆ 2026ರ ನವೆಂಬರ್ 30ರವರೆಗೆ ಅವಧಿ ಹೊಂದಿರುತ್ತಾರೆ. ಅವರು 2028ರವರೆಗೂ ಹುದ್ದೆಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.
ಬಿಸಿಸಿಐ ಹುದ್ದೆಗೇರುವ ಮುನ್ನ ಗುಜರಾತ್ ಕ್ರಿಕೆಟ್ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿದ್ದ ಜಯ್ ಷಾ, ಬಿಸಿಸಿಐ ಕಾರ್ಯದರ್ಶಿಯಾಗಿ 2020&21ರಲ್ಲಿ ಕರೊನಾ ಹಾವಳಿಯ ನಡುವೆ ಐಪಿಎಲ್ ಆಯೋಜಿಸುವಲ್ಲಿ ಮತ್ತು 2022ರಲ್ಲಿ ಐಪಿಎಲ್ ಪ್ರಸಾರ ಹಕ್ಕು ದಾಖಲೆಯ 48,390 ಕೋಟಿ ರೂ.ಗೆ ಮಾರಾಟ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಐಪಿಎಲ್ ಮಾದರಿಯಲ್ಲಿ ಮಹಿಳೆಯರಿಗೆ ಯಶಸ್ವಿಯಾಗಿ ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಿಸಿದ್ದು, ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟಿಗರ ವೇತನ ಏರಿಕೆ, ಟೆಸ್ಟ್ ಕ್ರಿಕೆಟಿಗರಿಗೆ ವಿಶೇಷ ಭತ್ಯೆ ಮುಂತಾದ ಮಹತ್ವದ ಕ್ರಮಗಳನ್ನೂ ಕೈಗೊಂಡಿದ್ದಾರೆ.
ದೆಹಲಿ ಕ್ರಿಕೆಟ್ ಆಡಳಿತದಲ್ಲಿ ಗಮನಸೆಳೆದಿರುವ ರೋಹನ್ ಜೇಟ್ಲಿ
ಮಾಜಿ ಕೇಂದ್ರ ಸಚಿವ, ದಿವಂಗತ ಅರುಣ್ ಜೇಟ್ಲಿ ಪುತ್ರರಾಗಿರುವ ರೋಹನ್ ಜೇಟ್ಲಿ ಪ್ರಸಕ್ತ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷರಾಗಿದ್ದಾರೆ. ಜಯ್ ಷಾ ಐಸಿಸಿಯತ್ತ ಹೋದರೆ ಬಿಸಿಸಿಐ ಆಡಳಿತದಲ್ಲಿ ಅಧ್ಯಕ್ಷ ಪದವಿಗಿಂತಲೂ ಅತ್ಯಂತ ಪ್ರಭಾವಿ ಎನಿಸಿರುವ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಳ್ಳುವವರು ಯಾರು ಎಂಬ ಚರ್ಚೆ ಕಳೆದ ಕೆಲದಿನಗಳಿಂದ ನಡೆಯುತ್ತ ಬಂದಿತ್ತು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಆಶಿಶ್ ಶೆಲಾರ್ ಮತ್ತು ಐಪಿಎಲ್ ಚೇರ್ಮನ್ ಅರುಣ್ ಧುಮಾಲ್ ಹೆಸರುಗಳು ಈ ಮುನ್ನ ರೇಸ್ನಲ್ಲಿದ್ದವು. ಈಗ ರೋಹನ್ ಜೇಟ್ಲಿ ಹೆಸರು ಮುಂಚೂಣಿಗೆ ಬಂದಿದೆ. ತಂದೆಯಂತೆ ವಕೀಲರಾಗಿರುವ 35 ವರ್ಷದ ರೋಹನ್ ಜೇಟ್ಲಿ, ರಾಜಕೀಯದಿಂದ ಸ್ವಲ್ಪ ದೂರವಿದ್ದರೂ, ತಂದೆಯಂತೆ ಕ್ರಿಕೆಟ್ ಆಡಳಿತದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. 2023ರಿಂದ ಡಿಡಿಸಿಎ ಅಧ್ಯಕ್ಷರಾಗಿರುವ ರೋಹನ್, ಬಿಸಿಸಿಐನಲ್ಲೂ ಹೆಚ್ಚಿನ ಪ್ರಭಾವ ಹೊಂದಿದ್ದಾರೆ. ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ಆರಂಭಿಸುವ ಮೂಲಕ ಉತ್ತಮ ಸಂಟನಾ ಕೌಶಲವನ್ನು ಪ್ರದರ್ಶಿಸಿದ್ದಾರೆ. ಹೀಗಾಗಿ ರೋಹನ್ ಜೇಟ್ಲಿ ಅವರನ್ನು ಮುಂದಿನ ಕಾರ್ಯದರ್ಶಿಯಾಗಿ ಆರಿಸಲು ಬಿಸಿಸಿಐನಲ್ಲಿ ಒಲವು ಮೂಡಿದೆ ಎನ್ನಲಾಗಿದೆ.