

ನವದೆಹಲಿ: ಭಾರತದ ಅವಳಿ ವಿಶ್ವಕಪ್ ಗೆಲುವಿನ ರೂವಾರಿ ಹಾಗೂ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ. ಸದ್ಯ ಯುವರಾಜ್ ಜತೆಗೆ ಡೆಲ್ಲಿ ಫ್ರಾಂಚೈಸಿ ಮಾತುಕತೆ ನಡೆಸುತ್ತಿದ್ದು, ಶೀಘ್ರದಲ್ಲೇ ಅಂತಿಮ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ. ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಡೆಲ್ಲಿ ತಂಡದ ನಿರ್ದೇಶಕರಾಗಿದ್ದು, ಯುವಿ ಸೇರ್ಪಡೆಗೊಂಡರೆ ಡೆಲ್ಲಿ ತಂಡ ಹೊಸ ಬಲ ಪಡೆದುಕೊಂಡಂತಾಗುತ್ತದೆ.
ಕಳೆದ ಕೆಲ ಆವೃತ್ತಿಗಳಿಂದ ಕೋಚ್ ಆಗಿದ್ದ ಆಸ್ಟ್ರೆಲಿಯಾದ ರಿಕಿ ಪಾಂಟಿಂಗ್ರನ್ನು ಡೆಲ್ಲಿ ತಂಡ ಇತ್ತೀಚೆಗೆ ಕೈಬಿಟ್ಟಿದ್ದು, ಹೊಸ ಕೋಚ್ ಹುಡುಕಾಟದಲ್ಲಿದೆ. ಈ ಮುನ್ನ ಯುವರಾಜ್ರನ್ನು ಕೋಚ್ ಆಗಿ ಸೇರ್ಪಡೆಗೊಳಿಸಲು ಗುಜರಾತ್ ಟೈಟಾನ್ಸ್ ತಂಡ ಆಸಕ್ತಿ ತೋರಿತ್ತು. ಆದರೆ ಈಗ ಆಶಿಶ್ ನೆಹ್ರಾ ಅವರನ್ನೇ ಕೋಚ್ ಆಗಿ ಮುಂದುವರಿಸಲು ಗುಜರಾತ್ ತಂಡ ಬಯಸಿದೆ ಎನ್ನಲಾಗಿದೆ.
42 ವರ್ಷದ ಯುವರಾಜ್ಗೆ ಈ ಹಿಂದೆ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇಲ್ಲ. ಆದರೆ ಶುಭಮಾನ್ ಗಿಲ್, ಅಭಿಷೇಕ್ ಶರ್ಮ ಸಹಿತ ಪಂಜಾಬ್ ತಂಡದ ಕೆಲ ಪ್ರತಿಭಾವಂತ ಕ್ರಿಕೆಟಿಗರು ಇವರ ಮಾರ್ಗದರ್ಶನದಲ್ಲೇ ಪಳಗಿದ್ದಾರೆ ಎಂಬುದು ಗಮನಾರ್ಹ. ಜತೆಗೆ ಯುವಿ ಭಾರತ ಪರ 40 ಟೆಸ್ಟ್, 304 ಏಕದಿನ ಮತ್ತು 58 ಟಿ20 ಪಂದ್ಯ ಆಡಿದ ಅನುಭವ ಹೊಂದಿದ್ದಾರೆ.
ಡೆಲ್ಲಿ ತಂಡ 2020ರಲ್ಲಿ ಐಪಿಎಲ್ ಫೈನಲ್ಗೇರಿ ರನ್ನರ್ಅಪ್ ಆಗಿತ್ತು. ಆದರೆ 2022ರಿಂದ ಕಳೆದ 3 ಆವೃತ್ತಿಗಳಲ್ಲಿ ಡೆಲ್ಲಿ ತಂಡ ಪ್ಲೇಆಫ್ ಹಂತಕ್ಕೇರಲು ವಿಫಲವಾಗಿದೆ.