

Joe Root: ಟೀಮ್ ಇಂಡಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಗೆಲುವಿನತ್ತ ಮುಖ ಮಾಡಿರುವ ಆಂಗ್ಲರ ಪಡೆಗೆ ಓಪನಿಂಗ್ ಬ್ಯಾಟರ್ಸ್ ಉತ್ತಮ ರನ್‌ಗಳ ಕೊಡುಗೆ ನೀಡಿದ್ದಾರೆ. ಇನ್ನು ಮೂರನೇ ದಿನದಾಟದಲ್ಲಿ ಕ್ರೀಸ್ಗೆ ಅಂಟಿ ನಿಂತಿರುವ ಇಂಗ್ಲೆಂಡ್ನ ಸ್ಟಾರ್ ಬ್ಯಾಟರ್ ಜೋ ರೂಟ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ.
ಈ ಅಪರೂಪದ ಸಾಧನೆಗೈಯುವ ಮೂಲಕ ರೂಟ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ದಂತಕಥೆ ಜ್ಯಾಕ್ ಕಾಲಿಸ್ ಮತ್ತು ಟೀಮ್ ಇಂಡಿಯಾದ ವಾಲ್, ರಾಹುಲ್ ದ್ರಾವಿಡ್ ನಿರ್ಮಿಸಿದ್ದ ದಾಖಲೆಯನ್ನು ಇದೀಗ ರೂಟ್ ಮುರಿದಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 31 ರನ್ ಗಳಿಸುವ ಮೂಲಕ ರೂಟ್ ಈ ಮೈಲಿಗಲ್ಲು ತಲುಪಿದ್ದಾರೆ.
ದ್ರಾವಿಡ್, 164 ಟೆಸ್ಟ್ ಪಂದ್ಯಗಳಲ್ಲಿ 52.31 ಸರಾಸರಿಯಲ್ಲಿ 13,288 ರನ್ ಗಳಿಸಿದ್ದರೆ, ಜ್ಯಾಕ್ ಕಾಲಿಸ್, 166 ಪಂದ್ಯಗಳಲ್ಲಿ 55.37 ಸರಾಸರಿಯಲ್ಲಿ 13,289 ರನ್ ಗಳಿಸಿದ್ದಾರೆ. ಇನ್ನು ಇವರಿಬ್ಬರ ದಾಖಲೆಯನ್ನು ಬ್ರೇಕ್ ಮಾಡಿರುವ ಜೋ ರೂಟ್, ಆಡಿರುವ 157 ಟೆಸ್ಟ್ ಪಂದ್ಯಗಳಲ್ಲಿ ದಿಗ್ಗಜರ ದಾಖಲೆಯನ್ನು ಸರಿಗಟ್ಟಿದ್ದಾರೆ ಎಂಬುದು ಗಮನಾರ್ಹ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಟೀಮ್ ಇಂಡಿಯಾದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ.
200 ಟೆಸ್ಟ್‌ಗಳಲ್ಲಿ ಸಚಿನ್, 53.78 ಸರಾಸರಿಯಲ್ಲಿ 15,921 ರನ್ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ಆಸ್ಪ್ರೇಲಿಯಾ ಮಾಜಿ ಕ್ಯಾಪ್ಟನ್, ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ 13,378 ರನ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು ಜೋ ರೂಟ್ ಕೇವಲ 88 ರನ್‌ಗಳ ಹಿಂದಿದ್ದಾರೆ ಅಷ್ಟೇ. ಇನ್ನು ಉಳಿದಿರುವ ಒಂದು ಪಂದ್ಯ ಅಥವಾ ಇಂದಿನ ಪಂದ್ಯದ ಕೊನೆಯ ವೇಳೆಗೆ ಈ ಗುರಿಯನ್ನೂ ಕೂಡ ರೂಟ್ ತಲುಪುವ ಸಾಧ್ಯತೆಗಳು ಹೆಚ್ಚಿವೆ.
1. ಸಚಿನ್ ತೆಂಡೂಲ್ಕರ್ (ಭಾರತ) - 200 ಪಂದ್ಯಗಳಲ್ಲಿ 15,921 ರನ್
2. ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 168 ಪಂದ್ಯಗಳಲ್ಲಿ 13,378 ರನ್
3. ಜೋ ರೂಟ್ (ಇಂಗ್ಲೆಂಡ್) - 157 ಪಂದ್ಯಗಳಲ್ಲಿ 13,290* ರನ್
4. ಜ್ಯಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) - 166 ಪಂದ್ಯಗಳಲ್ಲಿ 13,289 ರನ್
5. ರಾಹುಲ್ ದ್ರಾವಿಡ್ (ಭಾರತ) - 164 ಪಂದ್ಯಗಳಲ್ಲಿ 13,288 ರನ್,(ಏಜೆನ್ಸೀಸ್).