ಕೇಪ್​ಟೌನ್​ನಲ್ಲಿ ಧೋನಿ ಸಾಧನೆ ಸರಿಗಟ್ಟುವರೇ ರೋಹಿತ್​ ಶರ್ಮ?

ro dho web
Published on

ಕೇಪ್​ಟೌನ್​: ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್​ ಪಂದ್ಯ ಬುಧವಾರದಿಂದ ನಡೆಯಲಿದ್ದು, ಭಾರತ ತಂಡ ಸರಣಿ ಸಮಬಲ ಸಾಧಿಸುವ ಅವಕಾಶವನ್ನಷ್ಟೇ ಹೊಂದಿದೆ.

ಭಾರತ ತಂಡ ದ. ಆಫ್ರಿಕಾದಲ್ಲಿ ಈ ಹಿಂದೆ ಆಡಿದ 8 ಟೆಸ್ಟ್​ ಸರಣಿಗಳಲ್ಲಿ 7ರಲ್ಲಿ ಸೋತಿದ್ದು, 2011-12ರಲ್ಲಿ ಏಕೈಕ ಬಾರಿ ಎಂಎಸ್​ ಧೋನಿ ಸಾರಥ್ಯದಲ್ಲಿ ಆಡಿದ ಸರಣಿಯಲ್ಲಿ ಸಮಬಲದ ಗೌರವ ಕಂಡಿತ್ತು. ಇದೀಗ ಆ ಸಾಧನೆಯನ್ನು ಸರಿಗಟ್ಟುವ ಅವಕಾಶ ಭಾರತದ ಮುಂದಿದೆ. ಇದನ್ನು ಸಾಧ್ಯವಾಗಿಸಿದರೆ, ರೋಹಿತ್​ ಶರ್ಮ ಟೆಸ್ಟ್​ ಸರಣಿ ಸೋಲಿಲ್ಲದೆ ದ. ಆಫ್ರಿಕಾದಿಂದ ನಿರ್ಗಮಿಸಿದ ಭಾರತದ 2ನೇ ನಾಯಕ ಎನಿಸಲಿದ್ದಾರೆ.

ಎಲ್ಗರ್​ಗೆ ವಿದಾಯ ಟೆಸ್ಟ್​

ಎಡಗೈ ಆರಂಭಿಕ ಡೀನ್​ ಎಲ್ಗರ್​ಗೆ ಇದು ವೃತ್ತೀಜಿವನದ 86ನೇ ಹಾಗೂ ಕೊನೇ ಟೆಸ್ಟ್​ ಪಂದ್ಯವಾಗಿರಲಿದೆ. ಇದೇ ತನ್ನ ಕೊನೇ ಸರಣಿ ಎಂದು ಈ ಮೊದಲೇ ಘೋಷಿಸಿದ್ದ 36 ವರ್ಷದ ಎಲ್ಗರ್​ಗೆ ಇದೀಗ ಕೊನೇ ಟೆಸ್ಟ್​ನಲ್ಲಿ ನಾಯಕತ್ವವೂ ಒಲಿದುಬಂದಿರುವುದು ವಿಶೇಷ. ಮೊದಲ ಟೆಸ್ಟ್​ನಲ್ಲಿ ಮೊದಲ ದಿನವೇ ಟೆಂಬಾ ಬವುಮಾ ಗಾಯಗೊಂಡ ಬಳಿಕ ಹಂಗಾಮಿ ನಾಯಕರಾಗಿ ಸಮರ್ಥವಾಗಿ ತಂಡವನ್ನು ಮುನ್ನಡೆಸಿದ್ದ ಎಲ್ಗರ್​ಗೆ ಈ ಹಿಂದೆಯೂ 17 ಟೆಸ್ಟ್​ಗಳಲ್ಲಿ ದ. ಆಫ್ರಿಕಾವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ಭಾರತ ವರ್ಷವಿಡೀ ಟೆಸ್ಟ್​!

ಇದು ಟಿ20 ವಿಶ್ವಕಪ್​ ಒಳಗೊಂಡಿರುವ ವರ್ಷವಾದರೂ, ಭಾರತ ತಂಡ ಈ ವರ್ಷ ಟಿ20, ಏಕದಿನಕ್ಕಿಂತ ಅಧಿಕ ಟೆಸ್ಟ್​ ಪಂದ್ಯವನ್ನೇ ಆಡಲಿದೆ. ಭಾರತ ಈ ವರ್ಷ ಆಡಲಿರುವ 15 ಟೆಸ್ಟ್​ಗಳಲ್ಲಿ ಇದು ಮೊದಲ ಟೆಸ್ಟ್​ ಆಗಿದೆ. ನಂತರ ಇಂಗ್ಲೆಂಡ್​ ವಿರುದ್ಧ ತವರಿನಲ್ಲಿ 5 ಟೆಸ್ಟ್​ ಪಂದ್ಯ ಆಡಲಿದ್ದರೆ, ತವರಿನಲ್ಲೇ ಮತ್ತೆ ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಮತ್ತು ನ್ಯೂಜಿಲೆಂಡ್​ ವಿರುದ್ಧ 3 ಟೆಸ್ಟ್​ ಆಡಲಿದೆ. ವರ್ಷಾಂತ್ಯಕ್ಕೆ 5 ಪಂದ್ಯಗಳ ಟೆಸ್ಟ್​ ಸರಣಿಗಾಗಿ ಆಸ್ಟ್ರೆಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪೈಕಿ ಸರಣಿಯ ಕೊನೇ ಟೆಸ್ಟ್​ 2025ರ ಆರಂಭದಲ್ಲಿ ನಡೆಯಲಿದೆ. ಇಂಗ್ಲೆಂಡ್​ (17) ಹಾಲಿ ವರ್ಷ ಭಾರತಕ್ಕಿಂತ ಅಧಿಕ ಟೆಸ್ಟ್​ ಆಡಲಿರುವ ತಂಡವಾಗಿದೆ.

ರ್ಯಾಂಕಿಂಗ್​ನಲ್ಲಿ ಕುಸಿತ ಭೀತಿ

ಭಾರತ ತಂಡ ಸದ್ಯ ಐಸಿಸಿಯ ಟಿ20, ಏಕದಿನ, ಟೆಸ್ಟ್​ ರ್ಯಾಂಕಿಂಗ್​ನಲ್ಲಿ ನಂ. 1 ಪಟ್ಟದಲ್ಲಿದೆ. ಆದರೆ ಭಾರತ ತಂಡ ಕೊನೇ ಟೆಸ್ಟ್​ನಲ್ಲಿ ಗೆದ್ದರೂ, ಐಸಿಸಿ ಟೆಸ್ಟ್​ ರ್ಯಾಂಕಿಂಗ್​ನಲ್ಲಿ 2ನೇ ಸ್ಥಾನಕ್ಕೆ ಕುಸಿಯಲಿದ್ದು, ಆಸ್ಟ್ರೆಲಿಯಾ ಅಗ್ರಸ್ಥಾನಕ್ಕೇರಲಿದೆ. ಒಂದು ವೇಳೆ ಭಾರತ ಕೊನೇ ಟೆಸ್ಟ್​ನಲ್ಲಿ ಕನಿಷ್ಠ ಡ್ರಾ ಸಾಧಿಸಿ ಸರಣಿ ಸೋತರೂ ರ್ಯಾಂಕಿಂಗ್​ನಲ್ಲಿ 3ನೇ ಸ್ಥಾನಕ್ಕೆ ಕುಸಿಯಲಿದೆ. ಆಗ ಇಂಗ್ಲೆಂಡ್​ 2ನೇ ಸ್ಥಾನಕ್ಕೇರಲಿದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಅಂಕಪಟ್ಟಿಯಲ್ಲೂ ಭಾರತ ಮೇಲೇರಲು ಗೆಲುವು ಅಗತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net