

ಸೆಂಚುರಿಯನ್: ತವರಿನ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನಿರಾಸೆಯನ್ನು ಬದಿಗಿಟ್ಟು ಹರಿಣಗಳ ನಾಡಿನಲ್ಲಿ ಹೊಸ ಇತಿಹಾಸ ಬರೆಯಲು ರೋಹಿತ್ ಶರ್ಮ ಬಳಗ ಸಜ್ಜಾಗಿದೆ. ಆತಿಥೇಯ ದ. ಆಫ್ರಿಕಾ ವಿರುದ್ಧ ಭಾರತ ತಂಡ ಮಂಗಳವಾರದಿಂದ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದ್ದು, ವೇಗದ ಬೌಲರ್ಗಳ ಪಾಲಿಗೆ ಸ್ವರ್ಗವೆನಿಸಿದ ಸೂಪರ್ಸ್ಪೋರ್ಟ್ ಪಾರ್ಕ್ನಲ್ಲಿ "ಬಾಕ್ಸಿಂಗ್ ಡೇ'ಯ ಮೊದಲ ಕಾದಾಟ ನಡೆಯಲಿದೆ. ದ. ಆಫ್ರಿಕಾ ನೆಲದಲ್ಲಿ ಚೊಚ್ಚಲ ಸರಣಿ ಗೆಲುವಿನೊಂದಿಗೆ 31 ವರ್ಷಗಳ ಕಾಯುವಿಕೆ ಕೊನೆಗೊಳಿಸುವುದು ಟೀಮ್ ಇಂಡಿಯಾದ ಹಂಬಲವಾಗಿದೆ.
ಭಾರತ ಇದುವರೆಗೆ ಟೆಸ್ಟ್ ಕ್ರಿಕೆಟ್ ಆಡುವ ಬಹುತೇಕ ಎಲ್ಲ ದೇಶಗಳಲ್ಲಿ ಸರಣಿ ಗೆದ್ದಿದ್ದು, ದ. ಆಫ್ರಿಕಾ ಒಂದೇ ಬಾಕಿ ಉಳಿದಿದೆ. ಈ ಬಾರಿ ಆ ಕನಸನ್ನೂ ನನಸಾಗಿಸುವ ಅತ್ಯುತ್ತಮ ಅವಕಾಶ ಟೀಮ್ ಇಂಡಿಯಾದ ಮುಂದಿದೆ. ಅಭಿಮಾನಿಗಳಿಗೆ ವಿಶ್ವಕಪ್ ಕೈತಪ್ಪಿದ ನೋವು ಮರೆಸಲು ರೋಹಿತ್ ಶರ್ಮ ಬಳಗಕ್ಕೆ ಇದು ಅತ್ಯುತ್ತಮ ಅವಕಾಶವೆನಿಸಿದೆ. ವಿಶ್ವಕಪ್ ನಂತರವೂ ಹುದ್ದೆಯಲ್ಲಿ ಮುಂದುವರಿದಿರುವ ರಾಹುಲ್ ದ್ರಾವಿಡ್ಗೂ ಆಟಗಾರ, ನಾಯಕನಾಗಿ ಸಾಧ್ಯವಾಗದ್ದನ್ನು ಕೋಚ್ ಆಗಿ ಸಾಧಿಸುವ ಅವಕಾಶವಿದೆ. ಕಳೆದ 2 ಪ್ರವಾಸಗಳಲ್ಲಿ ಸವಾಲಿನ ಪಿಚ್ನಲ್ಲೇ ತಲಾ 1 ಟೆಸ್ಟ್ ಗೆದ್ದಿರುವ ಭಾರತ ಈ ಬಾರಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಸರಣಿ ಒಲಿಸಿಕೊಳ್ಳಬೇಕಿದೆ. ಈ ಸರಣಿಯ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ 2023-25ರ ಭಾಗವಾಗಿದ್ದು, ಸತತ 3ನೇ ಬಾರಿ ಫೈನಲ್ಗೇರುವ ನಿಟ್ಟಿನಲ್ಲೂ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ.
ಕಾಡುತ್ತಿದೆ ಮಳೆ ಭೀತಿ
ಪಂದ್ಯಕ್ಕೆ ಮಳೆ ಭೀತಿ ಕಾಡುತ್ತಿದೆ. ಅದರಲ್ಲೂ ಪ್ರಮುಖವಾಗಿ ಮೊದಲ ದಿನದಾಟಕ್ಕೆ ಮಳೆ ಅಡಚಣೆ ತರುವ ಭೀತಿ ಹೆಚ್ಚಿದೆ. ಮಳೆಯಿಂದಾಗಿ ಸೋಮವಾರ ಅಭ್ಯಾಸಕ್ಕೂ ಅಡ್ಡಿಯಾಗಿದೆ.
ಟೀಮ್ ನ್ಯೂಸ್:
ಭಾರತ: ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ನಲ್ಲಿ ಮೊದಲ ಬಾರಿ ವಿಕೆಟ್ ಕೀಪರ್&ಬ್ಯಾಟರ್ ಆಗಿ ಆಡಲು ಸಜ್ಜಾಗಿದ್ದರೆ, ಮತ್ತೋರ್ವ ಕನ್ನಡಿಗ ಹಾಗೂ ವೇಗಿ ಪ್ರಸಿದ್ಧಕೃಷ್ಣಗೆ ಟೆಸ್ಟ್ ಪದಾರ್ಪಣೆ ಅವಕಾಶದ ನಿರೀೆ ಇದೆ. ಇನ್ನೊಂದು ಬೌಲರ್ ಸ್ಥಾನಕ್ಕೆ ಆರ್. ಅಶ್ವಿನ್&ಶಾರ್ದೂಲ್ ಠಾಕೂರ್ ನಡುವೆ ಪೈಪೋಟಿ ಏರ್ಪಟ್ಟಿದೆ.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿ.ಕೀ), ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್/ಆರ್. ಅಶ್ವಿನ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧಕೃಷ್ಣ, ಮೊಹಮದ್ ಸಿರಾಜ್.
ದಕ್ಷಿಣ ಆಫ್ರಿಕಾ: ಪ್ರಮುಖ ವೇಗಿಗಳಾದ ರಬಾಡ ಮತ್ತು ಎನ್ಗಿಡಿ ಗಾಯದಿಂದ ಚೇತರಿಸಿಕೊಂಡು ಫಿಟ್ ಆಗಿದ್ದು, ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ. ಮಧ್ಯಮ ಕ್ರಮಾಂಕದ ಸ್ಥಾನಕ್ಕೆ ಕೀಗನ್ ಪೀರ್ಟಸೆನ್ ಮತ್ತು ಡೇವಿಡ್ ಬೆಂಡಿಂಗ್ಹ್ಯಾಂ ನಡುವೆ ಸ್ಪರ್ಧೆಯಿದೆ.
ಸಂಭಾವ್ಯ ತಂಡ: ಡೀನ್ ಎಲ್ಗರ್, ಏಡನ್ ಮಾರ್ಕ್ರಮ್, ಟೋನಿ ಡಿ ಜಾರ್ಜಿ, ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಂಡಿಂಗ್ಹ್ಯಾಂ/ಕೀಗನ್ ಪೀರ್ಟಸೆನ್, ಕೈಲ್ ವೆರ್ರೆನ್ನೆ (ವಿ.ಕೀ), ಮಾಕೋರ್ ಜಾನ್ಸೆನ್, ಕೇಶವ್ ಮಹಾರಾಜ್, ಗೆರಾಲ್ಡ್ ಕೋಟ್ಜೀ, ಕಗಿಸೊ ರಬಾಡ, ಲುಂಗಿ ಎನ್ಗಿಡಿ.
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಭಾರತಕ್ಕೆ ಸತ್ವಪರೀಕ್ಷೆಯ ಸಮಯ
ಭಾರತದ ಯುವ ತಂಡ ಟಿ20 ಸರಣಿಯಲ್ಲಿ ಸಮಬಲ ಸಾಧಿಸಿ, ಏಕದಿನ ಸರಣಿಯಲ್ಲಿ ಗೆಲುವಿನ ಸಾಧನೆ ಮಾಡಿದೆ. ಇದೀಗ ಟೆಸ್ಟ್ ಸರಣಿಯಲ್ಲೂ ಯಶ ಸಾಧಿಸಬೇಕಾದರೆ ಭಾರತದ ಯುವ ಬ್ಯಾಟರ್ಗಳು ಹರಿಣಗಳ ನಾಡಿನ ಬೌನ್ಸಿ ಪಿಚ್ನಲ್ಲಿ ಎದುರಾಗುವ ಸತ್ವಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಅಗತ್ಯವಾಗಿದೆ. ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಆಫ್ರಿಕಾ ವೇಗಿಗಳನ್ನು ಹೇಗೆ ಎದುರಿಸಲಿದ್ದಾರೆ ಎಂಬುದು ನಿರ್ಣಾಯಕವೆನಿಸಿದೆ. ಜತೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಕೆಎಲ್ ರಾಹುಲ್ ಬ್ಯಾಟಿಂಗ್ ವಿಭಾಗದಲ್ಲಿ ಆಧಾರ ಆಗಬೇಕಾಗಿದೆ. ಕನ್ನಡಿಗ ರಾಹುಲ್ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿರುವುದರಿಂದ ಅವರ ಕೀಪಿಂಗ್ ಕೌಶಲ ಮತ್ತು ಫಿಟ್ನೆಸ್ಗೂ ಸವಾಲು ಎದುರಾಗಲಿದೆ.
ವಿಶ್ವಾಸದಲ್ಲಿ ದ. ಆಫ್ರಿಕಾ
ಭಾರತದಂತೆ ದ. ಆಫ್ರಿಕಾಕ್ಕೂ ವಿಶ್ವಕಪ್ ನಿರಾಸೆಯನ್ನು ಮರೆಯಲು ಇದೊಂದು ಉತ್ತಮ ಅವಕಾಶವೆನಿಸಿದೆ. ಟೆಂಬಾ ಬವುಮಾ ಪಡೆ ಕಗಿಸೊ ರಬಾಡ, ಲುಂಗಿ ಎನ್ಗಿಡಿ, ಮಾಕೋರ್ ಜಾನ್ಸೆನ್ ಮತ್ತು ಗೆರಾಲ್ಡ್ ಕೋಟ್ಜೀ ಅವರಂಥ ಗುಣಮಟ್ಟದ ವೇಗಿಗಳ ಬಲ ಹೊಂದಿದೆ. ಬ್ಯಾಟಿಂಗ್ನಲ್ಲೂ ಡೀನ್ ಎಲ್ಗರ್, ಏಡನ್ ಮಾರ್ಕ್ರಮ್, ಕೀಗನ್ ಪೀರ್ಟಸೆನ್ರಂಥ ಅನುಭವಿಗಳ ಜತೆಗೆ ಯುವ ಬ್ಯಾಟರ್ ಟೋನಿ ಡಿ ಜಾರ್ಜಿ ಏಕದಿನ ಸರಣಿಯ ಯಶಸ್ಸನ್ನು ಟೆಸ್ಟ್ನಲ್ಲೂ ಮುಂದುವರಿಸುವ ತವಕದಲ್ಲಿದ್ದಾರೆ.
ಮುಖಾಮುಖಿ: 42
ಭಾರತ: 15
ದಣ ಆಫ್ರಿಕಾ: 17
ಡ್ರಾ: 10
ದಣ ಆಫ್ರಿಕಾದಲ್ಲಿ: 23
ಭಾರತ: 4
ದಣ ಆಫ್ರಿಕಾ: 12
ಡ್ರಾ: 7
ಪಿಚ್ ರಿಪೋರ್ಟ್
ದ. ಆಫ್ರಿಕಾದ ವೇಗದ ಬೌಲಿಂಗ್ ಸ್ನೇಹಿ ಪಿಚ್ಗಳಲ್ಲಿ ಪ್ರಮುಖವಾಗಿರುವ ಸೂಪರ್ಸ್ಪೋರ್ಟ್ ಪಾರ್ಕ್ ಪಿಚ್ ವೈವಿಧ್ಯಮಯ ಬೌನ್ಸ್ನಿಂದಲೂ ಕೂಡಿದೆ. ಇಲ್ಲಿ ಸಾಮಾನ್ಯವಾಗಿ ಟೆಸ್ಟ್ನಲ್ಲಿ ಮೂರೂವರೆ ದಿನಗಳಲ್ಲೇ ಫಲಿತಾಂಶ ಬಂದುಬಿಡುತ್ತದೆ. ಹೀಗಾಗಿ ಮಳೆ ಸ್ವಲ್ಪ ಕಾಡಿದರೂ, ಸ್ಪಷ್ಟ ಫಲಿತಾಂಶ ನಿರೀಕ್ಷಿಸಬಹುದು. ಆದರೆ ಬ್ಯಾಟಿಂಗ್ ಇಲ್ಲಿ ಸವಾಲೆನಿಸಿದ್ದು, ಸ್ಪಿನ್ ಬೌಲರ್ಗಳೂ ಪರದಾಡಬೇಕಾಗುತ್ತದೆ. ಭಾರತ ಕಳೆದ ಬಾರಿ ಇಲ್ಲಿ ಆಡಿದ ಟೆಸ್ಟ್ನಲ್ಲಿ ಗೆದ್ದಿದ್ದರೂ, ದ. ಆಫ್ರಿಕಾ ಇಲ್ಲಿ ಆಡಿದ 28 ಟೆಸ್ಟ್ಗಳಲ್ಲಿ 22ರಲ್ಲಿ ಗೆದ್ದ ಬಲಿಷ್ಠ ದಾಖಲೆ ಹೊಂದಿದೆ ಎಂಬುದು ಗಮನಾರ್ಹ.