ಭಾರತಕ್ಕೆ ಹರಿಣಗಳ ನೆಲದಲ್ಲಿ ನವ ಇತಿಹಾಸದ ಹಂಬಲ; ಮೊಟ್ಟಮೊದಲ ಬಾರಿಗೆ ಟೆಸ್ಟ್​ ಸರಣಿ ಜಯಿಸುವ ಅವಕಾಶ

ind vs sa web
Published on

ಸೆಂಚುರಿಯನ್​: ಭಾರತ ತಂಡ 1932ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿತ್ತು ಮತ್ತು 1968ರಲ್ಲಿ ನ್ಯೂಜಿಲೆಂಡ್​ನಲ್ಲಿ ಮೊದಲ ಬಾರಿಗೆ ವಿದೇಶದಲ್ಲಿ ಸರಣಿ ಗೆದ್ದ ಸಾಧನೆ ಮಾಡಿತ್ತು. ನಂತರ 1970-71ರಲ್ಲಿ ವೆಸ್ಟ್​ ಇಂಡೀಸ್​ ಮತ್ತು ಇಂಗ್ಲೆಂಡ್​ನಲ್ಲಿ ಮೊದಲ ಬಾರಿ ಸರಣಿ ಗೆದ್ದಿತ್ತು. ಶ್ರೀಲಂಕಾದಲ್ಲಿ 1993 ಮತ್ತು ಪಾಕಿಸ್ತಾನದಲ್ಲಿ 2003-04ರಲ್ಲಿ ಮೊದಲ ಸರಣಿ ಗೆದ್ದಿತ್ತು. ಆಸ್ಟ್ರೆಲಿಯಾದಲ್ಲೂ 2018-19ರಲ್ಲಿ ತನ್ನ 12ನೇ ಪ್ರವಾಸದಲ್ಲಿ ಕೊನೆಗೂ ಸರಣಿ ಗೆಲುವಿನ ಸಾಧನೆ ಮಾಡಿತ್ತು ಮತ್ತು 2020-21ರಲ್ಲಿ ಅದನ್ನು ಪುನರಾವರ್ತಿಸಿತ್ತು. ಆದರೆ ಭಾರತ ಟೆಸ್ಟ್​ ಕ್ರಿಕೆಟ್​ ಆಡುವ ಪ್ರಮುಖ ದೇಶಗಳ ಪೈಕಿ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಇದುವರೆಗೆ ಒಮ್ಮೆಯೂ ಸರಣಿ ಗೆದ್ದಿಲ್ಲ. ಅದನ್ನು ಈ ಬಾರಿ ತನ್ನ 9ನೇ ಪ್ರವಾಸದಲ್ಲಿ ಕೊನೆಗೂ ನನಸಾಗಿಸುವ ಸುವರ್ಣಾವಕಾಶ ಭಾರತದ ಮುಂದಿದೆ.

ಹರಿಣಗಳ ನಾಡಿನಲ್ಲಿ ಭಾರತ ಇದುವರೆಗೆ ಆಡಿರುವ 8 ಟೆಸ್ಟ್​ ಸರಣಿಗಳಲ್ಲಿ 7ರಲ್ಲಿ ಸೋತಿದ್ದು, 2010-11ರಲ್ಲಿ ಏಕೈಕ ಬಾರಿ ಎಂಎಸ್​ ಧೋನಿ ಸಾರಥ್ಯದಲ್ಲಿ ಆಡಿದಾಗ 1-1ರಿಂದ ಸರಣಿ ಸಮಬಲ ಸಾಧಿಸಿದ್ದೇ ಇದುವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ. 2006 ಮತ್ತು 2021-22ರ ಪ್ರವಾಸಗಳಲ್ಲಿ ಭಾರತ ಸರಣಿಯ ಮೊದಲ ಪಂದ್ಯದಲ್ಲೇ ಗೆದ್ದು ಮುನ್ನಡೆ ಸಾಧಿಸಿದ್ದರೂ, ಸರಣಿ ಗೆಲ್ಲುವ ಈ ಅತ್ಯುತ್ತಮ ಅವಕಾಶಗಳನ್ನು ಕೈಚೆಲ್ಲಿ ನಂತರದಲ್ಲಿ ಸರಣಿ ಸೋತಿತ್ತು.

1992-93ರಿಂದ ದಣ ಆಫ್ರಿಕಾದಲ್ಲಿ ಇದುವರೆಗೆ ಆಡಿರುವ 23 ಟೆಸ್ಟ್​ಗಳಲ್ಲಿ ಭಾರತ 4ರಲ್ಲಿ ಗೆದ್ದಿದ್ದು, 12ರಲ್ಲಿ ಸೋತಿದೆ ಮತ್ತು 7ರಲ್ಲಿ ಡ್ರಾ ಸಾಧಿಸಿದೆ. ಕಳೆದ ಪ್ರವಾಸದಲ್ಲಿ ಭಾರತ ಸೆಂಚುರಿಯನ್​ನಲ್ಲಿ ಆಡಿದ ಟೆಸ್ಟ್​ನಲ್ಲಿ ಗೆದ್ದು ಬೀಗಿತ್ತು. ಈ ಬಾರಿ ಅದೇ ಮೈದಾನದಲ್ಲಿ ಮಂಗಳವಾರದಿಂದ ಸರಣಿಯ ಮೊದಲ ಪಂದ್ಯ ನಡೆಯಲಿದ್ದು, ರೋಹಿತ್​ ಶರ್ಮ ಬಳಗದಿಂದ ತವರಿನ ವಿಶ್ವಕಪ್ ಫೈನಲ್​ ಸೋಲಿನ ಕಹಿಯನ್ನು ಮರೆಸುವಂಥ ಐತಿಹಾಸಿಕ ಸಾಧನೆಯ ನಿರೀೆ ಹರಡಿದೆ.

ಭಾರತ ಈ ಬಾರಿ ಅನುಭವಿ-ಯುವ ಆಟಗಾರರ ಬಳಗವನ್ನು ಹೊಂದಿದ್ದು, ವೇಗಿ ಮೊಹಮದ್​ ಶಮಿ ಹೊರತಾಗಿ ಮತ್ತೆಲ್ಲ ಪ್ರಮುಖ ಆಟಗಾರರು ಲಭ್ಯರಿದ್ದಾರೆ. ವಿರಾಟ್​ ಕೊಹ್ಲಿ ಭರ್ಜರಿ ಫಾರ್ಮ್​ನಲ್ಲಿದ್ದು, ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಬಲವೂ ಇರುವುದರಿಂದ ಭಾರತಕ್ಕೆ ಹೊಸ ಇತಿಹಾಸ ಬರೆಯಲು ಇದುವೇ ಅತ್ಯುತ್ತಮ ಅವಕಾಶವೆನಿಸಿದೆ.

ದಕ್ಷಿಣ ಆಫ್ರಿಕಾದಲ್ಲಿ ಭಾರತದ ಟೆಸ್ಟ್​ ಸರಣಿ

1992-93: 0-1 (4) ಸರಣಿ ಸೋಲು

1996-97: 0-2 (3) ಸರಣಿ ಸೋಲು

2001-02: 0-1 (2) ಸರಣಿ ಸೋಲು

2006-07: 1-2 (3) ಸರಣಿ ಸೋಲು

2010-11: 1-1 (3) ಸರಣಿ ಸಮಬಲ

2013-14: 0-1 (2) ಸರಣಿ ಸೋಲು

2017-18: 1-2 (3) ಸರಣಿ ಸೋಲು

2021-22: 1-2 (3) ಸರಣಿ ಸೋಲು

ಮರಳಿ ಕೂಡಿಕೊಂಡ ಕೊಹ್ಲಿ

ದ. ಆಫ್ರಿಕಾದಲ್ಲಿ ಅಭ್ಯಾಸ ಪಂದ್ಯವನ್ನು ಆಡದೆ ಕುಟುಂಬದ ತುರ್ತು ಕಾರಣಗಳಿಂದಾಗಿ ನಿರ್ಗಮಿಸಿದ್ದ ವಿರಾಟ್​ ಕೊಹ್ಲಿ ಭಾನುವಾರ ಭಾರತ ತಂಡವನ್ನು ಮರಳಿ ಕೂಡಿಕೊಂಡಿದ್ದಾರೆ. ಈ ಮುನ್ನ ವರದಿಯಾದಂತೆ ಕೊಹ್ಲಿ ತವರಿಗೆ ಮರಳಿರಲಿಲ್ಲ. ಬದಲಾಗಿ ಲಂಡನ್​ಗೆ ತೆರಳಿದ್ದರು ಎನ್ನಲಾಗಿದೆ. ಅಲ್ಲದೆ ಕೊಹ್ಲಿ ಅವರ ಈ ಕಾರ್ಯಕ್ರಮ ಪೂರ್ವನಿರ್ಧರಿತವಾಗಿತ್ತು. ಹೀಗಾಗಿ ಅವರು ಅಭ್ಯಾಸ ಪಂದ್ಯಕ್ಕೆ ಲಭ್ಯರಿರುವುದಿಲ್ಲ ಎಂಬುದು ಕೂಡ ಬಿಸಿಸಿಐಗೆ ಮೊದಲೇ ಗೊತ್ತಿತ್ತು ಎನ್ನಲಾಗಿದೆ. ಡಿಸೆಂಬರ್​ 15ರಂದು ಭಾರತದಿಂದ ದ. ಆಫ್ರಿಕಾಕ್ಕೆ ಪ್ರಯಾಣಿಸಿದ್ದ ಕೊಹ್ಲಿ, ಅಲ್ಲಿ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡು ಡಿಸೆಂಬರ್​ 19ರಂದು ಲಂಡನ್​ಗೆ ತೆರಳಿದ್ದರು. ಇದೀಗ ಮೊದಲ ಟೆಸ್ಟ್​ಗೆ ಪೂರ್ವಭಾವಿಯಾಗಿ ತಂಡಕ್ಕೆ ಮರಳಿರುವ ಕೊಹ್ಲಿ, ಭಾನುವಾರ ತಂಡದ ಸದಸ್ಯರೊಂದಿಗೆ ಅಭ್ಯಾಸದಲ್ಲೂ ಪಾಲ್ಗೊಂಡರು.

ವಿಶ್ವ ನಂ. 1 ಪಟ್ಟ ಕಾಯಲು ಗೆಲ್ಲಬೇಕು

ಐಸಿಸಿಯ ಟಿ20, ಏಕದಿನ, ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಸದ್ಯ ನಂ. 1 ಪಟ್ಟದಲ್ಲಿರುವ ಭಾರತ ತಂಡ, ಟೆಸ್ಟ್​ನಲ್ಲಿ ಈ ಸ್ಥಾನ ಕಾಯಲು ದ. ಆಫ್ರಿಕಾ ವಿರುದ್ಧ ಸರಣಿ ಗೆಲ್ಲುವುದು ಅಗತ್ಯವಾಗಿದೆ. ಭಾರತ ಸರಣಿ ಸಮಬಲ ಕಂಡರೂ 2ನೇ ಸ್ಥಾನಕ್ಕೆ ಕುಸಿಯಲಿದೆ. 0-1ರಿಂದ ಸರಣಿ ಸೋತರೆ 3ನೇ ಸ್ಥಾನಕ್ಕೆ ಕುಸಿಯಲಿದೆ. ಮತ್ತೊಂದೆಡೆ ಆಸೀಸ್​-ಪಾಕ್​ ಸರಣಿಯ ಫಲಿತಾಂಶವೂ ನಿರ್ಣಾಯಕವೆನಿಸಿದೆ. ಭಾರತ ಸಮಬಲಕ್ಕೆ ತೃಪ್ತಿಪಟ್ಟರೆ ಆಸೀಸ್​ ನಂ. 1 ಪಟ್ಟಕ್ಕೇರಲಿದೆ. ಪಾಕ್​ ವಿರುದ್ಧ ಆಸೀಸ್​ ಸರಣಿ ಸಮಬಲಕ್ಕೆ ತೃಪ್ತಿಪಟ್ಟರೆ, ಭಾರತ ತಂಡ ದ. ಆಫ್ರಿಕಾದಲ್ಲಿ ಸಮಬಲ ಸಾಧಿಸಿ ಅಗ್ರಸ್ಥಾನ ಕಾಯ್ದುಕೊಳ್ಳಬಹುದಾಗಿದೆ. ಭಾರತ ಸರಣಿ ಸೋತು, ಆಸೀಸ್​ ಸಮಬಲಕ್ಕೆ ತೃಪ್ತಿಪಟ್ಟರೆ, ಇಂಗ್ಲೆಂಡ್​ ಮೂರರಿಂದ ಅಗ್ರಸ್ಥಾನಕ್ಕೆ ಏರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net