ಟೆಸ್ಟ್​ ಕ್ರಿಕೆಟ್​ನಲ್ಲೂ ವಿಕೆಟ್​ ಕೀಪಿಂಗ್​ಗೆ ಸಜ್ಜಾದ ಕನ್ನಡಿಗ ಕೆಎಲ್​ ರಾಹುಲ್​; ಶಮಿ ಸ್ಥಾನಕ್ಕೆ ಪ್ರಸಿದ್ಧಕೃಷ್ಣ-ಮುಕೇಶ್​ ಪೈಪೋಟಿ

keeping rahul web
Published on

ಜೊಹಾನ್ಸ್​ಬರ್ಗ್​: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ "ಬಾಕ್ಸಿಂಗ್​ ಡೇ'ಯಂದು (ಡಿಸೆಂಬರ್​ 26) ಶುರುವಾಗಲಿರುವ ಮೊದಲ ಟೆಸ್ಟ್​ ಪಂದ್ಯಕ್ಕೆ ಆಡುವ 11ರ ಬಳಗದ ಸಂಯೋಜನೆ ಭಾರತಕ್ಕೆ ತಲೆನೋವಾಗಿದೆ. ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ ಮಾನಸಿಕ ಆಯಾಸ ಮತ್ತು ವೇಗಿ ಮೊಹಮದ್​ ಶಮಿ ಗಾಯದಿಂದಾಗಿ ಸರಣಿಗೆ ಅಲಭ್ಯರಾಗಿರುವುದು ಭಾರತಕ್ಕೆ ಹಿನ್ನಡೆ ತಂದಿದೆ. ಕಿಶನ್​ ಗೈರಿನಲ್ಲಿ ಕನ್ನಡಿಗ ಕೆಎಲ್​ ರಾಹುಲ್​ ಟೆಸ್ಟ್​ನಲ್ಲೂ ವಿಕೆಟ್​ ಕೀಪಿಂಗ್​ ನಿರ್ವಹಿಸುವ ಸಾಧ್ಯತೆ ಇದ್ದರೆ, ಶಮಿ ಸ್ಥಾನವನ್ನು ತುಂಬಲು ಕನ್ನಡಿಗ ಪ್ರಸಿದ್ಧಕೃಷ್ಣ ಮತ್ತು ಮುಕೇಶ್​ ಕುಮಾರ್​ ನಡುವೆ ಪೈಪೋಟಿ ಏರ್ಪಟ್ಟಿದೆ.

ಕೆಎಲ್​ ರಾಹುಲ್​ ಈಗಾಗಲೆ ಏಕದಿನ ವಿಶ್ವಕಪ್​ನಲ್ಲಿ ವಿಕೆಟ್​ ಕೀಪರ್​ ಆಗಿ ಉತ್ತಮ ಯಶಸ್ಸು ಕಂಡಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾದ ಸವಾಲಿನ ಪಿಚ್​ನಲ್ಲೂ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನೀಡಲು ನಾಯಕ ರೋಹಿತ್​ ಶರ್ಮ ಮತ್ತು ಕೋಚ್​ ರಾಹುಲ್​ ದ್ರಾವಿಡ್​ ಮುಂದಾಗಿದ್ದಾರೆ. ಕಿಶನ್​ ಬದಲಿಗೆ ಕೆಎಸ್​ ಭರತ್​ ಕೀಪರ್​ ಆಗಿ ಟೆಸ್ಟ್​ ತಂಡ ಸೇರಿದ್ದಾರೆ. ಆದರೆ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಸಹಿತ ಕಳೆದ 5 ಟೆಸ್ಟ್​ ಪಂದ್ಯಗಳಲ್ಲಿ ಒಂದೂ ಅರ್ಧಶತಕ ಬಾರಿಸದೆ ಭರತ್​ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ಬ್ಯಾಟಿಂಗ್​ನಲ್ಲೂ ಉಪಯುಕ್ತರಾಗಬಹುದಾದ ರಾಹುಲ್​ಗೆ ಕೀಪಿಂಗ್​ ವಹಿಸುವುದು ಉತ್ತಮ ಆಯ್ಕೆ ಎನಿಸಿದೆ.

ಸೆಂಚುರಿಯನ್​ ಪಿಚ್​ ವೇಗದ ಬೌಲರ್​ಗಳ ಸ್ವರ್ಗವೆನಿಸಿದೆ. ಕಳೆದ ವೆಸ್ಟ್​ ಇಂಡೀಸ್​ ಪ್ರವಾಸದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಮುಕೇಶ್​ ಕುಮಾರ್​, ದಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ನಿರೀತ ನಿರ್ವಹಣೆ ತೋರಿಲ್ಲ. ಹೀಗಾಗಿ ದಣ ಆಫ್ರಿಕಾದಲ್ಲಿ ಭಾರತ ಎ ತಂಡದ ಪರ ಹ್ಯಾಟ್ರಿಕ್​ ವಿಕೆಟ್​ ಕಬಳಿಸಿದ ಮತ್ತು ಭಾರತ ತಂಡದೊಳಗಿನ ತ್ರಿದಿನ ಅಭ್ಯಾಸ ಪಂದ್ಯದಲ್ಲೂ ಮಿಂಚಿರುವ ಪ್ರಸಿದ್ಧಕೃಷ್ಣರನ್ನು ಕಣಕ್ಕಿಳಿಸುವ ಚಿಂತನೆಯೂ ನಡೆದಿದೆ.

ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​ ಅಗ್ರ ಇಬ್ಬರು ವೇಗಿಗಳಾಗಿದ್ದರೆ, ಬ್ಯಾಟಿಂಗ್​ ಸಾಮರ್ಥ್ಯದಿಂದಾಗಿ ಶಾರ್ದೂಲ್​ ಠಾಕೂರ್​ 4ನೇ ವೇಗಿಯಾಗಿ ಆಡಬಹುದು.

ಸಂಭಾವ್ಯ 11ರ ಬಳಗ: ರೋಹಿತ್​ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್​, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​ (ವಿ.ಕೀ), ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​, ಮೊಹಮದ್​ ಸಿರಾಜ್​, ಮುಕೇಶ್​ ಕುಮಾರ್​/ಪ್ರಸಿದ್ಧ ಕೃಷ್ಣ, ಜಸ್​ಪ್ರೀತ್​ ಬುಮ್ರಾ.

ಅಶ್ವಿನ್​ಗೆ ಮತ್ತೆ ನಿರಾಸೆ?

ಐಸಿಸಿ ಟೆಸ್ಟ್​ ವಿಶ್ವ ಚಾಂಪಿಯನ್​ಷಿಪ್​ ಫೈನಲ್​ನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದ ಅನುಭವಿ ಸ್ಪಿನ್ನರ್​ ಹಾಗೂ ವಿಶ್ವ ನಂ. 1 ಟೆಸ್ಟ್​ ಬೌಲರ್​ ಆರ್​. ಅಶ್ವಿನ್​, ದ. ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​ನಿಂದಲೂ ಹೊರಗುಳಿಯುವ ಸಾಧ್ಯತೆಗಳಿವೆ. ಸೆಂಚುರಿಯನ್​ ಪಿಚ್​ ಸ್ಪಿನ್ನರ್​ಗಳಿಗೆ ನೆರವು ನೀಡುವ ನಿರೀಕ್ಷೆ ಇಲ್ಲ. ಹೀಗಾಗಿ ರವೀಂದ್ರ ಜಡೇಜಾ ಒಬ್ಬರೇ ಸ್ಪಿನ್ನರ್​ ಆಗಿ ಕಣಕ್ಕಿಳಿಯಬಹುದು. ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಪೂರೈಸಲು 11 ವಿಕೆಟ್​ ಕೊರತೆ ಎದುರಿಸುತ್ತಿರುವ ಅಶ್ವಿನ್​, ಇದನ್ನು ಸಾಧಿಸಲು ಮುಂದಿನ ವರ್ಷ ತವರಿನಲ್ಲಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ ಟೆಸ್ಟ್​ ಸರಣಿಯವರೆಗೆ ಕಾಯಬೇಕಾಗಬಹುದು.

ಮೊದಲ ಟೆಸ್ಟ್​ಗೆ ಮಳೆ ಭೀತಿ

ಸೆಂಚುರಿಯನ್​ನ ಸೂಪರ್​ಸ್ಪೋರ್ಟ್​ ಪಾರ್ಕ್​ನಲ್ಲಿ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯಕ್ಕೆ ಮಳೆ ಅಡಚಣೆ ತರುವ ಭೀತಿ ಹರಡಿದೆ. ಪಂದ್ಯದ ಮೊದಲ ದಿನದಾಟಕ್ಕೆ ಮಳೆ ಕಾಡುವ ಭೀತಿ ಶೇ. 96ರಷ್ಟಿದೆ. 2ನೇ ದಿನಕ್ಕೆ ಮಳೆ ಭೀತಿ ಶೇ. 25ಕ್ಕೆ ತಗ್ಗಲಿದೆ. 3ನೇ ದಿನದಾಟದಲ್ಲಿ ಬೆಳಗ್ಗಿನ ಅವಧಿಗೆ ಮಾತ್ರ ಮಳೆ ಭೀತಿ ಇದೆ. 4 ಮತ್ತು 5ನೇ ದಿನದಾಟಗಳಲ್ಲಿ ಮಳೆ ಕಾಡುವ ಭೀತಿ ಮತ್ತೆ ಶೇ. 60ಕ್ಕೆ ಏರಿಕೆಯಾಗಲಿದೆ.

ಅಭಿಮನ್ಯು ಈಶ್ವರನ್​ ಸೇರ್ಪಡೆ

ಕೈಬೆರಳು ಗಾಯದಿಂದಾಗಿ ದ. ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಬಿದ್ದಿರುವ ಆರಂಭಿಕ ಋತುರಾಜ್​ ಗಾಯಕ್ವಾಡ್​ ಬದಲಿಗೆ ಬಂಗಾಳದ ಅಭಿಮನ್ಯು ಈಶ್ವರನ್​ ಭಾರತ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆದರೆ ಈಗಾಗಲೆ ದಣ ಆಫ್ರಿಕಾ ಪ್ರವಾಸದಲ್ಲಿರುವ ಭಾರತ ಎ ತಂಡದ ನಾಯಕರಾಗಿರುವ ಅಭಿಮನ್ಯು ಈಶ್ವರನ್​ ಜನವರಿ 3ರಿಂದ ಕೇಪ್​ಟೌನ್​ನಲ್ಲಿ ನಡೆಯಲಿರುವ 2ನೇ ಟೆಸ್ಟ್​ ಪಂದ್ಯಕ್ಕೆ ಮಾತ್ರ ಲಭ್ಯರಿರುತ್ತಾರೆ. ಏಕದಿನ ಸರಣಿಯಲ್ಲಿ ಫೀಲ್ಡಿಂಗ್​ ವೇಳೆ ಗಾಯಗೊಂಡಿದ್ದ ಋತುರಾಜ್​ ಗಾಯಕ್ವಾಡ್​ ಬೆಂಗಳೂರಿನ ಎನ್​ಸಿಎಯಲ್ಲಿ ಚಿಕಿತ್ಸೆ-ಪುನಶ್ಚೇತನಕ್ಕೆ ಒಳಗಾಗಲಿದ್ದಾರೆ.

ಭಾರತ ಎ ತಂಡದಲ್ಲಿ ಬದಲಾವಣೆ

ದಕ್ಷಿಣ ಆಫ್ರಿಕಾ ಎ ವಿರುದ್ಧ ಡಿಸೆಂಬರ್​ 26ರಿಂದ ಬೆನೋನಿಯಲ್ಲಿ ನಡೆಯಲಿರುವ 2ನೇ ಹಾಗೂ ಅಂತಿಮ ಚತುರ್ದಿನ ಟೆಸ್ಟ್​ ಪಂದ್ಯಕ್ಕೆ ಭಾರತ ಎ ತಂಡದಲ್ಲಿ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ವೇಗಿ ಹರ್ಷಿತ್​ ರಾಣಾ ಗಾಯದಿಂದಾಗಿ ಪಂದ್ಯದಿಂದ ಹೊರಬಿದ್ದಿದ್ದು, ಕುಲದೀಪ್​ ಯಾದವ್​ ತಂಡದಿಂದ ರಿಲೀಸ್​ ಆಗಿದ್ದಾರೆ. ಸ್ರಾರ್ಜ್​ ಖಾನ್​ ಜತೆಗೆ ಏಕದಿನ ಸರಣಿಯಲ್ಲಿ ಆಡಿದ್ದ ರಜತ್​ ಪಾಟೀದಾರ್​, ಆವೇಶ್​ ಖಾನ್​ ಮತ್ತು ರಿಂಕು ಸಿಂಗ್​ ಭಾರತ ಎ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ವೇಗಿ ವಿದ್ವತ್​ ಕಾವೇರಪ್ಪ ಭಾರತ ಎ ತಂಡದಲ್ಲಿರುವ ಏಕೈಕ ಕನ್ನಡಿಗರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net