

Rohit & Virat: ಇತ್ತೀಚೆಗಷ್ಟೇ ಆಂಗ್ಲರ ನಾಡಿನಲ್ಲಿ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-2ರಲ್ಲಿ ಸಮಬಲಗೊಳಿಸಿತು. ಕೊನೆಯ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಶುಭಮನ್ ಗಿಲ್ ಪಡೆ, ಸರಣಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿತು. ಈ ಸರಣಿಗೂ ಮುನ್ನವೇ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತದ ದಿಗ್ಗಜ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ, ಅಭಿಮಾನಿಗಳಿಗೆ ಮಾತ್ರವಲ್ಲದೇ ಬಿಸಿಸಿಐಗೂ ದೊಡ್ಡ ಶಾಕ್ ನೀಡಿದರು. ಸದ್ಯ ಇದೇ ವಿಚಾರವನ್ನು ಮತ್ತೇ ಮುನ್ನೆಲೆಗೆ ತಂದಿರುವ ಮಾಜಿ ಕ್ರಿಕೆಟಿಗರೊಬ್ಬರು, ಕೊಹ್ಲಿ ಮತ್ತು ರೋಹಿತ್ ನಿರ್ಧಾರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ 'ರನ್ಮಷಿನ್', ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಮತ್ತು 'ಹಿಟ್ಮ್ಯಾನ್', ಕ್ಯಾಪ್ಟನ್ ರೋಹಿತ್ ಶರ್ಮ ಇಬ್ಬರೂ ಸಹ ಟಿ20 ಮತ್ತು ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದರು. ಇದು ಲಕ್ಷಾಂತರ ಸಂಖ್ಯೆಯ ಅಭಿಮಾನಿಗಳನ್ನು ತೀರ ಅಚ್ಚರಿ ಹಾಗೂ ಬೇಸರಕ್ಕೆ ದೂಡಿತು. ಹಲವರು 'ಈಗಲೇ ಏಕೆ ನಿವೃತ್ತಿ ಘೋಷಣೆ ಮಾಡಿದ್ರಿ? ನೀವಿಬ್ಬರು ಇನ್ನೂ ಒಂದಷ್ಟು ವರ್ಷಗಳ ಕಾಲ ಆಡಬೇಕು' ಎಂದು ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. 2024ರಲ್ಲಿ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟಿ20 ಫಾರ್ಮೆಟ್ಗೆ ಮತ್ತು ಇತ್ತೀಚೆಗೆ ಮುಗಿದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ಗೂ ಮುನ್ನ ಕೊಹ್ಲಿ, ರೋಹಿತ್ ನಿವೃತ್ತಿ ಘೋಷಿಸಿದರು.
ಇಬ್ಬರು ದಿಗ್ಗಜರ ನಿವೃತ್ತಿ ಬಗ್ಗೆ ಈಗ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, "ಬೇಡದ ಫಾರ್ಮೆಟ್ಗೆ ಇವರಿಬ್ಬರು ಗುಡ್ಬೈ ಹೇಳಿದರು. ವಿಶ್ವಕಪ್ ಗೆದ್ದ ಕೂಡಲೇ ಟಿ20ಗೆ ನಿವೃತ್ತಿ ಘೋಷಿಸಿದರು. ಅದಾದ ಬಳಿಕ ಟೆಸ್ಟ್ಗೆ. ಇಲ್ಲೇ ಅವರಿಬ್ಬರು ತಪ್ಪು ಮಾಡಿದ್ದು. ಇದೇ ಅವರು ಏಕದಿನ ಸ್ವರೂಪಕ್ಕೆ ನಿವೃತ್ತಿ ಕೊಟ್ಟು, ಟೆಸ್ಟ್ಗೆ ಆಡಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಈ ವರ್ಷದ ಆರಂಭದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮೊದಲು ಭಾರತ 12 ತಿಂಗಳಲ್ಲಿ ಆಡಿರುವುದು ಕೇವಲ ಆರು ಏಕದಿನ ಪಂದ್ಯ ಮಾತ್ರ" ಎಂದಿದ್ದಾರೆ.
"ನೀವು ಒಂದು ವರ್ಷದಲ್ಲಿ ಆರು ಟೆಸ್ಟ್ ಪಂದ್ಯಗಳನ್ನಾಡಿದರೆ, ಅದು 30 ದಿನಗಳ ಕ್ರಿಕೆಟ್ ಎಂದರ್ಥ. ಆದಾಗ್ಯೂ, ಆರು ಏಕದಿನ ಪಂದ್ಯಗಳಲ್ಲಿ ಆರು ದಿನಗಳು ಉಳಿದಿವೆ. ಐಪಿಎಲ್‌ನಲ್ಲಿ ನಿಮ್ಮ ಕೊನೆಯ ಪಂದ್ಯದಿಂದ ನೀವು ಆಡುವ ಮುಂದಿನ ಏಕದಿನ ಪಂದ್ಯದವರೆಗೆ 100 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿ ನೀವಿಬ್ಬರು ಆಡುತ್ತಿಲ್ಲ ಮತ್ತು ಅಭ್ಯಾಸ ಮಾಡುತ್ತಿಲ್ಲ. ಮೂರು ಏಕದಿನ ಸರಣಿ 7-8 ದಿನಗಳೊಳಗೆ ಮುಗಿಯುತ್ತದೆ. ಮುಂದಿನ ಸರಣಿ ಮೂರು ತಿಂಗಳ ನಂತರ ನಡೆಯುತ್ತದೆ. ಇಲ್ಲಿ ಅಂತರ ದೊಡ್ಡದು. ಇದನ್ನಾಡುವ ಬದಲಿಗೆ ಟೆಸ್ಟ್ ಆಡಿದ್ದರೆ ಉತ್ತಮವಾಗಿರುತ್ತಿತ್ತು" ಎಂದು ಹೇಳಿದ್ದಾರೆ,(ಏಜೆನ್ಸೀಸ್).