

Faisal Patel: ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಲಾದ ಆಪರೇಷನ್ ಸಿಂಧೂರವನ್ನು ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಕಾಂಗ್ರೆಸ್ ನಾಯಕ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಮಂಗಳವಾರ (ಆಗಸ್ಟ್ 12) ಶ್ಲಾಘಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಫೈಸಲ್ ಪಟೇಲ್, ನಮ್ಮ ಸಶಸ್ತ್ರ ಪಡೆಗಳಿಂದಾಗಿ ನಮ್ಮ ದೇಶ ಸುರಕ್ಷಿತವಾಗಿದೆ. ಪ್ರಸ್ತುತ ದೇಶವನ್ನು ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಎಸ್. ಜೈಶಂಕರ್, ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಸುಧಾಂಶು ತ್ರಿವೇದಿ ಅವರು ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಎನ್ನುವುದಕ್ಕಿಂತ, ನಮ್ಮ ಸಶಸ್ತ್ರ ಪಡೆಗಳು ಉತ್ತಮ ಕೆಲಸ ಮಾಡಿವೆ, ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತಮ ನಾಯಕತ್ವವನ್ನು ತಮ್ಮ ಜಗತ್ತಿಗೆ ತೋರಿಸಿದ್ದಾರೆ. ದೇಶವನ್ನು ದೊಡ್ಡ ಬಿಕ್ಕಟ್ಟಿನಿಂದ ಹೊರತಂದಿದ್ದಾರೆ ಎಂದು ಫೈಸಲ್ ಪಟೇಲ್ ತಿಳಿಸಿದರು.
ಕಾಂಗ್ರೆಸ್ ಬಗ್ಗೆ ತಮಗೆ ಯಾವುದೇ ಅಸಮಾಧಾನವಿಲ್ಲ ಮತ್ತು ಸಾರ್ವಜನಿಕ ಜೀವನದಿಂದ ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತಿದ್ದೇನೆ ಎಂದು ಫೈಸಲ್ ಸ್ಪಷ್ಟಪಡಿಸಿದ್ದಾರೆ. ಫೈಸಲ್ ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇನೆ ಎಂದು ಬಹಿರಂಗಪಡಿಸಿದ ಹಲವು ತಿಂಗಳುಗಳ ನಂತರ ಈ ಹೇಳಿಕೆ ಬಂದಿದೆ, ತನ್ನ ತಂದೆಯ ಪರಂಪರೆಯನ್ನು ಮುಂದುವರಿಸಲು ಅವಕಾಶವನ್ನು ನಿರಾಕರಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ನನಗೆ ಕಾಂಗ್ರೆಸ್ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಇಡೀ ಪಕ್ಷ ನನ್ನ ಕುಟುಂಬ, ಮತ್ತು ಪಕ್ಷದ ಹಿರಿಯ ನಾಯಕರೊಂದಿಗೆ ನನಗೆ ಉತ್ತಮ ಸಂಬಂಧವಿದೆ. ನಾನು ಇನ್ನೂ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ. ನಾನು ಕಾಂಗ್ರೆಸ್ ತೊರೆದಿಲ್ಲ, ಸಾರ್ವಜನಿಕ ಜೀವನದಿಂದ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡಿದ್ದೇನೆ. ನಾನು ಕಾಂಗ್ರೆಸ್‌ನಲ್ಲಿಯೇ ಇದ್ದೇನೆ ಎಂದು ಫೈಸೆಲ್ ಪಟೇಲ್ ಹೇಳಿದ್ದಾರೆ.
2025ರ ಫೆಬ್ರವರಿಯಲ್ಲಿ, ಫೈಸಲ್ ಪಟೇಲ್ ಅವರು ಕಾಂಗ್ರೆಸ್ಪಕ್ಷದೊಂದಿಗಿನ ಸಂಬಂಧವನ್ನು ಮುರಿಯುವ ನಿರ್ಧಾರವನ್ನು ಘೋಷಿಸಿದರು.(ಏಜೆನ್ಸೀಸ್)