ಮಾರ್ಚ್​ 29ರಂದು ಗುವಾಹಟಿಯಲ್ಲಿ ರೋಹಿತ್​ ಶರ್ಮ ಟೆಸ್ಟ್​ ನಾಯಕತ್ವದ ಭವಿಷ್ಯ ನಿರ್ಧಾರ!

web rohit (1)
Published on

ನವದೆಹಲಿ: ಬಿಸಿಸಿಐ ಕಾರ್ಯದರ್ಶಿ ದೇವಜಿತ್​ ಸೈಕಿಯಾ, ಟೀಮ್​ ಇಂಡಿಯಾ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಮಾರ್ಚ್​ 29ಕ್ಕೆ ಗುವಾಹಟಿಯಲ್ಲಿ ಸಭೆ ಸೇರಲಿದ್ದು, ಭಾರತ ತಂಡದ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಇದೇ ವೇಳೆ ಭಾರತ ಟೆಸ್ಟ್​ ತಂಡದ ನಾಯಕರಾಗಿ ರೋಹಿತ್​ ಶರ್ಮ ಭವಿಷ್ಯವೂ ನಿರ್ಧಾರವಾಗಲಿದೆ.

ಐಪಿಎಲ್​ ಬಳಿಕ ಜೂನ್​ 20ರಿಂದ ನಡೆಯಲಿರುವ ಇಂಗ್ಲೆಂಡ್​ ಪ್ರವಾಸದ 5 ಪಂದ್ಯಗಳ ಟೆಸ್ಟ್​ ಸರಣಿಗೆ ರೋಹಿತ್​ ಶರ್ಮ ಅವರನ್ನು ನಾಯಕರಾಗಿ ಮುಂದುವರಿಸಬೇಕೇ ಅಥವಾ ನೂತನ ನಾಯಕರನ್ನಾಗಿ ಯಾರನ್ನು ಆರಿಸುವುದು ಎಂಬ ಬಗ್ಗೆ ಸಭೆಯಲ್ಲಿ ಗಂಭೀರವಾದ ಚರ್ಚೆ ನಡೆಯಲಿದೆ. ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ ಬ್ಯಾಟಿಂಗ್​ನಲ್ಲೂ ಭಾರಿ ವೈಫಲ್ಯ ಕಂಡಿದ್ದ ರೋಹಿತ್​ ಶರ್ಮರನ್ನು ಟೆಸ್ಟ್​ ತಂಡದಲ್ಲಿ ಆಟಗಾರರನ್ನಾಗಿ ಮಾತ್ರ ಉಳಿಸಿಕೊಳ್ಳುವ ಸಾಧ್ಯತೆ ಣಿಸಿದ್ದರೆ, ಮತ್ತೋರ್ವ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಟೆಸ್ಟ್​ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀೆ ಇದೆ. ಕೊಹ್ಲಿ ಕಳೆದ 19 ಟೆಸ್ಟ್​ ಇನಿಂಗ್ಸ್​ಗಲಲ್ಲಿ 383 ರನ್​ ಮಾತ್ರ ಗಳಿಸಿದ್ದಾರೆ. ಆದರೆ ಇಂಗ್ಲೆಂಡ್​ನಲ್ಲಿ ಅವರು ಹೊಂದಿರುವ ಅನುಭವದಿಂದಾಗಿ ಸ್ಥಾನ ಕಾಯ್ದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾಗಿರುವ ನಡುವೆ ರೋಹಿತ್​, ವಿರಾಟ್​ ಕೊಹ್ಲಿ, ರವೀಂದ್ರ ಜಡೇಜಾರನ್ನು ಎ ಪ್ಲಸ್​ ಶ್ರೇಣಿಯಲ್ಲಿ ಉಳಿಸಿಕೊಳ್ಳುವ ಬಗ್ಗೆಯೂ ಚರ್ಚೆಯಾಗಲಿದೆ. ವಾರ್ಷಿಕ ಗುತ್ತಿಗೆ ಪಟ್ಟಿಗೆ ವರುಣ್​ ಚಕ್ರವರ್ತಿ, ನಿತೀಶ್​ ಕುಮಾರ್​ ರೆಡ್ಡಿ, ಅಭಿಷೇಕ್​ ಶರ್ಮ ಹೊಸದಾಗಿ ಸೇರ್ಪಡೆಯಾಗುವ ನಿರೀೆ ಇದೆ. ಶ್ರೇಯಸ್​ ಅಯ್ಯರ್​ ಗುತ್ತಿಗೆ ಪಟ್ಟಿಯಲ್ಲಿ ಮರಳಿ ಸ್ಥಾನ ಪಡೆಯಲಿದ್ದಾರೆ.

ಅಭಿಷೇಕ್​ ನಾಯರ್​, ಟಿ. ದಿಲೀಪ್​ ವಜಾ?

ಇಂಗ್ಲೆಂಡ್​ ಪ್ರವಾಸಕ್ಕೆ ಮುನ್ನ ಭಾರತ ತಂಡದ ತರಬೇತಿ ಬಳಗದ ಸಿಬ್ಬಂದಿ ಕಡಿತಕ್ಕೆ ಬಿಸಿಸಿಐ ಚಿಂತಿಸಿದ್ದು, ಸಹಾಯಕ ಕೋಚ್​ ಅಭಿಷೇಕ್​ ನಾಯರ್​ ಮತ್ತು ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್​ ವಜಾಗೊಳ್ಳುವ ಸಾಧ್ಯತೆ ಇದೆ. ಮುಖ್ಯ ಕೋಚ್​ ಗೌತಮ್​ ಗಂಭೀರ್​ ನೇತೃತ್ವದ ತರಬೇತಿ ಬಳಗದ ದೈತ್ಯಗಾತ್ರದ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ. ಹೀಗಾಗಿ ಅದರ ಗಾತ್ರ ತಗ್ಗಿಸಲು ಮುಂದಾಗಿದೆ ಎಂದು ವರದಿಯಾಗಿದೆ. ರ್ಯಾನ್​ ಟೆನ್​ ಡೋಶೆಟ್​ ಈಗಾಗಲೆ ತಂಡದಲ್ಲಿ ಮತ್ತೋರ್ವ ಸಹಾಯಕ ಕೋಚ್​ ಆಗಿ ಇದ್ದರೆ, ಮಾರ್ನ್​ ಮಾರ್ಕೆಲ್​ ಬೌಲಿಂಗ್​ ಕೋಚ್​, ಸೀತಾಂಶು ಕೋಟಕ್​ ಬ್ಯಾಟಿಂಗ್​ ಕೋಚ್​ ಮತ್ತು ಪರಾಸ್​ ಮಹಾಂಬ್ರೆ ಬೌಲಿಂಗ್​ ಕೋಚ್​ ಆಗಿದ್ದಾರೆ. ಇದಲ್ಲದೆ ಮೂವರು ಥ್ರೋಡೌನ್​ ತಜ್ಞರು, ಇಬ್ಬರು ಮಸಾಜು ತಜ್ಞರು, ತಲಾ ಓರ್ವ ಸೀನಿಯರ್​ ಮತ್ತು ಜೂನಿಯರ್​ ಫಿಸಿಯೋ, ಓರ್ವ ಡಾಕ್ಟರ್​, ಓರ್ವ ಭದ್ರತಾ ಸಿಬ್ಬಂದಿ, ಓರ್ವ ಕಾರ್ಯನಿರ್ವಹಣಾ ಮ್ಯಾನೇಜರ್​, ಓರ್ವ ಕಂಪ್ಯೂಟರ್​ ವಿಶ್ಲೇಷಕ ಮತ್ತು ಕೆಲ ಲಾಜಿಸ್ಟಿಕ್ಸ್​, ಮಾಧ್ಯಮ ಮ್ಯಾನೇಜರ್​ಗಳೂ ಇದ್ದಾರೆ. ಡೋಶೆಟ್​ ಅವರಿಗೇ ಫೀಲ್ಡಿಂಗ್​ ಕೋಚ್​ ಹೊಣೆಯನ್ನೂ ಬಿಸಿಸಿಐ ವಹಿಸಲಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net