ರೋಹಿತ್​ ಶರ್ಮ ಹೊಸ ಲುಕ್​ ವೈರಲ್​... ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡ ಹಿಟ್​ಮ್ಯಾನ್​! ಇಲ್ಲಿದೆ ಫೋಟೋ... Rohit Sharma

Rohit Sharma
Published on

Rohit Sharma : ಟೀಮ್​ ಇಂಡಿಯಾ ಏಕದಿನ ತಂಡದ ನಾಯಕ ರೋಹಿತ್ ಶರ್ಮ ಅವರ ಹೊಸ ಲುಕ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ತಮ್ಮ ದಪ್ಪ ದೇಹದ ಕಾರಣಕ್ಕೆ ಕೆಲವೊಮ್ಮೆ ಟೀಕೆಗೆ ಗುರಿಯಾಗುತ್ತಿದ್ದ ಹಿಟ್​ಮ್ಯಾನ್​, ಇದೀಗ ಸ್ಲಿಮ್​ ಆಗಿ ಕಾಣುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಸ್ವಲ್ಪ ಸಮಯದವರೆಗೆ ವಿಸ್ತರಿಸುವ ಸಲುವಾಗಿ ಫಿಟ್ನೆಸ್ ಬಗ್ಗೆ ರೋಹಿತ್​ ಹೆಚ್ಚು ಗಮನಹರಿಸಿರುವಂತೆ ತೋರುತ್ತದೆ.

ಕ್ರೀಡೆಯಲ್ಲಿ ಹೆಚ್ಚು ಕಾಲ ಉಳಿಯಬೇಕಾದರೆ ಫಿಟ್​ನೆಸ್​ ಮುಖ್ಯ ಎಂಬುದನ್ನು ಅರಿತಿರುವ ರೋಹಿತ್​, ಬರೋಬ್ಬರಿ ಹತ್ತು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಅಲ್ಲದೆ, ಇನ್ನೂ ಸ್ವಲ್ಪ ತೂಕ ಇಳಿಸಿಕೊಳ್ಳುವ ಗುರಿಯೊಂದಿಗೆ ಅವರು ವರ್ಕೌಟ್ ಮುಂದುವರಿಸಿದ್ದಾರೆ. ಟೀಮ್ ಇಂಡಿಯಾದ ಮಾಜಿ ಸಹಾಯಕ ಕೋಚ್ ಅಭಿಷೇಕ್ ನಾಯರ್, ರೋಹಿತ್ ಅವರ ಹೊಸ ಲುಕ್​ನ ಫೋಟೋವನ್ನು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

10,000 ಗ್ರಾಂ ತೂಕ ಇಳಿಸಿಕೊಂಡ ನಂತರ... ನಾವು ಇನ್ನೂ ಪ್ರಯತ್ನಿಸುತ್ತಿದ್ದೇವೆ ಎಂದು ಅಭಿಷೇಕ್ ನಾಯರ್ ರೋಹಿತ್ ಜೊತೆಗಿನ ಫೋಟೋ ಹಂಚಿಕೊಂಡು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಟಿ20 ವಿಶ್ವಕಪ್-2024 ರ ನಂತರ ಅಂತಾರಾಷ್ಟ್ರೀಯ ಕಿರು ಸ್ವರೂಪಗಳಿಂದ ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮ, ಇತ್ತೀಚೆಗೆ ಟೆಸ್ಟ್‌ಗಳಿಗೂ ವಿದಾಯ ಹೇಳಿದ್ದಾರೆ.

Rohit Sharma 1

ಪ್ರಸ್ತುತ ಐಪಿಎಲ್ ಹಾಗೂ ಏಕದಿನ ಪಂದ್ಯಗಳಲ್ಲಿ ಆಡುತ್ತಿರುವ 38 ವರ್ಷದ ರೋಹಿತ್ ಶರ್ಮ, ಮುಂದಿನ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ತಂಡಕ್ಕೆ ಮರಳಲಿದ್ದಾರೆ. ಅಕ್ಟೋಬರ್‌ನಲ್ಲಿ ನಡೆಯಲಿರುವ ಏಕದಿನ ಸರಣಿಗೆ ಸಂಪೂರ್ಣವಾಗಿ ತಯಾರಿ ನಡೆಸುತ್ತಿರುವ ಹಿಟ್‌ಮ್ಯಾನ್, ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ. ಆದಾಗ್ಯೂ, ರೋಹಿತ್ ಶೀಘ್ರದಲ್ಲೇ ಏಕದಿನ ಪಂದ್ಯಗಳಿಗೂ ವಿದಾಯ ಹೇಳಲಿದ್ದಾರೆ ಎಂಬ ಕೆಲವು ವರದಿಗಳು ಕೂಡ ಇವೆ. 2027ರ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಟೆಸ್ಟ್ ನಾಯಕ ಶುಭಮಾನ್ ಗಿಲ್ ಕೇಂದ್ರವಾಗಿಟ್ಟುಕೊಂಡು ಸದೃಢ ತಂಡವನ್ನು ನಿರ್ಮಿಸುವ ಸಲುವಾಗಿ ಬಿಸಿಸಿಐ ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸುತ್ತದೆ ಎಂಬ ಊಹಾಪೋಹಗಳು ಹರಡಿವೆ.

ಆದರೆ, ರೋಹಿತ್ ಶರ್ಮ ಅವರು ತಮ್ಮ ಏಕದಿನ ವೃತ್ತಿಜೀವನವನ್ನು ಇನ್ನು ಸ್ವಲ್ಪ ಸಮಯದವರೆಗೆ ವಿಸ್ತರಿಸಲು ಮತ್ತು ವಿಶ್ವಕಪ್​ವರೆಗೆ ಮುಂದುವರಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅದಕ್ಕಾಗಿಯೇ ಫಿಟ್​ನೆಸ್​ ಬಗ್ಗೆ ಸಂಪೂರ್ಣವಾಗಿ ಗಮನಹರಿಸಿರುವ ಮುಂಬೈ ಬ್ಯಾಟ್ಸ್‌ಮನ್ ತಮ್ಮ ಗುರಿಯತ್ತ ಸಾಗುತ್ತಿರುವಂತೆ ತೋರುತ್ತಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ-2025 ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಬಾರಿಗೆ ರೋಹಿತ್​ ಆಡಿದ್ದರು. ನ್ಯೂಜಿಲೆಂಡ್ ವಿರುದ್ಧದ ಫೈನಲ್‌ನಲ್ಲಿ 76 ರನ್ ಗಳಿಸುವ ಮೂಲಕ ತಂಡದ ಗೆಲುವಿನಲ್ಲಿ ರೋಹಿತ್​ ಶರ್ಮ ಅವರು ಪ್ರಮುಖ ಪಾತ್ರ ವಹಿಸಿದರು. ಏಕದಿನ ಸ್ವರೂಪದಲ್ಲಿ ನಡೆದ ಈ ಮೆಗಾ ಈವೆಂಟ್‌ನಲ್ಲಿ ಭಾರತ ವಿಜೇತರಾಗಿ ಹೊರಹೊಮ್ಮಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ.

ಐಸಿಸಿ ಚಾಂಪಿಯನ್ಸ್​ ಟ್ರೋಫಿ ಗೆಲುವಿನೊಂದಿಗೆ ಮಹೇಂದ್ರ ಸಿಂಗ್ ಧೋನಿ (3) ನಂತರ ಟೀಮ್ ಇಂಡಿಯಾಗೆ ಅತಿ ಹೆಚ್ಚು ಐಸಿಸಿ ಪ್ರಶಸ್ತಿಗಳನ್ನು (2) ನೀಡಿದ ನಾಯಕನೆಂಬ ಹೆಗ್ಗಳಿಕೆಗೆ ರೋಹಿತ್​ ಶರ್ಮ ಭಾಜನರಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮೊದಲು, ಟಿ20 ವಿಶ್ವಕಪ್-2024 ರಲ್ಲಿ ರೋಹಿತ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಸದ್ಯ ಏಕದಿನ ಪಂದ್ಯಗಳಲ್ಲಿ ಆಡುವುದನ್ನು ಮುಂದುವರೆಸಿರುವ ರೋಹಿತ್ ಶರ್ಮಾ, ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯೊಂದಿಗೆ ರೋಹಿತ್ ಶರ್ಮ ಮತ್ತು ಮತ್ತೊಬ್ಬ ದಿಗ್ಗಜ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಭಾರತ ತಂಡಕ್ಕೆ ಮರಳಲಿದ್ದಾರೆ. ರೋಹಿತ್ ಅವರಂತೆಯೇ ಕೊಹ್ಲಿ ಕೂಡ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್‌ಗಳಿಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿ, ಟೀಮ್ ಇಂಡಿಯಾ ಅಕ್ಟೋಬರ್ 19 ರಿಂದ 25 ರವರೆಗೆ ಮೂರು ಏಕದಿನ ಪಂದ್ಯಗಳನ್ನು ಮತ್ತು ಅಕ್ಟೋಬರ್ 29 ರಿಂದ ನವೆಂಬರ್ 8 ರವರೆಗೆ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net