ಚಾಂಪಿಯನ್ಸ್ ಟ್ರೋಫಿ ಅಂಗಳದಲ್ಲಿ ದಾಖಲೆ ಬರೆದ ಕ್ಯಾಪ್ಟನ್​! ರೆಕಾರ್ಡ್​ ಪಟ್ಟಿಯಲ್ಲಿ ಸಚಿನ್​ ತೆಂಡೂಲ್ಕರ್​ ಹಿಂದಿಕ್ಕಿದ ರೋಹಿತ್​ | Rohit Sharma

ವಿಜಯವಾಣಿ - 2025-02-20T211008.599
Published on

Rohit Sharma: ಇಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಮೊದಲ ಇನ್ನಿಂಗ್ಸ್​ ಅಂತ್ಯಕ್ಕೆ ಬಾಂಗ್ಲಾದೇಶ 228 ರನ್​ಗೆ ಆಲ್​ಔಟ್ ಆಯಿತು. ಈ ಗುರಿಯನ್ನು ಬೆನ್ನಟ್ಟಿರುವ ಭಾರತಕ್ಕೆ ಕ್ಯಾಪ್ಟನ್ ರೋಹಿತ್ ಶರ್ಮ ಉತ್ತಮ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದೇ ಆದರೂ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ.

ಐವತ್ತು ಓವರ್‌ಗಳ ಫಾರ್ಮೆಟ್​ನಲ್ಲಿ 11,000 ರನ್‌ಗಳನ್ನು ಪೂರೈಸಿದ ಸ್ಟಾರ್​ ಬ್ಯಾಟರ್​ಗಳ ಪೈಕಿ ರೋಹಿತ್ ಶರ್ಮ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. 11 ಸಾವಿರ ರನ್​ ದಾಖಲಿಸಲು ಕೇವಲ 12 ರನ್​ ಅಷ್ಟೇ ಬಾಕಿ ಉಳಿದಿತ್ತು. ಇಂದಿನ ಪಂದ್ಯದಲ್ಲಿ 41 ರನ್ ಬಾರಿಸುವ ಮೂಲಕ ಈ ದಾಖಲೆಗೆ ರೋಹಿತ್ ಸಾಕ್ಷಿಯಾಗಿದ್ದಾರೆ. ಈ ದಾಖಲೆಯನ್ನು ನಿರ್ಮಿಸಿದ ನಾಲ್ಕನೇ ಭಾರತೀಯ ಬ್ಯಾಟರ್​ ಆಗಿ ರೋಹಿತ್ ಹೊರಹೊಮ್ಮಿದ್ದಾರೆ.

ಕ್ರಿಕೆಟ್​ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 11,000 ರನ್‌ಗಳನ್ನು ಗಳಿಸಿದ ಮೊದಲ ಮೂವರು ಬ್ಯಾಟ್ಸ್‌ಮನ್‌ಗಳಾಗಿದ್ದರು. ಈ ಸಾಲಿನಲ್ಲಿ ವಿರಾಟ್​ ಮೊದಲಿಗಿದ್ದಾರೆ. ಸಚಿನ್ ತೆಂಡೂಲ್ಕರ್​ರನ್ನು ಹಿಂದಿಕ್ಕುವ ಮೂಲಕ ಈ ದಾಖಲೆಯನ್ನು ಪೂರ್ಣಗೊಳಿಸಿದ ಎರಡನೇ ಅತ್ಯಂತ ವೇಗದ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 222 ಇನ್ನಿಂಗ್ಸ್‌ಗಳಲ್ಲಿ 11,000 ರನ್‌ಗಳನ್ನು ಪೂರ್ಣಗೊಳಿಸಿದ ವಿರಾಟ್ ಕೊಹ್ಲಿ ನಂತರದಲ್ಲಿ ರೋಹಿತ್ ಇದ್ದಾರೆ. 261 ಇನ್ನಿಂಗ್ಸ್‌ಗಳನ್ನು ಆಡಿರುವ ಶರ್ಮ, 276 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಮಾಡಿದ್ದ ಸಚಿನ್​ರನ್ನು ಇದೀಗ ಹಿಂದಿಕ್ಕಿದ್ದಾರೆ.

ಚಾಂಪಿಯನ್ಸ್​ ಟ್ರೋಫಿ ಟೂರ್ನಿಯಲ್ಲಿ ಇಂದು ಬಾಂಗ್ಲಾದೇಶ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಿರುವ ಭಾರತ, ಬಾಂಗ್ಲಾ ಹುಲಿಗಳಿಗೆ ಸೋಲಿನ ರುಚಿ ಉಣಿಸುವ ತವಕದಲ್ಲಿದೆ. ಈ ಪಂದ್ಯ ಗೆದ್ದರೆ, ಇದೇ ಭಾನುವಾರ (ಫೆ.23) ಆತಿಥೇಯ ಪಾಕಿಸ್ತಾನ ವಿರುದ್ಧ ಭಾರತ ತನ್ನ ಎರಡನೇ ಪಂದ್ಯವನ್ನು ದುಬೈನಲ್ಲಿ ಆಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net