ಟೀಮ್​ ಇಂಡಿಯಾದಿಂದ ಮೋಸದಾಟ! ಇಂಜಮಾಮ್ ಆರೋಪಕ್ಕೆ ಖಡಕ್​ ತಿರುಗೇಟು ಕೊಟ್ಟ ರೋಹಿತ್​ ಶರ್ಮ

Rohit Sharma
Published on

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಸತತ ಜಯಗಳಿಸುತ್ತಿರುವ ಟೀಮ್​ ಇಂಡಿಯಾ ಮತ್ತೊಂದು ಮಹತ್ವದ ಕದನಕ್ಕೆ ಸಜ್ಜಾಗಿದೆ. ಇಂದು (ಜೂನ್​ 27) ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ರೋಹಿತ್​ ಪಡೆ ಕಾದಾಡಲಿದೆ. ಗಯಾನಾದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮಾ, ಪಾಕಿಸ್ತಾನದ ದಿಗ್ಗಜ ಹಾಗೂ ಮಾಜಿ ಆಟಗಾರ ಇಂಜಮಾಮ್ ಉಲ್ ಹಕ್‌ ಆರೋಪಕ್ಕೆ ದಿಟ್ಟ ಉತ್ತರ ನೀಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್​ 8 ಪಂದ್ಯದಲ್ಲಿ ಟೀಮ್​ ಇಂಡಿಯಾ ಬೌಲರ್ ಅರ್ಷದೀಪ್ ಸಿಂಗ್ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಇಂಜಮಾಮ್​ ಗಂಭೀರ ಆರೋಪ ಮಾಡಿದ್ದರು. ಈ ಬಗ್ಗೆ ರೋಹಿತ್​ರನ್ನು ಪ್ರಶ್ನಿಸಿದಾಗ ಖಡಕ್​ ತಿರುಗೇಟು ನೀಡಿದ್ದಾರೆ.

ಇಂಜಮಾಮ್​ ಆರೋಪ ಏನು?

ಜೂನ್​ 25ರಂದು ಆಸ್ಟ್ರೇಲಿಯಾ ವಿರುದ್ಧ ನಡೆದ ಸೂಪರ್​ 08 ಪಂದ್ಯದಲ್ಲಿ ಟೀಮ್​ ಇಂಡಿಯಾ 24 ರನ್​ಗಳ ಭರ್ಜರಿ ಜಯ ಗಳಿಸಿತ್ತು. ಟೀಮ್​ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವೇಗಿ ಅರ್ಷದೀಪ್​ ಸಿಂಗ್​ ಬಾಲ್ ಟ್ಯಾಂಪರಿಂಗ್​ ಮಾಡುವ ಮೂಲಕ ಮೋಸದಾಟವಾಡಿದ್ದಾರೆ. 15ನೇ ಓವರ್​ನಲ್ಲಿ ಅರ್ಷದೀಪ್​ ಬೌಲಿಂಗ್​ ಮಾಡಿದಾಗ ಚೆಂಡು ರಿವರ್ಸ್​ ಸ್ವಿಂಗ್​ ಆಗಲು ಶುರು ಮಾಡಿತು. ಇದು ಅಂಪೈರ್​ಗಳ ಗಮನಕ್ಕೆ ಬಂದಿಲ್ಲ. ಅರ್ಷದೀಪ್​ ಸಿಂಗ್​ 15ನೇ ಓವರ್​ ಎಸೆದಾಗ ಚೆಂಡು ರಿವರ್ಸ್​ ಸ್ವಿಂಗ್​ ಆಗುತ್ತಿದೆ ಎಂದರೆ ನೀವು ಗಮನಿಸಬೇಕಾದ ಅಂಶ ತುಂಬಾ ಇದೆ. 12-13ನೇ ಓವರ್​ನಲ್ಲಿ ಸ್ವಿಂಗ್​ ಆಗದ ಬಾಲ್​ ಅರ್ಷದೀಪ್​ ಎಸೆತದಲ್ಲಿ ಹೇಗೆ ಸ್ವಿಂಗ್​ ಆಗಲು ಸಾಧ್ಯ. ಒಂದು ವೇಳೆ ಪಾಕಿಸ್ತಾನದ ಆಟಗಾರರು ಈ ಕೆಲಸ ಮಾಡಿದ್ದರೆ ಇಷ್ಟೊತ್ತಿಗಾಗಲೇ ವಿಶ್ವ ಕ್ರಿಕೆಟ್​ನಲ್ಲಿ ಭಾರೀ ಕೋಲಾಹಲ ಉಂಟಾಗಿರುತ್ತಿತ್ತು. ಅರ್ಷದೀಪ್​ ರಿವರ್ಸ್​ ಸ್ವಿಂಗ್​ ಮಾಡಿದ್ದಾರೆ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಬಾಲ್​ ಟ್ಯಾಂಪರಿಂಗ್​ ಮಾಡಿದರೆ ಈ ರೀತಿ ಮಾಡಲು ಸಾಧ್ಯ ಎಂದು ಇಂಜಮಾಮ್​ ಆರೋಪ ಮಾಡಿದ್ದರು.

ರೋಹಿತ್​ ತಿರುಗೇಟು ಏನು? ಇಂಜಮಾಮ್​ ಆರೋಪಕ್ಕೆ ತಿರುಗೇಟು ನೀಡಿರುವ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮಾ, ಇದು ಅಗ್ಗದ ಮತ್ತು ಮೂರ್ಖತನದ ಆರೋಪಗಳು ಎಂದಿದ್ದಾರೆ. ಇಲ್ಲಿರುವುದು ಬಿಸಿ ಮತ್ತು ಒಣ ಪಿಚ್‌ಗಳು. ಇಲ್ಲಿ ರಿವರ್ಸ್ ಸ್ವಿಂಗ್ ಆಗದೇ ಇನ್ನೆಲ್ಲಿ ಆಗುತ್ತದೆ? ನಾವೇನು ಇಂಗ್ಲೆಂಡ್​ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಆಡುತ್ತಿಲ್ಲ ಎಂದು ರೋಹಿತ್​ ಶರ್ಮ ಖಾರವಾಗಿ ಪ್ರತಿಕ್ರಿಯೆ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net