

ಮುಲ್ಲನ್ಪುರ: ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 17ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನದ ಫಲವಾಗಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 9 ರನ್ಗಳ ಜಯ ಸಾಧಿಸಿದೆ. ಇನ್ನು ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಎರಡು ಅಪರೂಪದ ದಾಖಲೆಗಳನ್ನು ಬರೆದಿದ್ದಾರೆ.
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾಗೆ ಇದು 250ನೇ ಐಪಿಎಲ್ ಪಂದ್ಯವಾಗಿದೆ. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಐಪಿಎಲ್ನಲ್ಲಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂ.ಎಸ್. ಧೋನಿ ಈ ಸಾಧನೆ ಮಾಡಿದ್ದಾರೆ.
ಇನ್ನೂ ಈ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದ ರೋಹಿತ್ ಶರ್ಮಾ 25 ಎಸೆತಗಳನ್ನು ಎದುರಿಸಿ 2 ಬೌಂಡರಿ, 3 ಸಿಕ್ಸರ್ ಸಹಿತ 36 ರನ್ಗಳನ್ನು ಸಿಡಿಸಿ ಸ್ಯಾಮ್ ಕರ್ರನ್ಗೆ ವಿಕೆಟ್ ಒಪ್ಪಿಸಿದರು. 3 ಸಿಕ್ಸರ್ ಬಾರಿಸಿದ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ಪರ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ದಾಖಲೆ ನಿರ್ಮಿಸಿದರು.
ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಇದುವರೆಗೆ 224 ಸಿಕ್ಸರ್ ಸಿಡಿಸಿದ್ದಾರೆ. ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ಕಿರಾನ್ ಪೊಲಾರ್ಡ್ 223 ಸಿಕ್ಸರ್ಗಳನ್ನು ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರು. ಇದಲ್ಲದೆ ರೋಹಿತ್ ಶರ್ಮಾ ಐಪಿಎಲ್ನಲ್ಲಿ 6500 ರನ್ಗಳನ್ನು ಬಾರಿಸಿದ್ದಾರೆ. ಇದರೊಂದಿಗೆ ಐಪಿಎಲ್ನಲ್ಲಿ 6500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ.
ರೋಹಿತ್ಗಿಂತ ಮೊದಲು ವಿರಾಟ್ ಕೊಹ್ಲಿ, ಶಿಖರ್ ಧವನ್ ಮತ್ತು ಡೇವಿಡ್ ವಾರ್ನರ್ ಮಾತ್ರ ಐಪಿಎಲ್ನಲ್ಲಿ 6500 ರನ್ಗಳ ಗಡಿ ದಾಟಿದ ಸಾಧನೆ ಮಾಡಿದ್ದರು. ಪ್ರಸ್ತುತ ಐಪಿಎಲ್ನಲ್ಲಿ ಅಧಿಕ ರನ್ ಬಾರಿಸಿರುವವರ ಪಟ್ಟಿಯಲ್ಲಿ 7624 ರನ್ ಬಾರಿಸಿರುವ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ.