

ಮುಂಬೈ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ, ಮುಂಬೈ ಇಂಡಿಯನ್ಸ್ ತಂಡದಲ್ಲಿ ತನ್ನ ಉತ್ತರಾಧಿಕಾರಿ ಹಾರ್ದಿಕ್ ಪಾಂಡ್ಯ ನಾಯಕತ್ವ ಶೈಲಿಯ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಇದರಿಂದಾಗಿ ಅವರು ಟೂರ್ನಿ ಮುಗಿದ ಬೆನ್ನಲ್ಲೇ ಮುಂಬೈ ತಂಡದಿಂದ ಹೊರನಡೆಯಲಿದ್ದಾರೆ ಮತ್ತು 2025ರ ಟೂರ್ನಿಗೆ ಮುನ್ನ ನಡೆಯಲಿರುವ ಮೆಗಾ ಹರಾಜಿನಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಐಪಿಎಲ್-17ರಲ್ಲಿ ಆರಂಭಿಕ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ನಡುವೆ ನಾಯಕ ಹಾರ್ದಿಕ್ ಪಾಂಡ್ಯ ಕೈಗೊಂಡಿರುವ ಕೆಲ ನಿರ್ಧಾರಗಳು ರೋಹಿತ್ಗೆ ಸಮಾಧಾನ ತಂದಿಲ್ಲ. ಹೀಗಾಗಿ ಇಬ್ಬರ ನಡುವೆ ವಾಗ್ವಾದವೂ ನಡೆದಿದ್ದು, ಇದರಿಂದ ತಂಡದ ಡ್ರೆಸ್ಸಿಂಗ್ ರೂಮ್ ವಾತಾವರಣವೂ ಹದಗೆಟ್ಟಿದೆ ಎಂದು ವರದಿಯಾಗಿದೆ.
36 ವರ್ಷದ ರೋಹಿತ್ ಶರ್ಮ 2011ರಿಂದ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗವಾಗಿದ್ದು, ನಾಯಕರಾಗಿ ತಂಡಕ್ಕೆ 5 ಬಾರಿ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ. ಜತೆಗೆ ಟೂರ್ನಿ ಇತಿಹಾಸದಲ್ಲಿ ತಂಡದ ಪರ ಗರಿಷ್ಠ ರನ್ ಬಾರಿಸಿದ ಮತ್ತು ಪಂದ್ಯ ಆಡಿದ ದಾಖಲೆ ಹೊಂದಿದ್ದಾರೆ. ಆದರೆ ಈ ಬಾರಿ ರೋಹಿತ್ರನ್ನು ನಾಯಕತ್ವದಿಂದ ಕೆಳಗಿಳಿಸಿರುವ ಮುಂಬೈ ಫ್ರಾಂಚೈಸಿ ಮಾಲೀಕರು, ಗುಜರಾತ್ ಟೈಟಾನ್ಸ್ ತಂಡದಿಂದ ಗೌಪ್ಯ ಮೊತ್ತಕ್ಕೆ ವರ್ಗಾವಣೆಗೊಂಡ ಹಾರ್ದಿಕ್ಗೆ ನಾಯಕತ್ವ ವಹಿಸಿದೆ. ಈ ನಡೆ ತಂಡದ ಅಭಿಮಾನಿಗಳ ಟೀಕೆಗೂ ಗುರಿಯಾಗಿತ್ತು. ಆರಂಭಿಕ 3 ಪಂದ್ಯಗಳ ಸೋಲಿನ ಬಳಿಕ ಈ ಟೀಕೆಗಳು ಇನ್ನಷ್ಟು ಹೆಚ್ಚಾಗಿವೆ.
ಗುಜರಾತ್ ವಿರುದ್ಧದ ಮೊದಲ ಪಂದ್ಯದಲ್ಲಿ ಚೇಸಿಂಗ್ ವೇಳೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಹಾರ್ದಿಕ್ ನಿರ್ಧಾರ ಟೀಕೆಗೆ ಗುರಿಯಾಗಿತ್ತು. ಬಳಿಕ 2ನೇ ಪಂದ್ಯದಲ್ಲಿ ಸನ್ರೈಸರ್ಸ್ ಬ್ಯಾಟರ್ಗಳು ರನ್ಪ್ರವಾಹ ಹರಿಸುತ್ತಿದ್ದ ನಡುವೆಯೂ ಜಸ್ಪ್ರೀತ್ ಬುಮ್ರಾಗೆ ಆರಂಭಿಕ 12 ಓವರ್ಗಳಲ್ಲಿ ಹೆಚ್ಚಿನ ಬೌಲಿಂಗ್ ನೀಡದಿದ್ದುದು ಕೂಡ ಕೆಂಗಣ್ಣಿಗೆ ಗುರಿಯಾಗಿತ್ತು. ತವರಿನಲ್ಲಿ ಆಡಿದ 3ನೇ ಪಂದ್ಯದಲ್ಲಿ ಮುಂಬೈ ಬ್ಯಾಟಿಂಗ್ ವಿಭಾಗ ದಯನೀಯ ವೈಫಲ್ಯ ಕಂಡಿತ್ತು.
ರೋಹಿತ್ಗೆ ಮತ್ತೆ ಸಾರಥ್ಯ?
ರವೀಂದ್ರ ಜಡೇಜಾ 2022ರ ಐಪಿಎಲ್ಗೆ ಮುನ್ನ ಸಿಎಸ್ಕೆ ತಂಡದ ನಾಯಕರಾಗಿ ನೇಮಕಗೊಂಡಿದ್ದರೂ, ಆರಂಭಿಕ 4 ಪಂದ್ಯಗಳ ಸೋಲಿನ ಬಳಿಕ ಮತ್ತೆ ಎಂಎಸ್ ಧೋನಿಗೆ ಪಟ್ಟ ಕಟ್ಟಲಾಗಿತ್ತು. ಆರಂಭಿಕ 3 ಪಂದ್ಯಗಳ ಸೋಲಿನಿಂದ ಕಂಗೆಟ್ಟಿರುವ ಮುಂಬೈ ಇಂಡಿಯನ್ಸ್ ತಂಡದಲ್ಲೂ ಈಗ ಹಾರ್ದಿಕ್ ಪಾಂಡ್ಯರನ್ನು ನಾಯಕತ್ವದಿಂದ ಕೆಳಗಿಳಿಸಿ ಮತ್ತೆ ರೋಹಿತ್ ಶರ್ಮಗೆ ಜವಾಬ್ದಾರಿ ನೀಡಬಹುದು ಎಂದು ಕ್ರಿಕೆಟ್ ವಲಯದಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಮಾಜಿ ಕ್ರಿಕೆಟಿಗರಾದ ಆಡಂ ಗಿಲ್ಕ್ರಿಸ್ಟ್, ಮೈಕೆಲ್ ವಾನ್ ಮುಂತಾದವರೂ ಇದಕ್ಕೆ ಧ್ವನಿಗೂಡಿಸಿದ್ದಾರೆ.