More

    IPL 2024: ಶಶಾಂಕ್​ ಶೈನಿಂಗ್​; ಗುಜರಾತ್​ ಎದುರು ಪಂಜಾಬ್​ಗೆ ರೋಚಕ ಜಯ

    ಅಹಮದಾಬಾದ್​: ಆಟಗಾರರ ಹರಾಜಿನಲ್ಲಿ ಉಂಟಾಗಿದ್ದ ಹೆಸರಿನ ಗೊಂದಲದಿಂದಾಗಿ ಬೇರೊಬ್ಬ ಆಟಗಾರನ ಬದಲಾಗಿ ಪಂಜಾಬ್​ ಕಿಂಗ್ಸ್​ ತಂಡಕ್ಕೆ ಸೇರ್ಪಡೆಯಾಗಿದ್ದ ಛತ್ತೀಸ್​ಗಢದ ಬ್ಯಾಟರ್​ ಶಶಾಂಕ್​ ಸಿಂಗ್​ ಇದೀಗ ಐಪಿಎಲ್​-17ರಲ್ಲಿ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದಾರೆ. ಶಶಾಂಕ್​ ಸಿಂಗ್​ (61*ರನ್​, 29 ಎಸೆತ, 6 ಬೌಂಡರಿ, 4 ಸಿಕ್ಸರ್​) ಸ್ಫೋಟಕ ಬ್ಯಾಟಿಂಗ್​ ನಿರ್ವಹಣೆಯ ಬಲದಿಂದ ಪಂಜಾಬ್​ ಕಿಂಗ್ಸ್​ ತಂಡ ಆತಿಥೇಯ ಗುಜರಾತ್​ ಟೈಟಾನ್ಸ್​ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದೆ. ಈ ಮೂಲಕ ಶಿಖರ್​ ಧವನ್​ ಬಳಗ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಗುಜರಾತ್​ ತಂಡ ತವರು ಅಂಗಣದಲ್ಲಿ ಮೊದಲ ಸೋಲು ಅನುಭವಿಸಿತು.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುರುವಾರ ನಡೆದ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಗುಜರಾತ್​ ತಂಡ, ಇನಿಂಗ್ಸ್​ ಪೂರ್ತಿ ನಿಂತು ಆಸರೆಯಾದ ನಾಯಕ ಶುಭಮಾನ್​ ಗಿಲ್​ (89*ರನ್​, 48 ಎಸೆತ, 6 ಬೌಂಡರಿ, 4 ಸಿಕ್ಸರ್​) ಆಟ ಮತ್ತು ಇತರ ಬ್ಯಾಟರ್​ಗಳ ಬೆಂಬಲದಿಂದ 4 ವಿಕೆಟ್​ಗೆ 199 ರನ್​ ಪೇರಿಸಿತು. ಪ್ರತಿಯಾಗಿ ಪಂಜಾಬ್​ ತಂಡ ಮೊದಲ 9 ಓವರ್​ನೊಳಗೆ ಅಗ್ರ 4 ವಿಕೆಟ್​ ಕಳೆದುಕೊಂಡರೂ, ಶಶಾಂಕ್​ ಸಿಂಗ್​ ವೀರೋಚಿತ ಸಾಹಸದಿಂದ 19.5 ಓವರ್​ಗಳಲ್ಲಿ 7 ವಿಕೆಟ್​ಗೆ 200 ರನ್​ ಸೇರಿಸಿ ರೋಚಕ ಗೆಲುವು ಒಲಿಸಿಕೊಂಡಿತು.

    ಪಂಜಾಬ್​ಗೆ ಆರಂಭಿಕ ಆಘಾತ: ಬೃಹತ್​ ಮೊತ್ತದ ಚೇಸಿಂಗ್​ಗೆ ನಿಂತ ಪಂಜಾಬ್​, ನಾಯಕ ಶಿಖರ್​ ಧವನ್​ (1) ವಿಕೆಟ್​ಅನ್ನು 2ನೇ ಓವರ್​ನಲ್ಲೇ ಕಳೆದುಕೊಂಡಿತು. ಉಮೇಶ್​ ಯಾದವ್​ ಎಸೆತದಲ್ಲಿ ಧವನ್​ ಬೌಲ್ಡ್​ ಆದರು. ಬಳಿಕ ಜಾನಿ ಬೇರ್​ಸ್ಟೋ (22) ಮತ್ತು ಪ್ರಭ್​ಸಿಮ್ರನ್​ ಸಿಂಗ್​ (35) 2ನೇ ವಿಕೆಟ್​ಗೆ 24 ಎಸೆತಗಳಲ್ಲಿ 35 ರನ್​ ಗಳಿಸಿ ಪಂಜಾಬ್​ಗೆ ಚೇತರಿಕೆ ಒದಗಿಸಿದರು. ಈ ವೇಳೆ ದಾಳಿಗಿಳಿದ ಯುವ ಸ್ಪಿನ್ನರ್​ ನೂರ್​ ಅಹ್ಮದ್​ (32ಕ್ಕೆ 2) ಸತತ 2 ಓವರ್​ಗಳಲ್ಲಿ ಇಬ್ಬರಿಗೂ ಡಗೌಟ್​ ದಾರಿ ತೋರಿಸಿದರು. ಬೆನ್ನಲ್ಲೇ ಆಲ್ರೌಂಡರ್​ ಸ್ಯಾಮ್​ ಕರನ್​ (5) ಕೂಡ ಔಟ್​ ಆಗುವುದರೊಂದಿಗೆ ಪಂಜಾಬ್​ 70 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

    ಶಶಾಂಕ್​ ಸ್ಫೋಟಕ ಆಟ: ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಶಶಾಂಕ್​ ಸಿಂಗ್​ ಸ್ಫೋಟಕ ಬ್ಯಾಟಿಂಗ್​ ಮೂಲಕ ಪಂಜಾಬ್​ ಗೆಲುವಿನಾಸೆಗೆ ಮರುಜೀವ ತುಂಬಿದರು. 5ನೇ ವಿಕೆಟ್​ಗೆ ಸಿಕಂದರ್​ ರಾಜಾ (12) ಜತೆ 22 ಎಸೆತಗಳಲ್ಲಿ 41, 6ನೇ ವಿಕೆಟ್​ಗೆ ಜಿತೇಶ್​ ಶರ್ಮ (16) ಜತೆ 19 ಎಸೆತಗಳಲ್ಲಿ 39 ಮತ್ತು 7ನೇ ವಿಕೆಟ್​ಗೆ ಇಂಪ್ಯಾಕ್ಟ್​ ಆಟಗಾರ ಆಶುತೋಷ್​ ಶರ್ಮ (31) 22 ಎಸೆತಗಳಲ್ಲಿ 43 ರನ್​ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

    ಕೊನೇ ಓವರ್​ನಲ್ಲಿ 7 ರನ್​ ಬೇಕಿದ್ದಾಗ ಯುವ ಬೌಲರ್​ ದರ್ಶನ್​ ನಲ್ಕಂಡೆ ದಾಳಿಗಿಳಿದರು. ಮೊದಲ ಎಸೆತದಲ್ಲೇ ಆಶುತೋಷ್​ ಔಟಾದರೂ, ಶಶಾಂಕ್​ ಇನ್ನೊಂದು ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು.

    ರಾಷ್ಟ್ರೀಯ ಹಾಕಿ ಶಿಬಿರಕ್ಕೆ ರಾಜ್ಯದ ಕೃತಿಕಾ ಆಯ್ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts