ಮೆಲ್ಬೋರ್ನ್​ ಟೆಸ್ಟ್​ ಬಳಿಕ ರೋಹಿತ್​ ಶರ್ಮ ನಿವೃತ್ತಿಗೆ ಮುಂದಾದರೂ ಹಿತೈಷಿಗಳಿಂದ ತಡೆ! ಸಿಟ್ಟಾಗಿದ್ದರು ಗಂಭೀರ್​!

web rt s
Published on

ನವದೆಹಲಿ: ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಕಳೆದ ಆಸ್ಟ್ರೆಲಿಯಾ ಪ್ರವಾಸದಲ್ಲಿ 4ನೇ ಟೆಸ್ಟ್​ ಪಂದ್ಯದ ಬಳಿಕ ನಿವೃತ್ತಿ ಹೊಂದಲು ಮುಂದಾಗಿದ್ದರು. ಆದರೆ ಅವರ ಹಿತೈಷಿಗಳು ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸಿದ್ದರು. ಸಿಡ್ನಿ ಟೆಸ್ಟ್​ ಪಂದ್ಯಕ್ಕೆ ಮುನ್ನ ರೋಹಿತ್​ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳುವ ನಿರ್ಧಾರದಿಂದ ಹಿಂದೆ ಸರಿದಿದ್ದು ಕೋಚ್​ ಗೌತಮ್​ ಗಂಭೀರ್​ ಅಸಮಾಧಾನಕ್ಕೂ ಕಾರಣವಾಗಿತ್ತು ಎಂದು ವರದಿಯಾಗಿದೆ.

ರೋಹಿತ್​ ಶರ್ಮ ಮೆಲ್ಬೋರ್ನ್​ನಲ್ಲಿ ನಡೆದ ಬಾಕ್ಸಿಂಗ್​ ಡೇ ಟೆಸ್ಟ್​ ಬೆನ್ನಲ್ಲೇ ನಿವೃತ್ತಿಯತ್ತ ಮನಸ್ಸು ಮಾಡಿದ್ದರು. ಆದರೆ ಆರ್​. ಅಶ್ವಿನ್​ ನಂತರ ಸರಣಿಯಲ್ಲಿ ಇನ್ನೊಂದು ನಿವೃತ್ತಿ ಘೋಷಣೆ ಬೇಡ ಎಂದು ಅವರ ಆಪ್ತರು ಮನವೊಲಿಸಿದರು. ಈ ನಡುವೆ ಸಿಡ್ನಿ ಟೆಸ್ಟ್​ ಪಂದ್ಯದ 15ರ ಬಳಗದಿಂದಲೂ ರೋಹಿತ್​ರನ್ನು ಹೊರಗಿಡಲು ಮುಂದಾಗಿದ್ದ ಗಂಭೀರ್​ಗೆ ಈ ಯು-ಟರ್ನ್​ ಸಿಟ್ಟು ತರಿಸಿತ್ತು. ಇದರಿಂದಾಗಿ ಕೊನೇ ಟೆಸ್ಟ್​ಗೆ ಮುನ್ನಾದಿನ ಅವರು 11ರ ಬಳಗದ ಬಗ್ಗೆ ಗುಟ್ಟುಬಿಟ್ಟುಕೊಡಲಿಲ್ಲ. ನಂತರ ಸಿಡ್ನಿ ಟೆಸ್ಟ್​ ಪಂದ್ಯದ 2ನೇ ದಿನದಾಟದ ವೇಳೆ ರೋಹಿತ್​, ನಿವೃತ್ತಿ ಸದ್ಯಕ್ಕಿಲ್ಲ ಎಂದು ಪ್ರಸಾರ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು.

ಆಸೀಸ್​ ಪ್ರವಾಸದುದ್ದಕ್ಕೂ ರೋಹಿತ್​-ಗಂಭೀರ್​ ನಡುವೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ತಂಡ ಸಂಯೋಜನೆ, ಟಾಸ್​ ಆಯ್ಕೆ ಸಹಿತ ಹಲವು ನಿರ್ಧಾರಗಳಿಗೆ ಸಂಬಂಧಿಸಿ ಇಬ್ಬರ ನಡುವೆ ಒಮ್ಮತ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net