

Irfan Pathan : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಬಗ್ಗೆ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಾಡಿರುವ ಕಾಮೆಂಟ್ ಇದೀಗ ವೈರಲ್ ಆಗಿದೆ. ರೋಹಿತ್ ಏನಾದರೂ ಕ್ಯಾಪ್ಟನ್ ಆಗಿರದಿದ್ದರೆ ಅವರನ್ನು ತಂಡದಿಂದ ಕೈಬಿಡಲಾಗುತ್ತಿತ್ತು. ರೋಹಿತ್ ಅವರು ಬ್ಯಾಟ್ಸ್‌ಮನ್ ಆಗಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದು, ತಂಡದ ಸಂಯೋಜನೆಯನ್ನು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪಠಾಣ್ ಹೇಳಿದರು.
ನಾಯಕ ರೋಹಿತ್ ಶರ್ಮ ಕಳೆದ ಕೆಲವು ವರ್ಷಗಳಿಂದ ಉತ್ತಮ ಫಾರ್ಮ್ಗಾಗಿ ಕಷ್ಟಪಡುತ್ತಿದ್ದಾರೆ. ಕಳೆದ 15 ಇನ್ನಿಂಗ್ಸ್‌ಗಳಲ್ಲಿ ಅವರು ಒಮ್ಮೆ ಮಾತ್ರ ಅರ್ಧಶತಕದ ಗಡಿ ತಲುಪಿದ್ದಾರೆ. ರೋಹಿತ್ ಅವರು 10.93 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲೂ ತನ್ನ ಸಾಮರ್ಥ್ಯ ತೋರಲು ಸಾಧ್ಯವಾಗಲಿಲ್ಲ. ತಮ್ಮ ಬ್ಯಾಟಿಂಗ್‌ನಿಂದ ತಂಡಕ್ಕೆ ಪ್ರಮುಖ ಆಟಗಾರನಾಗುವ ನಿರೀಕ್ಷೆಯನ್ನು ಹುಸಿ ಮಾಡಿದ್ದು, ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫಲರಾಗಿ ತಂಡಕ್ಕೆ ಹೊರೆಯಾಗುತ್ತಿದ್ದಾರೆ ಎಂದು ಪಠಾಣ್ ಹೇಳಿದರು.
ವೈಯಕ್ತಿಕ ಕಾರಣಗಳಿಂದ ರೋಹಿತ್ ಶರ್ಮ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಈ ಪಂದ್ಯವನ್ನು ಭಾರತ ಗೆದ್ದುಕೊಂಡಿತು. ರೋಹಿತ್ ಅವರು ಎರಡನೇ ಟೆಸ್ಟ್‌ಗೆ ಹಿಂದಿರುಗಿದರು. ಆದರೆ, ಆ ಪಂದ್ಯವನ್ನು ಭಾರತ ಸೋತಿತು. ಮೂರನೇ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾ ಆಯಿತು. ಆದರೆ, ನಾಲ್ಕನೇ ಪಂದ್ಯದಲ್ಲಿ ಮತ್ತೆ ಭಾರತ ಹೀನಾಯ ಸೋಲು ಅನುಭವಿಸಿತು. ಇದರೊಂದಿಗೆ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸೀಸ್ 2-1ರಲ್ಲಿ ಮುನ್ನಡೆ ಸಾಧಿಸಿದೆ.
ಪೂರ್ಣ ವೈಫಲ್ಯದಿಂದ ತಂಡಕ್ಕೆ ಹೊರೆಯಾಗಿ ಪರಿಣಮಿಸಿರುವ ರೋಹಿತ್ ಶರ್ಮ, ನಿವೃತ್ತಿ ಘೋಷಿಸಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಸರಣಿ ಮುಗಿದ ನಂತರ ಹಿಟ್‌ಮ್ಯಾನ್ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ರವಿಶಾಸ್ತ್ರಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ, ಇರ್ಫಾನ್ ಪಠಾಣ್, ರೋಹಿತ್ ನಿವೃತ್ತಿ ತೆಗೆದುಕೊಳ್ಳುವುದು ಸರಿ ಎನ್ನುವ ಅರ್ಥದಲ್ಲೇ ಮಾತನಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸುಮಾರು 20,000 ರನ್ ಗಳಿಸಿರುವ ಹಿಟ್‌ಮ್ಯಾನ್ ಈಗ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ. ಫಾರ್ಮ್ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾಯಕರಾಗಿರುವ ಕಾರಣ ತಂಡದಲ್ಲಿದ್ದಾರೆ. ಒಂದು ವೇಳೆ ನಾಯಕನಾಗಿರದೇ ಇದ್ದಿದ್ದರೆ ಅಂತಿಮ ತಂಡದಲ್ಲಿ ಸ್ಥಾನ ಸಿಗುತ್ತಿರಲಿಲ್ಲ. ರೋಹಿತ್ ಬದಲಾಗಿ ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್ ಓಪನರ್‌ಗಳಾಗಿ ಮತ್ತು ಶುಭಮನ್ ಗಿಲ್ ಒನ್‌ಡೌನ್‌ನಲ್ಲಿ ಬರುತ್ತಿದ್ದರು ಎಂದು ಪಠಾಣ್ ಹೇಳಿದ್ದಾರೆ. (ಏಜೆನ್ಸೀಸ್)