ಮುಂಬೈ ನಾಯಕತ್ವ ಕಸಿದಿದ್ದಕ್ಕೆ ರೋಹಿತ್​ ಅಭಿಮಾನಿಗಳಿಂದ 'ಅನ್​ಫಾಲೋ' ಪ್ರತಿಭಟನೆ; ಸಿಎಸ್​ಕೆ ತಂಡಕ್ಕೆ ಲಾಭ!

rohit web
Published on

ಮುಂಬೈ: ಐದು ಬಾರಿ ಐಪಿಎಲ್​ ಟ್ರೋಫಿ ಗೆದ್ದುಕೊಟ್ಟಿರುವ ಭರ್ಜರಿ ಯಶಸ್ಸಿನ ನಡುವೆಯೂ ರೋಹಿತ್​ ಶರ್ಮ ಅವರನ್ನು ಮುಂಬೈ ಇಂಡಿಯನ್ಸ್​ ತಂಡದ ನಾಯಕತ್ವದಿಂದ ಅಕಾಲಿಕವಾಗಿ ಕೆಳಗಿಳಿಸಿರುವುದಕ್ಕೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಲಾಂತರ ಸಂಖ್ಯೆಯಲ್ಲಿ ಅನ್​ಫಾಲೋ ಮಾಡುವ ಮೂಲಕವೂ ಅಭಿಮಾನಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಮುಂಬೈ ತಂಡದ ಕೆಲ ಸಹ ಆಟಗಾರರೂ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ.

ಇತ್ತೀಚೆಗೆ ಹಾರ್ದಿಕ್​ ಪಾಂಡ್ಯ ಗುಜರಾತ್​ ಟೈಟಾನ್ಸ್​ನಿಂದ ಮುಂಬೈ ತಂಡಕ್ಕೆ ಮರಳಿದಾಗ ಸಂಭ್ರಮಿಸಿದ್ದ ಅಭಿಮಾನಿಗಳಿಗೆ, ರೋಹಿತ್​ರನ್ನು ದಿಢೀರನೆ ನಾಯಕತ್ವದಿಂದ ಕೆಳಗಿಳಿಸಿರುವುದು ತೀವ್ರ ಆಘಾತ ನೀಡಿದೆ. 2011ರಿಂದ ಮುಂಬೈ ತಂಡದ ಭಾಗವಾಗಿರುವ ರೋಹಿತ್​, 2013ರಲ್ಲಿ ಮೊದಲ ಬಾರಿ ನಾಯಕತ್ವ ವಹಿಸಿಕೊಂಡಾಗಲೇ ತಂಡ ಮೊದಲ ಬಾರಿ ಐಪಿಎಲ್​ ಟ್ರೋಫಿ ಗೆದ್ದಿತ್ತು. ನಂತರದಲ್ಲಿ 6 ವರ್ಷಗಳ ಅಂತರದಲ್ಲಿ ಮತ್ತೆ 4 ಟ್ರೋಫಿ ಗೆದ್ದುಕೊಟ್ಟಿದ್ದರು.

ಹಿಂಬಾಲಕರ ನಷ್ಟ, ಸಿಎಸ್​ಕೆಗೆ ಅಗ್ರ ಪಟ್ಟ ಬಿಟ್ಟುಕೊಟ್ಟ ಮುಂಬೈ

ರೋಹಿತ್​ ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ಮುಂಬೈ ಇಂಡಿಯನ್ಸ್​ ತಂಡ ಇನ್​ಸ್ಟಾಗ್ರಾಂನಲ್ಲಿ ಸುಮಾರು 5 ಲಕ್ಷ ಹಿಂಬಾಲಕರನ್ನು ಕಳೆದುಕೊಂಡಿದೆ ಎನ್ನಲಾಗುತ್ತಿದೆ. ಇದರಿಂದ ಅತಿಹೆಚ್ಚು ಹಿಂಬಾಲರನ್ನು ಹೊಂದಿರುವ ಐಪಿಎಲ್​ ತಂಡಗಳ ಪೈಕಿ ಮುಂಬೈಯನ್ನು ಹಿಂದಿಕ್ಕಿ ಚೆನ್ನೆ$ ಸೂಪರ್​ಕಿಂಗ್ಸ್​ ತಂಡ ಅಗ್ರಸ್ಥಾನಕ್ಕೇರಿದೆ. ಸಿಎಸ್​ಕೆ 13.1 ದಶಲಕ್ಷ ಹಿಂಬಾಲಕರನ್ನು ಹೊಂದಿದ್ದರೆ, ಮುಂಬೈ ಹಿಂಬಾಲಕರ ಸಂಖ್ಯೆ ಈಗ 13.2 ಲಕ್ಷದಿಂದ 12.7 ದಶಲಕ್ಷಕ್ಕೆ ಕುಸಿದಿದೆ. ಎಕ್ಸ್​ನಲ್ಲೂ ಮುಂಬೈ ತಂಡದ ಹಿಂಬಾಲಕರ ಸಂಖ್ಯೆ 8.6ರಿಂದ 8.2 ದಶಲಕ್ಷಕ್ಕೆ ಇಳಿದಿದೆ. ಆದರೆ ಇದರಲ್ಲಿ ಸಿಎಸ್​ಕೆ ಈಗಾಗಲೆ 10.1 ದಶಲಕ್ಷ ಹಿಂಬಾಕರೊಂದಿಗೆ ಅಗ್ರಸ್ಥಾನದಲ್ಲಿತ್ತು.

ಸೂರ್ಯ ಹೃದಯ ಭಗ್ನ!

ರೋಹಿತ್​ರನ್ನು ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಮುಂಬೈ ತಂಡದ ಸಹ&ಆಟಗಾರ ಸೂರ್ಯಕುಮಾರ್​ ಯಾದವ್​ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹೃದಯ ಭಗ್ನಗೊಂಡಿರುವ ಇಮೋಜಿ ಪ್ರಕಟಿಸಿದ್ದಾರೆ. ಈ ಮೂಲಕ, ರೋಹಿತ್​ ನಾಯಕತ್ವ ಕಸಿದಿದ್ದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೂರ್ಯಕುಮಾರ್​ ಪತ್ನಿ ದೇವಿಶಾ ಶೆಟ್ಟಿ ಕೂಡ, "ನೀವು ಹೇಗೆ ಜನರನ್ನು ನಡೆಸಿಕೊಳ್ಳುತ್ತೀರಿ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಲಾಗುತ್ತದೆ' ಎಂಬ ಸಂದೇಶದ ಪೋಸ್ಟ್​ ಮೂಲಕ ರೋಹಿತ್​ ಬೆನ್ನಿಗೆ ನಿಂತಂತಿದೆ.

ಜೆರ್ಸಿ, ಧ್ವಜಕ್ಕೆ ಬೆಂಕಿ!

ಮುಂಬೈ ಇಂಡಿಯನ್ಸ್​ ತಂಡದ ಜೆರ್ಸಿ, ಧ್ವಜವನ್ನು ಸುಡುವ ವಿಡಿಯೋಗಳನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡುವ ಮೂಲಕವೂ ಕೆಲ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net