

ಚೆನ್ನೈ: ಫಿಕ್ಸಿಂಗ್ ಆರೋಪ ಮಾಡಿದ್ದ ತಮಿಳುನಾಡಿನ ಐಪಿಎಸ್ ಅಧಿಕಾರಿ ಜಿ. ಸಂಪತ್ ಕುಮಾರ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಗೆಲುವು ಸಾಧಿಸಿದ್ದಾರೆ. ಸಂಪತ್ ಕುಮಾರ್ಗೆ ಮದ್ರಾಸ್ ಹೈಕೋರ್ಟ್ 15 ದಿನಗಳ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ.
ನ್ಯಾಯಮೂರ್ತಿಗಳಾದ ಎಸ್ಎಸ್ ಸುಂದರ್ ಮತ್ತು ಸುಂದರ್ ಮೋಹನ್ ಒಳಗೊಂಡ ವಿಭಾಗೀಯ ಪೀಠ, ಜೈಲು ಶಿಕ್ಷೆಯನ್ನು 30 ದಿನಗಳ ಕಾಲ ಅಮಾನತಿನಲ್ಲಿಟ್ಟಿದ್ದು, ಸಂಪತ್ ಕುಮಾರ್ಗೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಸಮಯಾವಕಾಶ ಕಲ್ಪಿಸಿದೆ.
ಪ್ರಕರಣದ ಹಿನ್ನೆಲೆ: 2013ರಲ್ಲಿ ಐಪಿಎಲ್ ಬೆಟ್ಟಿಂಗ್ ಪ್ರಕರಣ ಭುಗಿಲೆದ್ದಾಗ ಸಂಪತ್ ಕುಮಾರ್, ಧೋನಿ ವಿರುದ್ಧ ಫಿಕ್ಸಿಂಗ್ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಧೋನಿ 2014ರಲ್ಲಿ ಸಂಪತ್ ವಿರುದ್ಧ 100 ಕೋಟಿ ರೂ. ಮೊತ್ತದ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಇದರಿಂದ ನ್ಯಾಯಾಲಯ, ಧೋನಿ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಸೂಚಿಸಿತ್ತು. ಆದರೂ, ಪ್ರಕರಣದಲ್ಲಿ ಸಂಪತ್ ಸಲ್ಲಿಸಿದ್ದ ಅಫಿಡವಿತ್ನಲ್ಲಿ ಮತ್ತೆ ಧೋನಿ ವಿರುದ್ಧ ಫಿಕ್ಸಿಂಗ್ ಆರೋಪಗಳನ್ನು ಮುಂದುವರಿಸಿದ್ದರು. ಹೀಗಾಗಿ ಧೋನಿ, ಸಂಪತ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನೂ ದಾಖಲಿಸಿದ್ದರು.