

ನವದೆಹಲಿ: ಭಾರತದ ಸೀಮಿತ ಓವರ್ಗಳ ತಂಡದ ಉಪನಾಯಕ ರೋಹಿತ್ ಶರ್ಮ ಕರೊನಾ ವೈರಸ್ ವಿರುದ್ಧದ ಹೋರಾಟಕ್ಕೆ 80 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಮೊತ್ತದಲ್ಲಿ ಅವರು 45 ಲಕ್ಷ ರೂ.ಗಳನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡಿದರೆ, 25 ಲಕ್ಷ ರೂ.
ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿ ದ್ದಾರೆ. ತಲಾ 5 ಲಕ್ಷ ರೂ.ಗಳನ್ನು ಬೀದಿ ನಾಯಿಗಳ ಸುರಕ್ಷತೆ ಮತ್ತು ಬಡವರಿಗೆ ಆಹಾರ ಹಂಚುತ್ತಿರುವ ‘ಝೊಮಾಟೊ ಫೀಡಿಂಗ್ ಇಂಡಿಯಾ’ ಅಭಿಯಾನಕ್ಕೆ ನೀಡಿದ್ದಾರೆ.
ಅನಿಲ್ ಕುಂಬ್ಳೆ, ಫುಟ್ಬಾಲ್ ತಂಡ ಗೌಪ್ಯ ನೆರವು: ಭಾರತ ತಂಡದ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಪ್ರಧಾನ ಮಂತ್ರಿ ನಾಗರಿಕರ ಸಹಾಯ ಮತ್ತು ಪರಿಹಾರ ತುತು ಸ್ಥಿತಿ ನಿಧಿ (ಪಿಎಂ-ಕೇರ್ಸ್) ಹಾಗೂ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ಗೌಪ್ಯ ಮೊತ್ತದ ದೇಣಿಗೆ ಘೊಷಿಸಿದ್ದಾರೆ. ವಿರಾಟ್ ಕೊಹ್ಲಿ ಮಾದರಿಯಲ್ಲೇ ಕುಂಬ್ಳೆ ದೇಣಿಗೆ ಮೊತ್ತವನ್ನು ಬಹಿರಂಗಪಡಿಸಿಲ್ಲ. ಇದೇ ವೇಳೆ ಭಾರತ ಫುಟ್ಬಾಲ್ ತಂಡವೂ ಗೌಪ್ಯ ಮೊತ್ತದ ದೇಣಿಗೆ ನೀಡಿದೆ. ತಂಡದ ಎಲ್ಲ ಆಟಗಾರರು ಹಣ ಸೇರಿಸಿ ಪಿಎಂ-ಕೇರ್ಸ್ಗೆ ದೇಣಿಗೆ ನೀಡಿದ್ದೇವೆ ಎಂದು ತಂಡದ ನಾಯಕ ಸುನೀಲ್ ಛೇಟ್ರಿ ತಿಳಿಸಿದ್ದಾರೆ.
ನೀರಜ್ ಚೋಪ್ರಾ 3 ಲಕ್ಷ ರೂ.: ಏಷ್ಯಾಡ್ ಸ್ವರ್ಣ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ 3 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. 2 ಲಕ್ಷ ರೂ.ಗಳನ್ನು ಪಿಎಂ-ಕೇರ್ಸ್ ಮತ್ತು 1 ಲಕ್ಷ ರೂ.ಗಳನ್ನು ಹರಿಯಾಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ನೀರಜ್ ಚೋಪ್ರಾ ತಿಳಿಸಿದ್ದಾರೆ. ಹರಿಯಾಣದ ಪಾನಿಪತ್ನವರಾದ ನೀರಜ್ ಚೋಪ್ರಾ ಟೋಕಿಯೊ ಒಲಿಂಪಿಕ್ಸ್ಗೆ ಈಗಾಗಲೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಭಾರತೀಯ ಟೇಬಲ್ ಟೆನಿಸ್ ಫೆಡರೇಷನ್ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದೆ.
ಸಾನಿಯಾ 1.25 ಕೋಟಿ ರೂ. ಸಂಗ್ರಹ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಲಾಕ್ಡೌನ್ ನಡುವೆ ಸಂಕಷ್ಟದಲ್ಲಿರುವ ಬಡ ಕುಟುಂಬಗಳ ನೆರವಿಗಾಗಿ 1.25 ಕೋಟಿ ರೂ. ಸಂಗ್ರಹಿಸಿದ್ದಾರೆ. ಕೇವಲ 1 ವಾರದಲ್ಲಿ ಈ ಮೊತ್ತವನ್ನು ಸಂಗ್ರಹಿಸಿ ಸುಮಾರು 1 ಲಕ್ಷ ಜನರಿಗೆ ಹಂಚಿರುವೆ ಎಂದು ಸಾನಿಯಾ ಟ್ವಿಟರ್ನಲ್ಲಿ ತಿಳಿಸಿದ್ದಾರೆ.