ಕ್ಯಾಚ್​ ಬಿಟ್ಟಿದ್ದಕ್ಕೆ ಅಂದು ಕೊಟ್ಟ ಭರವಸೆ ಉಳಿಸಿಕೊಳ್ಳದ ರೋಹಿತ್: ಮತ್ತೊಮ್ಮೆ ನೆನಪಿಸಿದ ಅಕ್ಷರ್​ ಪಟೇಲ್​! Rohit Sharma

Rohit Sharma
Published on

Rohit Sharma : ಭಾರತ ತಂಡವು ಸತತ ಎರಡು ಪಂದ್ಯಗಳನ್ನು ಗೆದ್ದ ನಂತರ 2025ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ತಲುಪಿದೆ. ಇದರ ನಡುವೆ ನಾಯಕ ರೋಹಿತ್ ಶರ್ಮ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್‌ಗೆ ನೀಡಿದ್ದ ಡಿನ್ನರ್​ ಭರವಸೆಯನ್ನು ಉಳಿಸಿಕೊಂಡಿದ್ದಾರೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಸ್ವತಃ ಅಕ್ಷರ್​ ಅವರೇ ಇದೀಗ ಉತ್ತರ ನೀಡಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಕ್ಷರ್ ಪಟೇಲ್ ಅವರು ಒಂದು ಸುವರ್ಣಾವಕಾಶವನ್ನು ಕಳೆದುಕೊಂಡರು. ಫೆಬ್ರವರಿ 20ರಂದು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ಹ್ಯಾಟ್ರಿಕ್ ಪಡೆಯುವ ಅವಕಾಶವನ್ನು ಸ್ವಲ್ಪದರಲ್ಲೇ ಕಳೆದುಕೊಂಡರು. ಅಕ್ಷರ್ ಪಟೇಲ್ ಸತತ ಎರಡು ಎಸೆತಗಳಲ್ಲಿ ತಂಜಿದ್ ಮತ್ತು ಮುಷ್ಫಿಕರ್ ಅವರ ವಿಕೆಟ್ ಪಡೆದರು. ಈ ವೇಳೆ ಅವರು ಹ್ಯಾಟ್ರಿಕ್ ಅಂಚಿನಲ್ಲಿದ್ದರು. ಜಾಕಿರ್ ಅಲಿ ಕ್ರೀಸ್‌ಗೆ ಬಂದಾಗ ಅಕ್ಷರ್​ ಅದ್ಭುತವಾದ ಚೆಂಡನ್ನು ಎಸೆದರು. ಆ ಚೆಂಡು ಜಾಕಿರ್ ಬ್ಯಾಟ್‌ನ ಅಂಚಿಗೆ ತಗುಲಿ, ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್ ಶರ್ಮ ಅವರ ಕೈಗೆ ಬಿತ್ತು.

ಆದರೆ, ರೋಹಿತ್ ಶರ್ಮ ತುಂಬಾ ಸುಲಭವಾದ ಕ್ಯಾಚ್ ಅನ್ನು ಮಿಸ್​ ಮಾಡಿದರು. ಇದರೊಂದಿಗೆ, ಅಕ್ಷರ್ ಅವರ ಹ್ಯಾಟ್ರಿಕ್ ವಿಕೆಟ್​ ಸಾಧನೆ ಮಿಸ್​ ಆಯಿತು. ಕ್ಯಾಚ್ ಬಿಟ್ಟ ಬಳಿಕ ತಾಳ್ಮೆ ಕಳೆದುಕೊಂಡ ರೋಹಿತ್ ಶರ್ಮ, ಪದೇ ಪದೇ ತಮ್ಮ ಕೈಯನ್ನು ನೆಲದ ಮೇಲೆ ಹೊಡೆದುಕೊಂಡು ಬೇಸರ ಹೊರಹಾಕಿದರು. ಇದಾದ ಬಳಿಕ ಅಕ್ಷರ್ ಬಳಿ ಮೈದಾನದಲ್ಲೇ ಕ್ಷಮೆಯಾಚಿಸಿದರು.

ಬಾಂಗ್ಲಾದೇಶ ಪಂದ್ಯದ ನಂತರ ಇದೇ ವಿಷಯದ ಬಗ್ಗೆ ಮಾತನಾಡಿದ ರೋಹಿತ್ ಶರ್ಮ, ಕ್ಯಾಚ್ ಬಿಟ್ಟಿದ್ದಕ್ಕೆ ಪರಿಹಾರವಾಗಿ ಅಕ್ಷರ್ ಅವರನ್ನು ಡಿನ್ನರ್​ಗೆ ಕರೆದೊಯ್ಯುವುದಾಗಿ ಭರವಸೆ ನೀಡಿದರು. ಒಂದು ವೇಳೆ ರೋಹಿತ್ ಶರ್ಮ ಆ ಕ್ಯಾಚ್ ಹಿಡಿದಿದ್ದರೆ, ಅಕ್ಷರ್ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಹ್ಯಾಟ್ರಿಕ್ ಪಡೆದ ಎರಡನೇ ಆಟಗಾರನಾಗುತ್ತಿದ್ದರು.

ರೋಹಿತ್​ಗೆ ಡಿನ್ನರ್​ ನೆನಪಿಸಿದ ಅಕ್ಷರ್​

ಅಕ್ಷರ್​ಗೆ ಕೊಟ್ಟ ಮಾತನ್ನು ರೋಹಿತ್​ ಉಳಿಸಿಕೊಂಡಿದ್ದಾರೆಯೇ? ಇಂಥದ್ದೊಂದು ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಅಕ್ಷರ್ ಅವರೇ ಇತ್ತೀಚೆಗೆ ಉತ್ತರ ನೀಡಿದ್ದಾರೆ. ಈಗ ನಮಗೆ ಒಂದು ವಾರದ ವಿರಾಮವಿದೆ. ನಾವು ಸೆಮಿಸ್‌ಗೆ ಅರ್ಹತೆ ಪಡೆದಿದ್ದೇವೆ. ಆದ್ದರಿಂದ ನನ್ನ ಭೋಜನದ ಬಗ್ಗೆ ರೋಹಿತ್ ಅವರನ್ನು ಕೇಳಲು ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ ಎಂದು ಅಕ್ಷರ್ ಪಟೇಲ್ ಟ್ವೀಟ್​ ಮೂಲಕ ತಿಳಿಸಿದ್ದಾರೆ. ಪಾಕ್​ ವಿರುದ್ಧ ಪಂದ್ಯವನ್ನು ಗೆದ್ದ ಬಳಿಕ ಅಕ್ಷರ್​ ಈ ಮಾತನ್ನು ಆಡಿದ್ದಾರೆ. ಇದರರ್ಥ ರೋಹಿತ್ ಶರ್ಮ ಇಲ್ಲಿಯವರೆಗೆ ಭೋಜನದ ಭರವಸೆಯನ್ನು ಉಳಿಸಿಕೊಂಡಿಲ್ಲ. ಹಿಟ್‌ಮ್ಯಾನ್, ಅಕ್ಷರ್‌ನನ್ನು ಯಾವಾಗ ಭೋಜನಕ್ಕೆ ಕರೆದೊಯ್ಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಅಂದಹಾಗೆ ಭಾರತ ತಂಡ ಮಾರ್ಚ್ 2ರಂದು ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದಲ್ಲಿ ತನ್ನ ಕೊನೆಯ ಪಂದ್ಯವನ್ನು ಆಡಲಿದೆ. ದುಬೈನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯವನ್ನೂ ಗೆದ್ದು ಟೇಬಲ್ ಟಾಪರ್ ಆಗಿ ಸೆಮಿಫೈನಲ್ ಪ್ರವೇಶಿಸಬೇಕೆಂದು ಭಾರತೀಯ ಅಭಿಮಾನಿಗಳು ಬಯಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net