

ಮುಂಬೈ: ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ನಡೆದ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿತು.
ಈ ಮುಖೇನ ನೇರವಾಗಿ ಫೈನಲ್ ಪ್ರವೇಶಿಸಿತು. ಇಡೀ ಭಾರತವೇ ಟೀಮ್ ಇಂಡಿಯಾ ಜಯವನ್ನು ಸಂಭ್ರಮಿಸಿದ್ದು, ಹಬ್ಬದಂತೆ ಪಟಾಕಿ ಸಿಡಿಸಿ ಸಂತಸಪಟ್ಟಿದೆ. ಆದ್ರೆ, ಈ ಮಧ್ಯೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಿಕಂದರ್ ಬಖ್ತ್, ಟಾಸ್ ಹಾಕುವ ವೇಳೆ ರೋಹಿತ್ ಶರ್ಮಾ ಮೋಸ ಮಾಡಿದ್ದಾರೆ ಎಂದು ಆರೋಪ ಎಸಗಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಉದ್ದೇಶಪೂರ್ವಕವಾಗಿ ಟಾಸ್ ಕಾಯಿನ್ ಅನ್ನು ದೂರ ಎಸೆದರು ಎಂದ ಸಿಕಂದರ್ ಬಖ್ತ್, ಏಕದಿನ ವಿಶ್ವಕಪ್ 2023ರ ಸೆಮಿಸ್‌ನಲ್ಲಿ ಟಾಸ್ ಫಿಕ್ಸಿಂಗ್ ಆಗಿದೆ ಎಂದು ಆರೋಪಿಸಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಾಣ್ಯವನ್ನು ಸಾಧ್ಯವಾದಷ್ಟು ದೂರ ಎಸೆಯುವ ಮೂಲಕ ಟಾಸ್ ಫಿಕ್ಸಿಂಗ್ ಮಾಡಿದ್ದಾರೆ ಎಂದು ಬಖ್ತ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಕುಡಿವ ನೀರು, ಮೇವು ಪೂರೈಕೆಗೆ ಆದ್ಯತೆ ನೀಡಬೇಕು
ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಿರ್ಣಾಯಕ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಲಗೈ ಬ್ಯಾಟರ್ ಆದ ರೋಹಿತ್, ಆರಂಭದಲ್ಲೇ ಸ್ಪೋಟಕ ಬ್ಯಾಟಿಂಗ್ ಮಾಡಿ 29 ಎಸೆತಗಳಲ್ಲಿ 47 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಶರ್ಮಾ ಬೆನ್ನಲ್ಲೇ ರಿಟೈರ್ಡ್ ಹರ್ಟ್ ಆದ ಶುಭಮನ್ ಗಿಲ್ 79* ರನ್ ಗಳಿಸಿ ಹೊರನಡೆದರು. ತದನಂತರ ಅಖಾಡಕ್ಕೆ ಬಂದ ರನ್ ಮಷಿನ್ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರ ಸ್ಪೋಟಕ ಬ್ಯಾಟಿಂಗ್ ಭಾರತ ಬೃಹತ್ ಮೊತ್ತ ಗಳಿಸುವಲ್ಲಿ ಹೆಚ್ಚು ಸಹಾಯ ಮಾಡಿತು. ಈ ಪಂದ್ಯದಲ್ಲಿ ಇಬ್ಬರು ಶತಕ ಸಿಡಿಸಿ, ಟೀಮ್ ಇಂಡಿಯಾಗೆ ಮತ್ತಷ್ಟು ಬಲವನ್ನು ನೀಡಿದರು.
ಪಾಕಿಸ್ತಾನದ ಕ್ರಿಕೆಟಿಗರು ಟೀಮ್ ಇಂಡಿಯಾ ವಿರುದ್ಧ ಈ ರೀತಿ ತಪ್ಪು ಆರೋಪ ಮಾಡಿರುವುದು ಇದೇ ಪ್ರಥಮ ಬಾರಿ ಅಲ್ಲ. ಇದಕ್ಕೂ ಮೊದಲು, ಹಲವು ಬಾರಿ ಇಂಥ ಆರೋಪಗಳನ್ನು ಎಸಗಿದ್ದಾರೆ,(ಏಜೆನ್ಸೀಸ್).