ನಾನು 2 ಮಕ್ಕಳ ತಂದೆ, ಹಾಗಾಗಿ... ನಿವೃತ್ತಿ ಕುರಿತು ಮೌನಮುರಿದ Rohit Sharma

Rohit Sharma
Published on

ಸಿಡ್ನಿ: ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಅಂತಿಮ ಪಂದ್ಯದಲ್ಲಿ ಪ್ರವಾಸಿ ತಂಡವು ಆತಿಥೇಯರಿಗೆ ತಕ್ಕ ತಿರುಗೇಟು ನೀಡಿದ್ದು, ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಇನ್ನೂ ಸರಣಿಯ ಕೊನೆ ಪಂದ್ಯದಿಂದ ರೋಹಿತ್ ಶರ್ಮ (Rohit Sharma) ಹೊರಗುಳಿದಿದ್ದು, ಜಸ್ಪ್ರೀತ್​ ಬುಮ್ರಾಗೆ ನಾಯಕತ್ವವನ್ನು ವಹಿಸಲಾಗಿದೆ. ರೋಹಿತ್​ ಶರ್ಮ ಪಂದ್ಯದದಿಂದ ಹೊರಗುಳಿಯುವುದರ ಹಿಂದೆ ಹಲವಾರು ಕಾರಣಗಳನ್ನು ನೀಡಲಾಗಿದ್ದು, ಇದರಲ್ಲಿ ಪ್ರಮುಖವಾಗಿ ನಿವೃತ್ತಿಯ ವಿಚಾರವೂ ಕೇಳಿ ಬರುತ್ತಿದೆ.

ನ್ಯೂಜಿಲೆಂಡ್​ ವಿರುದ್ಧದ ಸರಣಿ ಸೇರಿದಂತೆ ಹಾಲಿ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಶರ್ಮರಿಂದ (Rohit Sharma) ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ನಾಯಕತ್ವದ ವಿಚಾರಕ್ಕೂ ಬರುವುದಾದರೆ ತಂಡ ಸರಣಿಗಳನ್ನು ಸೋಲುವ ಮೂಲಕ ಅನಪೇಕ್ಷಿತ ದಾಖಲೆಗಳಿಗೆ ಕೊರಳೊಡುತ್ತಿದ್ದು, ರೋಹಿತ್​ ಶರ್ಮ (Rohit Sharma) ನಿವೃತ್ತಿಗೆ ಆಗ್ರಹ ಕೇಳಿ ಬರುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಕೊನೆ ಟೆಸ್ಟ್​ ಪಂದ್ಯದಿಂದ ಹೊರಗುಳಿಯಲು ಇದೇ ಕಾರಣ ಎಂದು ಹೇಳಲಾಗಿದ್ದು, ಟೆಸ್ಟ್ ಸರಣಿ (test Series) ಮುಕ್ತಾಯದ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ನಿವೃತ್ತಿಗೆ ಸಂಬಂಧಿಸಿದಂತೆ ಸ್ವತಃ ರೋಹಿತ್​ ಶರ್ಮ ಸ್ಪಷ್ಟನೆ ನೀಡಿದ್ದಾರೆ.

ಸ್ಟಾರ್​ ಸ್ಫೋರ್ಟ್ಸ್​​ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರೋಹಿತ್ ಶರ್ಮ (Rohit Sharma), ಸಿಡ್ನಿ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ನಿರ್ಧಾರವನ್ನು ನಾನೇ ಖುದ್ದು ತೆಗೆದುಕೊಂಡಿದ್ದು. ಏಕೆಂದರೆ ನನ್ನ ಬ್ಯಾಟ್ ಈಗ ಸದ್ದು ಮಾಡುತ್ತಿಲ್ಲ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಾನು 2 ಮಕ್ಕಳ ತಂದೆ, ಹಾಗಾಗಿ ನಾನು ಸಹ ಸಂವೇದನಾಶೀಲ, ಪ್ರಬುದ್ಧ, ಯಾವಾಗ ಏನು ಮಾಡಬೇಕೆಂದು ನನಗೆ ತಿಳಿದಿದೆ. ಔಟ್ ಆಫ್ ಫಾರ್ಮ್​ನಲ್ಲಿರುವ ನಾನು ಇಂತಹ ಮಹತ್ವದ ಪಂದ್ಯವನ್ನು ಆಡಬಾರದು. ಆಡಲು ಅವಕಾಶ ಸಿಗಬಾರದು. ಹೀಗಾಗಿ ಸಿಡ್ನಿ ಟೆಸ್ಟ್​ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದೆ.

ನಾನು ಸಿಡ್ನಿ ಟೆಸ್ಟ್ ಪಂದ್ಯದಿಂದ ಮಾತ್ರ ಹೊರಗುಳಿದಿದ್ದೇನೆ. ನನ್ನ ಟೆಸ್ಟ್ ಕೆರಿಯರ್ ಅನ್ನು ಅಂತ್ಯಗೊಳಿಸಿಲ್ಲ. ಈಗ ರನ್‌ಗಳು ಬರುತ್ತಿಲ್ಲ ನಿಜ. ಆದರೆ 5 ತಿಂಗಳು ಕಳೆದರೂ ಬರುವುದಿಲ್ಲ ಎಂಬುದನ್ನು ನಾನು ನಂಬಲ್ಲ. ನಾನಂತು ಕಠಿಣ ಅಭ್ಯಾಸ ಮಾಡುತ್ತೇನೆ. ಈ ಮೂಲಕ ಫಾರ್ಮ್​ಗೆ ಮರಳಲಿದ್ದೇನೆ. ಹೀಗಾಗಿ ಸಿಡ್ನಿ ಪಂದ್ಯದಿಂದ ಹೊರಗುಳಿದಿರುವುದು ನನ್ನ ನಿವೃತ್ತಿಯ ನಿರ್ಧಾರವಲ್ಲ. ಹೊರಗೆ ಲ್ಯಾಪ್‌ಟಾಪ್, ಪೆನ್ನು – ಪೇಪರ್ ಹಿಡಿದು ಕುಳಿತವರು ನಿವೃತ್ತಿ ಯಾವಾಗ ಬರುತ್ತದೆ. ನಾನು ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದಿಲ್ಲ. ಹೀಗಾಗಿ ನನ್ನ ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ನನ್ನ ನಿವೃತ್ತಿಯನ್ನು ಎದುರು ನೋಡಬೇಡಿ ಎಂದು ರೋಹಿತ್​ ಶರ್ಮ (Rohit Sharma) ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net