ರೋಹಿತ್​​, ಕೊಹ್ಲಿಯಲ್ಲ ಭಾರತದ ಈ ಕ್ರಿಕೆಟಿಗನ ಬ್ಯಾಟಿಂಗ್​ ನೋಡುವುದೇ ಸ್ವರ್ಗ ಎಂದ ಆಸಿಸ್​ ದಿಗ್ಗಜ!

Team India
Published on

ನವದೆಹಲಿ: ಟೀಮ್ ಇಂಡಿಯಾದ ಪ್ರಸ್ತುತ ಬ್ಯಾಟಿಂಗ್ ಯೂನಿಟ್​ ಬಗ್ಗೆ ಮಾತನಾಡುವಾಗ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಮೊದಲು ನೆನಪಿಗೆ ಬರುತ್ತಾರೆ. ತಮ್ಮ ಅಮೋಘ ಬ್ಯಾಟಿಂಗ್‌ನಿಂದ ಈ ಜೋಡಿ ಎಲ್ಲರ ಮನದಲ್ಲಿ ಅಚ್ಚೊತ್ತಿದೆ. ಸಾವಿರಾರು ರನ್‌ಗಳು ಮತ್ತು ಲೆಕ್ಕವಿಲ್ಲದಷ್ಟು ದಾಖಲೆಗಳೊಂದಿಗೆ ಈ ಹಿರಿಯ ಆಟಗಾರರು ಆಧುನಿಕ ದಂತಕತೆಗಳೆಂದು ಹೆಸರಾಗಿದ್ದಾರೆ. ಕೇವಲ ತವರು ನೆಲದಲ್ಲಿ ಮಾತ್ರವಲ್ಲ, ಸಾಗರೋತ್ತರ ಸರಣಿಗಳಲ್ಲಿಯೂ ತಮ್ಮ ಅದ್ಭುತ ಪ್ರತಿಭೆಯನ್ನು ಈ ಜೋಡಿ ಪ್ರದರ್ಶಿಸಿದೆ. ಈ ಮೂಲಕ ಟೀಮ್ ಇಂಡಿಯಾಗೆ ಅನೇಕ ಅದ್ಭುತ ವಿಜಯಗಳನ್ನು ನೀಡಿದೆ. ಹೀಗಾಗಿಯೇ ತಾಯ್ನಾಡಿನಲ್ಲಿ ಮತ್ತು ವಿದೇಶಗಳಲ್ಲಿ ಈ ಜೋಡಿ ಹೆಚ್ಚಿನ ಫಾಲೋವರ್ಸ್​ ಹೊಂದಿದೆ.

ಆದರೆ, ಆಸ್ಟ್ರೇಲಿಯಾದ ಕ್ರಿಕೆಟ್​ ದಂತಕತೆ ಮ್ಯಾಥ್ಯೂ ಹೇಡನ್ ಅವರು ರೋಹಿತ್-ಕೊಹ್ಲಿಗಿಂತ ಯುವ ಬ್ಯಾಟರ್‌ ಆಟಕ್ಕೆ ಮನಸೋತಿದ್ದಾರೆ. ಆತನ ಆಟವನ್ನು ನೋಡುವುದೇ ಸ್ವರ್ಗ ಎಂದಿದ್ದಾರೆ. ತಮ್ಮ ದೇಶದ ಕ್ರೀಡಾಭಿಮಾನಿಗಳಿಗೂ ಆ ಆಟಗಾರನ ಬ್ಯಾಟಿಂಗ್ ಅಂದರೆ ಅಚ್ಚುಮೆಚ್ಚು ಎಂದಿದ್ದಾರೆ. ಅಷ್ಟಕ್ಕೂ ಆಸೀಸ್ ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿರುವ ಆ ಭಾರತೀಯ ಬ್ಯಾಟರ್ ಯಾರು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ಟೀಮ್​ ಇಂಡಿಯಾದ ಯುವ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ರಿಷಭ್​ ಪಂತ್ ತಮ್ಮ ದೇಶದ ಕ್ರೀಡಾಭಿಮಾನಿಗಳಿಗೆ ತುಂಬಾ ಇಷ್ಟವಾಗಿದ್ದಾರೆ ಎಂದು ಹೇಡನ್ ಹೇಳಿದ್ದಾರೆ. ರಿಷಭ್​ ಓರ್ವ ಅತ್ಯುತ್ತಮ ಬ್ಯಾಟ್ಸ್‌ಮನ್. ಬೌಲರ್‌ಗಳ ಮೇಲೆ ಮನಬಂದಂತೆ ದಾಳಿ ನಡೆಸುವ ಪಂತ್ ಅವರ ಕೌಶಲ್ಯವನ್ನು ಹೇಡನ್​ ಶ್ಲಾಘಿಸಿದ್ದಾರೆ. ಪಂದ್ಯ ಗೆಲ್ಲುವುದಕ್ಕಾಗಿ ಪಂತ್​ ಏನು ಬೇಕಾದರೂ ಮಾಡುತ್ತಾರೆ. ಗೆಲುವಿನ ದಡ ತಲುಪುವವರೆಗೂ ಆತ ವಿರಮಿಸುವುದಿಲ್ಲ. ಈ ಹಿಂದೆ ಆಸ್ಟ್ರೇಲಿಯಾಕ್ಕೆ ಬಂದಾಗ ಇಲ್ಲಿನ ಕ್ರೀಡಾಭಿಮಾನಿಗಳು ಪಂತ್​ ಬ್ಯಾಟಿಂಗ್ ಅನ್ನು ತುಂಬಾ ಇಷ್ಟಪಟ್ಟಿದ್ದರು ಎಂದು ಹೇಡನ್ ಶ್ಲಾಘಿಸಿದರು.

ಈ ಬಾರಿಯ ಆಸೀಸ್ ಪ್ರವಾಸದಲ್ಲಿ ಪಂತ್ ಜೊತೆಗೆ ವಿರಾಟ್ ಕೊಹ್ಲಿ ಕೂಡ ಉತ್ಸಾಹದಿಂದ ಆಡಲು ಪ್ರಯತ್ನಿಸಲಿದ್ದಾರೆ ಎಂದು ಹೇಡನ್ ಹೇಳಿದ್ದಾರೆ. ಕಾಂಗರೂ ನೆಲದ ಪರಿಸ್ಥಿತಿಗೆ ಹೊಂದಿಕೊಳ್ಳಲು ಭಾರತ ಯಾವ ರೀತಿಯ ಬ್ಯಾಟಿಂಗ್ ತಂತ್ರಗಳನ್ನು ಬಳಸುತ್ತದೆ ಎಂಬುದನ್ನು ನೋಡಲು ನಾನು ಆಸಕ್ತಿ ಹೊಂದಿದ್ದೇನೆ ಎಂದು ಹೇಡನ್​ ಹೇಳಿದರು.

2021ರಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಪಂತ್ ಒಂದು ರೇಂಜ್‌ನಲ್ಲಿ ಬ್ಯಾಟಿಂಗ್ ಮಾಡಿದ್ದರು. ಆಸ್ಟ್ರೇಲಿಯಾದ ಗಾಬ್ಬಾದಲ್ಲಿ ಕಾಂಗರೂಗಳನ್ನು ಸೋಲಿಸುವುದು ಯಾವುದೇ ತಂಡದ ಕನಸು. ಅಂತಹ ನೆಲದಲ್ಲಿ ಭಾರತ, ಕಾಂಗರೂ ಪಡೆಯನ್ನು ಸೋಲಿಸಿತು. ಬಾರ್ಡರ್​ ಗವಾಸ್ಕರ್​ ಟೆಸ್ಟ್‌ನಲ್ಲಿ ಪಂತ್ 138 ಎಸೆತಗಳಲ್ಲಿ 89 ರನ್ ಗಳಿಸಿದರು. ಈ ಟೆಸ್ಟ್ ಜೊತೆಗೆ ಆ ಸರಣಿಯಲ್ಲಿ ಪಂತ್ ಆಡಿದ ಧನಾಧನ್ ಇನ್ನಿಂಗ್ಸ್ ಆಸೀಸ್ ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆಯಂತೆ. ಅದಕ್ಕಾಗಿಯೇ ಹೇಡನ್ ಈ ರೀತಿಯ ಕಾಮೆಂಟ್​ಗಳನ್ನು ಮಾಡಿದ್ದಾರೆ.

ಅಂದಹಾಗೆ ಈ ವರ್ಷದ ಕೊನೆಯಲ್ಲಿ ಟೀಮ್​ ಇಂಡಿಯಾ ಮತ್ತೊಮ್ಮೆ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ. ಈ ಬಾರಿ ಪಂತ್ ಹೇಗೆ ಆಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net