

ನವದೆಹಲಿ: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದೆ. ರೋಹಿತ್ ಶರ್ಮ ಪಡೆ, ಸತತ ಗೆಲುವಿನೊಂದಿಗೆ ಸೂಪರ್-8 ಹಂತಕ್ಕೆ ಅರ್ಹತೆ ಪಡೆದಿದೆ. ಐರ್ಲೆಂಡ್, ಪಾಕಿಸ್ತಾನ ಮತ್ತು ಯುಎಸ್ಎ ತಂಡವನ್ನು ಸೆದೆಬಡಿದಿರುವ ಭಾರತ, ಇಂದು (ಜೂನ್ 15) ಕೆನಡಾ ತಂಡವನ್ನು ಎದುರಿಸಲಿದೆ. ಇಂದಿನ ಪಂದ್ಯವೂ ಸಹ ಭಾರತದ ಪಾಲಾಗಲಿದೆ. ಅದರಲ್ಲಿ ಅನುಮಾನವೇ ಇಲ್ಲ.
ಇದೇ ರೀತಿ ಟೀಮ್ ಇಂಡಿಯಾದ ಫಾರ್ಮ್ ಮುಂದುವರಿದರೆ ವಿಶ್ವಕಪ್ ಗೆಲ್ಲುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತಂಡದಲ್ಲಿ ಎಲ್ಲರೂ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್ ಘಟಕವು ಕೂಡ ಉತ್ತಮ ಲಯದಲ್ಲಿದೆ. ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಸಿರಾಜ್ ಮತ್ತು ಸ್ಪಿನ್ನರ್ ಅಕ್ಷರ್ ಪಟೇಲ್ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಡಗಿಸುತ್ತಿದ್ದಾರೆ. ಅದರಲ್ಲೂ ಬುಮ್ರಾ ಮತ್ತು ಅರ್ಷದೀಪ್ ಬೌಲಿಂಗ್‌ನಲ್ಲಿ ಎದುರಾಳಿ ತಂಡದ ಆಟಗಾರರು ಚೆಂಡನ್ನು ಮುಟ್ಟಲು ಹೆದರುತ್ತಿದ್ದಾರೆ.
ಅನಿರೀಕ್ಷಿತ ಬೌನ್ಸ್ ಮತ್ತು ಸ್ವಿಂಗ್‌ಗೆ ಕೊಡುಗೆ ನೀಡುವ ಅಮೆರಿಕದ ಪಿಚ್‌ಗಳಲ್ಲಿ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಟೀಮ್ ಇಂಡಿಯಾಗೂ ಬೌಲರ್‌ಗಳೇ ಹೀರೋ ಆಗುತ್ತಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಬೌಲರ್‌ಗಳು ತಂಡದ ಪ್ರಮುಖ ಶಕ್ತಿಯಾಗಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ ಅವರು ತಂಡದ ಅಗ್ರಗಣ್ಯ ಬೌಲರ್ ಆಗಿದ್ದಾರೆ. ಪಾಕಿಸ್ತಾನದ ವಿರುದ್ಧದ ಗೆಲುವಿನಲ್ಲಿ ಅವರು ವಹಿಸಿದ ಪಾತ್ರವನ್ನು ಪ್ರಶಂಸಿಸಲಾಗುತ್ತಿದೆ. ನಿರ್ಣಾಯಕ ಸಮಯದಲ್ಲಿ ಮಹಮ್ಮದ್ ರಿಜ್ವಾನ್ ವಿಕೆಟ್ ಪಡೆದು ಪಂದ್ಯವನ್ನು ಟೀಮ್ ಇಂಡಿಯಾದತ್ತ ತಿರುಗಿಸಿದರು. ಬುಮ್ರಾರನ್ನು ಎದುರಿಸಲಾಗದೆ ಪಾಕಿಸ್ತಾನ ಹಾಗೂ ಇತರೆ ತಂಡಗಳ ಬ್ಯಾಟ್ಸ್ಮನ್ಗಳು ಕೂಡ ಹೆದರಿದ್ದಾರೆ. ಈ ಹಿನ್ನಲೆಯಲ್ಲಿ ಭಾರತದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಬುಮ್ರಾ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ. ನಮ್ಮ ತಂಡದ ನಿಜವಾದ ಶಕ್ತಿ ರೋಹಿತ್ ಶರ್ಮ ಅಥವಾ ವಿರಾಟ್ ಕೊಹ್ಲಿ ಅಲ್ಲ, ತಂಡದಲ್ಲಿ ಬುಮ್ರಾ ಇರುವುದು ಅದೃಷ್ಟ ಹಾಗೂ ದೇವರ ಕೊಡುಗೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಟೀಮ್ ಇಂಡಿಯಾದಲ್ಲಿ ಬುಮ್ರಾ ಉಪಸ್ಥಿತಿಯು ಆಶೀರ್ವಾದವಾಗಿದೆ. ಈ ಹಿಂದೆ ಭಾರತ ತಂಡದಲ್ಲಿ ಇಂತಹ ಬೌಲರ್ ಇರಲೇ ಇಲ್ಲ. ಜಸ್ಪ್ರೀತ್ ಅವರಂತಹ ವೇಗದ ಬೌಲರ್ ಮೂರು ಮಾದರಿಗಳಲ್ಲಿ ಪ್ರಾಬಲ್ಯ ಸಾಧಿಸಿರುವುದು ತಂಡದ ದೊಡ್ಡ ಶಕ್ತಿಯಾಗಿದೆ. ಸೀಮರ್ ಒಬ್ಬ ವೈಟ್ ಬಾಲ್ ಕ್ರಿಕೆಟ್ ಅನ್ನು ಆಳುತ್ತಾನೆ ಎಂದು ನಾನು ಊಹಿಸಿರಲಿಲ್ಲ. ಆದರೆ ಬುಮ್ರಾ ಅದನ್ನು ಸಾಧ್ಯವಾಗಿಸಿದರು. ಟೆಸ್ಟ್ ಹಾಗೂ ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ಅವರ ಹವಾ ನಡೆಯುತ್ತಿದೆ. ಬುಮ್ರಾ ಮೇಲೆ ಪ್ರಾಬಲ್ಯ ಸಾಧಿಸುವ ಯಾವುದೇ ಬ್ಯಾಟ್ಸ್‌ಮನ್ ಇಲ್ಲ. ತನ್ನ ವಿರೋಧಿಗಳನ್ನು ಹೇಗೆ ನಾಶಮಾಡಬೇಕೆಂದು ಅವನಿಗೆ ತಿಳಿದಿದೆ. ಪ್ರಸ್ತುತ ಕ್ರಿಕೆಟ್‌ನಲ್ಲಿ ಬುಮ್ರಾ ಅತ್ಯುತ್ತಮ ಆಟಗಾರ ಎಂದು ರವಿಶಾಸ್ತ್ರಿ ಹೊಗಳಿದ್ದಾರೆ.
ಹರ್ಭಜನ್ ಸಿಂಗ್ ಕೂಡ ಟೀಮ್ ಇಂಡಿಯಾದ ವೇಗಿ ಬುಮ್ರಾರನ್ನು ಹೊಗಳಿದ್ದಾರೆ. ಆಧುನಿಕ ಕ್ರಿಕೆಟ್‌ನಲ್ಲಿ ಬುಮ್ರಾ ಶ್ರೇಷ್ಠ ಎಂದು ಭಜ್ಜಿ ಹೇಳಿದ್ದಾರೆ. ಆಸ್ಟ್ರೇಲಿಯಾದ ದಂತಕಥೆ ಗ್ಲೆನ್ ಮೆಕ್‌ಗ್ರಾತ್ ಮತ್ತು ಶ್ರೀಲಂಕಾದ ದಂತಕಥೆ ಲಸಿತ್ ಮಾಲಿಂಗ ಅವರಂತೆ ಬುಮ್ರಾ ಪ್ರಾಬಲ್ಯವನ್ನು ತೋರಿಸುತ್ತಿದ್ದಾರೆ ಮತ್ತು ಅವರ ಪ್ರಭಾವ ಸಾಮಾನ್ಯವಲ್ಲ ಎಂದಿದ್ದಾರೆ. (ಏಜೆನ್ಸೀಸ್)