

ತಮಿಳುನಾಡು: ಇದೇ ಸೆ.19ರಿಂದ ಚೆನ್ನೈನಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಸಂತಸ ಮೂಡಿಸಿದೆ. ಮೊದಲು ಬ್ಯಾಟಿಂಗ್ಗೆ ಇಳಿದ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಗಳು ಆರಂಭಿಕ ಹಂತದಲ್ಲೇ ಅಬ್ಬರಿಸುವಲ್ಲಿ ಮುಗ್ಗರಿಸಿದರೂ ಸಹ ಜಡೇಜಾ ಮತ್ತು ಆರ್. ಅಶ್ವಿನ್ ಬ್ಯಾಟಿಂಗ್ ಆರ್ಭಟದಿಂದ ಬಾಂಗ್ಲಾ ಪಡೆಯನ್ನು ಬಗ್ಗುಬಡಿಯುವಲ್ಲಿ ಕಡೆಗೂ ಯಶಸ್ವಿಯಾಯಿತು. ಇದೀಗ ನಾಲ್ಕನೇ ದಿನಕ್ಕೆ ಕಾಲಿಟ್ಟ ಟೆಸ್ಟ್ ಪಂದ್ಯದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮ ಮಾಡಿದ ಜಾದು ಸದ್ಯ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಕೇವಲ ಟೀಮ್ ಇಂಡಿಯಾದ ಕ್ಯಾಪ್ಟನ್ಸಿಗೆ ಮಾತ್ರ ಸೀಮಿತವಾಗದ ರೋಹಿತ್, ಮೈದಾನದಲ್ಲಿ ತಮ್ಮ ತುಂಟಾಟ, ಕಿತಾಪತಿಗಳಿಂದಲೇ ನೋಡುಗರ ಗಮನಸೆಳೆಯುತ್ತಾರೆ. ಆನ್ಫೀಲ್ಡ್ನಲ್ಲಿ ತಮ್ಮ ತಂಡ ಹಾಗೂ ಎದುರಾಳಿ ತಂಡದವರೊಂದಿಗೆ ಹಾಸ್ಯ ಚಟಾಕಿ ಸಿಡಿಸುವ 'ಹಿಟ್ಮ್ಯಾನ್', ಆಫ್ಫೀಲ್ಡ್ನಲ್ಲಿ ತಮ್ಮ ಶಾಕಿಂಗ್ ಹಾಗೂ ಹಾಸ್ಯಸ್ಪದ ಕಮೆಂಟ್ಗಳಿಗೆ ಹೆಚ್ಚು ಹೆಸರುವಾಸಿ. ಸದ್ಯ ಇದೇ ರೀತಿಯಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿಯೂ ಹೊಸದೇನೋ ಪ್ರಯೋಗಿಸಿರುವ ರೋಹಿತ್ ಶರ್ಮ, ಇದೀಗ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿ ನೆಟ್ಟಿಗರ ನಗುವಿಗೆ ಕಾರಣರಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನ ನಾಲ್ಕನೇ ದಿನದ ಆಟದಲ್ಲಿ ತಮ್ಮ ಜಾದೂವನ್ನು ಪ್ರದರ್ಶಿಸಿರುವ ರೋಹಿತ್ ಶರ್ಮ, ಕ್ರೀಸ್ನಲ್ಲಿ ಬಾಂಗ್ಲಾದೇಶ ತಂಡದ ಬ್ಯಾಟರ್ಗಳಾದ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಆಲ್ರೌಂಡರ್ ಶಕೀಬ್ ಅಲ್ ಹಸನ್ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಒಂದು ಓವರ್ ಮುಗಿದು ಮತ್ತೊಂದು ಓವರ್ ಶುರುವಿಗೂ ಮುನ್ನ ಸಿಕ್ಕ ಕೊಂಚ ವಿರಾಮದಲ್ಲಿ ವಿಕೆಟ್ ಬಳಿ ಬಂದ ರೋಹಿತ್, ವಿಕೆಟ್ ಮೇಲಿದ್ದ ಬೇಲ್ಗಳನ್ನು ಅತ್ತ-ಇತ್ತ ಬದಲಾಯಿಸುತ್ತ 'ಆಬ್ರಕಡಾಬ್ರ' ಎಂದು ಜಾದೂಗಾರನಂತೆ ಮಂತ್ರ ಹೇಳಿದ್ದಾರೆ. ಸದ್ಯ ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಮೈದಾನದಲ್ಲಿದ್ದವರನ್ನು ಒಂದು ನಿಮಿಷ ನಗೆಗಡಲಲ್ಲಿ ತೇಲಿಸಿದೆ,(ಏಜೆನ್ಸೀಸ್).