

KL Rahul : ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸುತ್ತಿದೆ. ಅಡಿಲೇಡ್ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾಗಲಿರುವ ಪಿಂಕ್ ಬಾಲ್ ಪಂದ್ಯದ ಅಭ್ಯಾಸ ಬಿರುಸಿನಿಂದ ಸಾಗಿದೆ. ಮೊದಲ ಟೆಸ್ಟ್‌ಗೆ ಗೈರಾಗಿದ್ದ ನಾಯಕ ಮತ್ತು ಆರಂಭಿಕ ಆಟಗಾರ ರೋಹಿತ್ ಶರ್ಮ ಎರಡನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೀಗಾಗಿ ಭಾರತ ತಂಡದ ಅಂತಿಮ ಸಂಯೋಜನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಪಿತೃತ್ವ ರಜೆಯಿಂದಾಗಿ ರೋಹಿತ್ ಮೊದಲ ಟೆಸ್ಟ್‌ಗೆ ಗೈರುಹಾಜರಾಗಿದ್ದರು. ಪರ್ತ್‌ನಲ್ಲಿ ಆಸೀಸ್ ವಿರುದ್ಧದ ನಡೆದ ಮೊದಲ ಟೆಸ್ಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸಿದರು. ಬುಮ್ರಾ ನಾಯಕತ್ವದಲ್ಲಿ ಭಾರತ ತಂಡ ಕಾಂಗರೂಗಳನ್ನು ಬರೋಬ್ಬರಿ 295 ರನ್‌ಗಳ ಅಂತರದಿಂದ ಸೋಲಿಸಿತು. ಟೀಮ್ ಇಂಡಿಯಾದ ಗೆಲುವಿನಲ್ಲಿ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ (161), ಕೆಎಲ್ ರಾಹುಲ್ (77) ಮತ್ತು ವಿರಾಟ್ ಕೊಹ್ಲಿ (ಅಜೇಯ 100) ಬ್ಯಾಟಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮ ಆಗಮಿಸಿದ್ದು, ಕೆಎಲ್ ರಾಹುಲ್ ಅವರ ಸ್ಥಾನ ಪ್ರಶ್ನಾರ್ಹವಾಗಿದೆ. ಕನ್ನಡಿಗ ರಾಹುಲ್, ಆರಂಭಿಕ ಆಟಗಾರನಾಗಿ ಅಡಿಲೇಡ್ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಾರೆಯೇ? ಅಥವಾ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕೆ ಇಳಿಯುತ್ತಾರೆಯೇ? ಎಂಬ ಪ್ರಶ್ನೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಲ್.ರಾಹುಲ್, ಸ್ವಾರಸ್ಯಕರ ಕಾಮೆಂಟ್ ಮಾಡಿದ್ದಾರೆ.
ಇಲ್ಲಿ ಯಾವ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುತ್ತೇನೆ ಎಂಬುದು ಮುಖ್ಯವಲ್ಲ, ಅಂತಿಮ ತಂಡದಲ್ಲಿ ಸ್ಥಾನ ಪಡೆಯುವುದು ನನಗೆ ಮುಖ್ಯವಾಗಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ಎಲ್ಲಿ ಬೇಕಾದರೂ ಬರಲು ನಾನು ಸಿದ್ಧನಿದ್ದೇನೆ. ತಂಡದ ಅನುಕೂಲಕ್ಕಾಗಿ ಯಾವುದೇ ಸ್ಥಾನದಲ್ಲಿ ಬೇಕಾದರೂ ಆಡುತ್ತೇನೆ. ತಂಡದ ಗೆಲುವಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದರು.
ಇಲ್ಲಿಯವರೆಗೆ ನಾನು ನನ್ನ ವೃತ್ತಿಜೀವನದಲ್ಲಿ ವಿವಿಧ ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಿದ್ದೇನೆ. ಮೊದಮೊದಲು ಸ್ವಲ್ಪ ಕಷ್ಟವಾಗುತ್ತಿತ್ತು. ತಂತ್ರದ ಹೊರತಾಗಿ, ಮಾನಸಿಕವಾಗಿಯೂ ಕಷ್ಟವಾಗುತ್ತಿತ್ತು. ಆದರೆ, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಹಲವು ಬಾರಿ ವಿವಿಧ ಸ್ಥಾನಗಳಲ್ಲಿ ಆಡಿರುವುದರಿಂದ, ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಈಗ ಯಾವ ಸ್ಥಾನದಲ್ಲಿ? ಹೇಗೆ? ಆಡಬೇಕೆಂಬುದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ಮೊದಲ 30 ರಿಂದ 40 ಎಸೆತಗಳಲ್ಲಿ ಕ್ರೀಸ್ ಕಾಯ್ದುಕೊಂಡರೆ ನನ್ನ ನಿಯಮಿತ ಶೈಲಿಯಲ್ಲಿ ಮುನ್ನಡೆಯುವುದು ಸುಲಭ ಎಂದು ರಾಹುಲ್ ಹೇಳಿದ್ದಾರೆ.
ಅಂದಹಾಗೆ ಕೆ.ಎಲ್. ರಾಹುಲ್ ಅವರು ತಮ್ಮ ವೃತ್ತಿಜೀವನದಲ್ಲಿ ಇದುವರೆಗೂ 54 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಒಟ್ಟು 3084 ರನ್ ಗಳಿಸಿದ್ದಾರೆ. 8 ಶತಕಗಳನ್ನು ಸಿಡಿಸಿದ್ದು, ಇದರಲ್ಲಿ ಐದು ಶತಕಗಳನ್ನು ವಿದೇಶಿ ನೆಲದಲ್ಲಿ ಗಳಿಸಿದ್ದಾರೆ. ಐದರಲ್ಲಿ ಎರಡು ದಕ್ಷಿಣ ಆಫ್ರಿಕಾದಲ್ಲಿ, ಎರಡು ಇಂಗ್ಲೆಂಡ್‌ನಲ್ಲಿ ಮತ್ತು ಒಂದು ಆಸ್ಟ್ರೇಲಿಯಾದಲ್ಲಿ ದಾಖಲಾಗಿವೆ. ಪರ್ತ್ ಟೆಸ್ಟ್‌ನಲ್ಲೂ ರಾಹುಲ್ ಮೊದಲ ಇನಿಂಗ್ಸ್‌ನಲ್ಲಿ ಕೇವಲ 26 ರನ್ ಗಳಿಸಿದ್ದರೂ, ಎರಡನೇ ಇನ್ನಿಂಗ್ಸ್‌ನಲ್ಲಿ ನಿರ್ಣಾಯಕ ಅರ್ಧಶತಕ (77) ಗಳಿಸಿದರು.
ಇನ್ನು ಎರಡನೇ ಟೆಸ್ಟ್‌ಗೆ ರೋಹಿತ್ ಶರ್ಮ ಜೊತೆಗೆ ಶುಭಮನ್ ಗಿಲ್ ಕೂಡ ಲಭ್ಯವಿದ್ದಾರೆ. ಇದರೊಂದಿಗೆ ರಾಹುಲ್ ಬ್ಯಾಟಿಂಗ್ ಕ್ರಮಾಂಕ ಬದಲಾವಣೆ ಜತೆಗೆ ಧ್ರುವ್ ಜುರೆಲ್ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. (ಏಜೆನ್ಸೀಸ್)