

ಧರ್ಮಶಾಲಾ: ನಾಯಕ ರೋಹಿತ್ ಶರ್ಮ (103 ರನ್, 162 ಎಸೆತ, 13 ಬೌಂಡರಿ, 3 ಸಿಕ್ಸರ್) ಮತ್ತು ಶುಭಮಾನ್ ಗಿಲ್ (110 ರನ್, 150 ಎಸೆತ, 12 ಬೌಂಡರಿ, 5 ಸಿಕ್ಸರ್) ಭರ್ಜರಿ ಶತಕದ ನೆರವಿನಿಂದ ಭಾರತ ತಂಡ 5ನೇ ಹಾಗೂ ಕೊನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಬೃಹತ್ ಮುನ್ನಡೆ ಸಾಧಿಸಿದೆ. ಈ ಮೂಲಕ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ರೋಹಿತ್ ಶರ್ಮ ಪಡೆ, 4&1 ಅಂತರದಿಂದ ಸರಣಿ ವಶಪಡಿಸಿಕೊಳ್ಳುವ ನಿರೀಕ್ಷೆ ಹೆಚ್ಚಿಸಿದೆ.
ಎಚ್ಪಿಸಿಎ ಸ್ಟೇಡಿಯಂನಲ್ಲಿ ಶುಕ್ರವಾರ 1 ವಿಕೆಟ್ಗೆ 135 ರನ್ಗಳಿಂದ 2ನೇ ದಿನದಾಟ ಮುಂದುವರಿಸಿದ ಭಾರತ ತಂಡ, ದಿನದಂತ್ಯಕ್ಕೆ 120 ಓವರ್ಗಳಲ್ಲಿ 8 ವಿಕೆಟ್ಗೆ 473 ರನ್ ಪೇರಿಸಿದೆ. ಈ ಮೂಲಕ ಮೊದಲ ಇನಿಂಗ್ಸ್ನಲ್ಲಿ 255 ರನ್ ಮುನ್ನಡೆ ಸಾಧಿಸಿ ಪ್ರಾಬಲ್ಯ ಮೆರೆದಿದೆ. ಇಂಗ್ಲೆಂಡ್ ತಂಡವಿನ್ನು 2ನೇ ಇನಿಂಗ್ಸ್ನಲ್ಲಿ ಹರಸಾಹಸ ನಡೆಸದಿದ್ದರೆ ಸೋಲಿನಿಂದ ಪಾರಾಗುವುದು ಕಷ್ಟಕರವೆನಿಸಿದೆ.
ಕುಲದೀಪ್-ಬುಮ್ರಾ ಸೆಡ್ಡು
ಭಾರತ ತಂಡ ಚಹಾ ವಿರಾಮದ ಬಳಿಕ 52 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಾಗ 2ನೇ ದಿನದಾಟ ಮುಕ್ತಾಯಕ್ಕೆ ಮುನ್ನವೇ ಸರ್ವಪತನ ಕಾಣುವ ಸಾಧ್ಯತೆ ಕಾಣಿಸಿತು. ಆದರೆ 9ನೇ ವಿಕೆಟ್ಗೆ ಆಂಗ್ಲರಿಗೆ ಸವಾಲಾಗಿ ನಿಂತ ಕುಲದೀಪ್ ಯಾದವ್ (27*) ಮತ್ತು ಜಸ್ಪ್ರೀತ್ ಬುಮ್ರಾ (19*) ಜೋಡಿ 18 ಓವರ್ಗಳಲ್ಲಿ 45 ರನ್ ಸೇರಿಸುವ ಮೂಲಕ ಮುನ್ನಡೆಯನ್ನು 250ರ ಗಡಿ ದಾಟಿಸಿತು.
ರೋಹಿತ್-ಗಿಲ್ ಶತಕದಬ್ಬರ
ಬೆಳಗ್ಗೆ ಕ್ರಮವಾಗಿ 52 ಮತ್ತು 26 ರನ್ಗಳಿಂದ ದಿನದಾಟ ಆರಂಭಿಸಿದ ರೋಹಿತ್ ಶರ್ಮ ಮತ್ತು ಶುಭಮಾನ್ ಗಿಲ್ ಭೋಜನ ವಿರಾಮಕ್ಕೆ ಮುನ್ನವೇ ಶತಕ ಪೂರೈಸಿದರು. ಗಿಲ್ ಬಿರುಸಿನ ಬ್ಯಾಟಿಂಗ್ನೊಂದಿಗೆ ರೋಹಿತ್ ಜತೆಗೆ ರನ್ ಗಳಿಕೆಯಲ್ಲಿ ಪೈಪೋಟಿ ನಡೆಸಿದರು. ರೋಹಿತ್ 154 ಎಸೆತಗಳಲ್ಲಿ ಶತಕ ಪೂರೈಸಿದರೆ, ಮರು ಓವರ್ನಲ್ಲೇ ಗಿಲ್ ಬೌಂಡರಿ ಬಾರಿಸುವ ಮೂಲಕ 137 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಇಬ್ಬರಿಗೂ ಇದು ಸರಣಿಯಲ್ಲಿ 2ನೇ ಶತಕವಾಗಿದೆ ಮತ್ತು ಇಬ್ಬರೂ ಸರಣಿಯಲ್ಲಿ 400 ರನ್ ಗಳಿಸಿದ ಸಾಧನೆ ಮಾಡಿದರು. 2ನೇ ವಿಕೆಟ್ಗೆ 244 ಎಸೆತಗಳಲ್ಲಿ 171 ರನ್ ಸೇರಿಸಿದ ಈ ಜೋಡಿಯನ್ನು ನಾಯಕ ಬೆನ್ ಸ್ಟೋಕ್ಸ್ ಬೇರ್ಪಡಿಸಿದರು. ಭೋಜನ ವಿರಾಮದ ಬಳಿಕ ಇಬ್ಬರೂ ಸತತ 2 ಓವರ್ಗಳಲ್ಲಿ ಔಟಾದರು. ಫಿಟ್ನೆಸ್ ಸಮಸ್ಯೆಯಿಂದಾಗಿ ಸರಣಿಯಲ್ಲಿ ಕೇವಲ ಬ್ಯಾಟರ್ ಆಗಿ ಆಡುತ್ತಿದ್ದ ಸ್ಟೋಕ್ಸ್, 2023ರ ಜೂನ್ ಬಳಿಕ ಎಸೆದ ಮೊದಲ ಎಸೆತದಲ್ಲೇ ರೋಹಿತ್ ಬೌಲ್ಡಾದರು.
ಕನ್ನಡಿಗ ಪಡಿಕ್ಕಲ್ ಯಶಸ್ವಿ ಪದಾರ್ಪಣೆ
ರೋಹಿತ್&ಗಿಲ್ ಜೋಡಿ ಬೇರ್ಪಟ್ಟ ಬೆನ್ನಲ್ಲೇ ಕಣಕ್ಕಿಳಿದ ಕನ್ನಡಿಗ ದೇವದತ್ ಪಡಿಕ್ಕಲ್ (65 ರನ್, 103 ಎಸೆತ, 10 ಬೌಂಡರಿ, 1 ಸಿಕ್ಸರ್) ಅರ್ಧಶತಕ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಯಶಸ್ವಿ ಪದಾರ್ಪಣೆ ಮಾಡಿದರು. 4ನೇ ವಿಕೆಟ್ಗೆ ಅವರು ಸ್ರಾರ್ಜ್ ಖಾನ್ (56 ರನ್, 60 ಎಸೆತ, 8 ಬೌಂಡರಿ, 1 ಸಿಕ್ಸರ್) ಜತೆಗೂಡಿ 132 ಎಸೆತಗಳಲ್ಲಿ 97 ರನ್ ಸೇರಿಸಿದರು. ವೇಗವಾಗಿ ರನ್ ಕಲೆಹಾಕುವ ಮೂಲಕ ಚಹಾ ವಿರಾಮದವರೆಗೂ ಈ ಯುವ ಜೋಡಿ ಆಂಗ್ಲರಿಗೆ ಸವಾಲಾಗಿ ನಿಂತಿತು. ಸ್ರಾರ್ಜ್ 55 ಮತ್ತು ಪಡಿಕ್ಕಲ್ 83 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ದೇಶೀಯ ಕ್ರಿಕೆಟ್ನಲ್ಲಿ ರನ್ಮಳೆ ಹರಿಸಿದ್ದಕ್ಕೆ ಪ್ರತಿಫಲವಾಗಿ ಸಿಕ್ಕ ಅವಕಾಶವನ್ನು 23 ವರ್ಷದ ಪಡಿಕ್ಕಲ್ ಸಮರ್ಥವಾಗಿ ಬಳಸಿಕೊಂಡರು. ಆದರೆ ಚೊಚ್ಚಲ ಟೆಸ್ಟ್ನಲ್ಲೇ ಶತಕ ಬಾರಿಸುವ ಅವಕಾಶವನ್ನು ಕೈಚೆಲ್ಲಿದರು. ಭಾರತ ಪರ ಟಿ20ಗೆ 2021ರಲ್ಲೇ ಪದಾರ್ಪಣೆ ಮಾಡಿದ್ದರೂ, ನಂತರದಲ್ಲಿ ಕರೊನಾ ಮತ್ತು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯಿಂದ ಬಳಲಿದ್ದ ಪಡಿಕ್ಕಲ್, ಪುನರಾಗಮನದ ಬಳಿಕ 2023-24ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ರನ್ಮಳೆ ಹರಿಸಿ ಮತ್ತೆ ಗಮನಸೆಳೆದಿದ್ದರು.
ಬಶೀರ್-ಹಾರ್ಟ್ಲಿ ಬ್ರೇಕ್
ಭಾರತ ತಂಡದ ಮಧ್ಯಮ ಕ್ರಮಾಂಕಕ್ಕೆ ಸ್ಪಿನ್ನರ್ ಶೋಯಿಬ್ ಬಶೀರ್ (170ಕ್ಕೆ 4) ಬ್ರೇಕ್ ಹಾಕಿದರೆ, ಮತ್ತೋರ್ವ ಸ್ಪಿನ್ನರ್ ಟಾಮ್ ಹಾರ್ಟ್ಲಿ (126ಕ್ಕೆ 2) ಉತ್ತಮ ಬೆಂಬಲ ಒದಗಿಸಿದರು. ಚಹಾ ವಿರಾಮದ ಬಳಿಕ ಮೊದಲ ಎಸೆತದಲ್ಲೇ ಸ್ರಾರ್ಜ್ ಔಟಾದರೆ, ರವೀಂದ್ರ ಜಡೇಜಾ (15) ಜತೆಗೆ 27 ಸೇರಿಸಿ ಪಡಿಕ್ಕಲ್ ಕೂಡ ಬಶೀರ್ಗೆ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಧ್ರುವ ಜುರೆಲ್ (15), ಜಡೇಜಾ ಮತ್ತು ಆರ್. ಅಶ್ವಿನ್ 1 ರನ್ ಅಂತರದಲ್ಲಿ ಔಟಾದರು. ಅಶ್ವಿನ್ 100ನೇ ಟೆಸ್ಟ್ನಲ್ಲಿ ಖಾತೆಯನ್ನೂ ತೆರೆಯದೆ ನಿರಾಸೆ ಅನುಭವಿಸಿದರು.
ಜೇಮ್ಸ್ 699!
ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಎಸೆತವೊಂದರಲ್ಲಿ ಮುನ್ನುಗ್ಗಿ ಬಂದು ನೇರವಾಗಿ ಸಿಕ್ಸರ್ ಸಿಡಿಸಿ ಗಮನಸೆಳೆದಿದ್ದ ಶುಭಮಾನ್ ಗಿಲ್ ಅಂತಿಮವಾಗಿ ಅವರದೇ ಎಸೆತದಲ್ಲಿ ಬೌಲ್ಡಾದರು. ಈ ಮೂಲಕ 41 ವರ್ಷದ ಆಂಡರ್ಸನ್ಗೆ 699ನೇ ವಿಕೆಟ್ ಒಪ್ಪಿಸಿದರು.
4: ಶುಭಮಾನ್ ಗಿಲ್ (4098) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 4 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.
*11: ಶುಭಮಾನ್ ಗಿಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 11ನೇ ಶತಕ ಬಾರಿಸಿದರು. ಟೆಸ್ಟ್ನಲ್ಲಿ ಇದು 4ನೇ ಶತಕ. ಏಕದಿನದಲ್ಲಿ 6, ಟಿ20ಯಲ್ಲಿ 1 ಶತಕ ಸಿಡಿಸಿದ್ದಾರೆ.
*5: ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಭಾರತದ ಅಗ್ರ ಕ್ರಮಾಂಕದ ಐವರು ಬ್ಯಾಟರ್ಗಳು 50 ಪ್ಲಸ್ ರನ್ ಗಳಿಸಿದ್ದು ಇದೇ ಮೊದಲಾಗಿದೆ.