

ಧರ್ಮಶಾಲಾ: "ಬಾಜ್ಬಾಲ್ ಎಂದರೆ ಏನೆಂದು ನನಗೆ ಇದುವರೆಗೆ ಅರ್ಥವೇ ಆಗಿಲ್ಲ' ಎಂದು ಧರ್ಮಶಾಲಾ ಟೆಸ್ಟ್ಗೆ ಮುನ್ನ ಆಂಗ್ಲರಿಗೆ ಟಾಂಗ್ ನೀಡಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ, ಜೈಸ್ವಾಲ್ ಬಾಜ್ಬಾಲ್ನಿಂದಲೇ ಸ್ಫೂರ್ತಿ ಪಡೆದು ಆಕ್ರಮಣಕಾರಿಯಾಗಿ ಆಡುತ್ತಿದ್ದಾರೆ ಎಂಬ ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ಹೇಳಿಕೆಯನ್ನೂ ತಳ್ಳಿಹಾಕಿದ್ದಾರೆ.
"ನಮ್ಮ ತಂಡದಲ್ಲಿ ರಿಷಭ್ ಪಂತ್ ಎಂಬ ಆಟಗಾರನೊಬ್ಬನಿದ್ದಾನೆ. ಬಹುಶ@ ಬೆನ್ ಡಕೆಟ್ ಆತನ ಆಟವನ್ನು ನೋಡಿಲ್ಲವೆನಿಸುತ್ತದೆ' ಎಂದು ರೋಹಿತ್ ನಗುತ್ತಲೇ ತಿರುಗೇಟು ನೀಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಹೊಸದಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಜತೆಗೆ ಆಂಗ್ಲರು ಕಳೆದ ಸಲಕ್ಕಿಂತ ಈ ಬಾರಿ ಟೆಸ್ಟ್ ಸರಣಿಯಲ್ಲಿ ಉತ್ತಮವಾಗಿ ಆಡಿದ್ದಾರೆ ಎಂಬುದನ್ನು ರೋಹಿತ್ ಒಪ್ಪಿಕೊಂಡಿದ್ದಾರೆ.
ರೋಹಿತ್ ನಾಯಕತ್ವಕ್ಕೆ ಯಶ
ವಿರಾಟ್ ಕೊಹ್ಲಿ, ಮೊಹಮದ್ ಶಮಿ ಅವರಂಥ ಪ್ರಮುಖ ಆಟಗಾರರು ಸಂಪೂರ್ಣ ಸರಣಿಗೆ ಗೈರಾದರೆ, ಕೆಎಲ್ ರಾಹುಲ್ ಗಾಯ, ಶ್ರೇಯಸ್ ಅಯ್ಯರ್ ಫಾರ್ಮ್ ಕೊರತೆಯಿಂದ ಹೊರಗುಳಿದರು. ಬುಮ್ರಾ, ಸಿರಾಜ್ ಆವರ್ತನ ಪದ್ಧತಿಯಂತೆ ವಿರಾಮ ಪಡೆದರು. ಇದರ ನಡುವೆಯೂ ಯುವ ಪಡೆಯನ್ನು ಯಶಸ್ವಿಯಾಗಿ ಮುನ್ನಡೆಸಿದ ಶ್ರೇಯ ನಾಯಕ ರೋಹಿತ್ ಶರ್ಮಗೆ ಸಲ್ಲಬೇಕು. ಜತೆಗೆ ಕೋಚ್ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನವೂ ನಿರ್ಣಾಯಕವೆನಿಸಿದೆ. ಪ್ರಮುಖವಾಗಿ ಸರಣಿಯಲ್ಲಿ ಕಣಕ್ಕಿಳಿದ ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಧ್ರುವ ಜುರೆಲ್, ಸರ್ಫ್ರಾಜ್ ಖಾನ್, ಆಕಾಶ್ ದೀಪ್ ಯಶ ಕಂಡಿದ್ದು, ಭವಿಷ್ಯದ ಬಗ್ಗೆಯೂ ಆಶಾಕಿರಣ ಮೂಡಿಸಿದ್ದಾರೆ.