ಪ್ಲ್ಯಾನ್​ ತಲೆಕೆಳಗಾದರೆ... ರೋಹಿತ್​​ ಶರ್ಮ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಶಮ್ಮಿ, ಶ್ರೇಯಸ್​ ಅಯ್ಯರ್!​

ವಿಜಯವಾಣಿ - 2024-08-22T164523.265
Published on

ನವದೆಹಲಿ: 17 ವರ್ಷಗಳ ಬಳಿಕ ಭಾರತಕ್ಕೆ ನಾಯಕನಾಗಿ ಟಿ20 ವಿಶ್ವಕಪ್​ ತಂದುಕೊಟ್ಟ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮ, ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಅಚ್ಚುಮೆಚ್ಚಿನ ಕ್ರಿಕೆಟಿಗ. ಇತ್ತೀಚೆಗಷ್ಟೇ ಅತಿಥೇಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡನೇ ಪಂದ್ಯವನ್ನು ಹೀನಾಯವಾಗಿ ಸೋಲುವ ಮೂಲಕ ಸರಣಿಯನ್ನೇ ಕಳೆದುಕೊಂಡ ಟೀಮ್ ಇಂಡಿಯಾ, ರೋಹಿತ್ ಶರ್ಮ ನಾಯಕತ್ವದಲ್ಲಿ ಹೀನಾಯ ಸೋಲುಂಡಿತು. ಇದು ಅನೇಕರ ಟೀಕೆ, ವ್ಯಂಗ್ಯಗಳಿಗೂ ಕಾರಣವಾಯಿತು. ನಮಗೆಲ್ಲಾ ತಿಳಿದಿರುವ ಹಾಗೆ ಸಿಟ್ಟಿಗೆ ಒಳಗಾಗುವ ಶರ್ಮ, ಹಲವು ಬಾರಿ ಪಂದ್ಯದ ಮಧ್ಯೆಯೇ ತಂಡದ ಆಟಗಾರರ ಮೇಲೆ ಗರಂ ಆಗಿ, ಬೈದಿದ್ದು ಉಂಟು. ಸದ್ಯ ಈ ವಿಚಾರ ಇದೀಗ ಮುನ್ನೆಲೆಗೆ ಬಂದಿದ್ದು, ವೇಗಿ ಮೊಹಮ್ಮದ್ ಶಮ್ಮಿ ಮತ್ತು ಶ್ರೇಯಸ್ ಅಯ್ಯರ್​ ಮೌನ ಮುರಿದಿದ್ದಾರೆ.

ಸಿಯಟ್​ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಹಿತ್ ಶರ್ಮ ನಾಯಕತ್ವದ ಬಗ್ಗೆ ಮಾತನಾಡಿದ ಮೊಹಮ್ಮದ್ ಶಮ್ಮಿ, "ಎದುರಾಳಿಗಳ ಎದುರು ಬರುವ ಮುನ್ನ ನಾವು ಹಾಕಿಕೊಂಡ ಪ್ಲ್ಯಾನ್​ಗಳನ್ನು ಯಶಸ್ವಿಗೊಳಿಸುವ ಬದಲು ವಿಫಲಗೊಳಿಸಿದ್ರೆ ರೋಹಿತ್ ಬಹಳ ಕೋಪಕ್ಕೆ ತುತ್ತಾಗುತ್ತಿದ್ದರು. ಯಾರು ಆ ತಪ್ಪು ಮಾಡುತ್ತಿದ್ದರು ಅಂಥವರ ವಿರುದ್ಧ ಮೈದಾನದಲ್ಲೇ ಜೋರಾಗಿ ಕೂಗಿ ಬೈಯುತ್ತಿದ್ದರು. ಕ್ಯಾಪ್ಟನ್ ಆಗಿ ತಂಡದ ಸದಸ್ಯರಿಗೆ ಒಂದೊಳ್ಳೆ ಸ್ವತಂತ್ರ ಕೊಡ್ತಾರೆ. ಆದ್ರೆ, ನಾವು ಇಟ್ಟುಕೊಂಡ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಸೋತರೆ ಖಂಡಿತ ಅವರು ತೀವ್ರ ಸಿಟ್ಟಿಗೆ ಒಳಗಾಗುತ್ತಿದ್ದರು. ಅದನ್ನು ನಾವು ಬಹಳ ಹತ್ತಿರದಿಂದ ನೋಡಿದ್ದೇವೆ" ಎಂದರು.

ಈ ಮಾತನ್ನು ಒಪ್ಪಿದ ಶ್ರೇಯಸ್​ ಅಯ್ಯರ್​, "ಶಮ್ಮಿ ಹೇಳಿದ್ದು ಸರಿಯಿದೆ. ಇಂತಹ ಸಂದರ್ಭದಲ್ಲಿ ರೋಹಿತ್ ವರ್ತನೆ ಬಹಳ ಸಿಟ್ಟಿನಿಂದಲೇ ಕೂಡಿರುತ್ತದೆ. ಅವರೊಂದಿಗೆ ತುಂಬ ವರ್ಷಗಳಿಂದ ಆಡಿರುವ ಅನುಭವ ನಮಗಿರುವ ಕಾರಣ, ರೋಹಿತ್​ರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ. ಪಂದ್ಯದ ಮಧ್ಯೆಯೇ ಶರ್ಮ ತಮ್ಮ ಸಹ ಆಟಗಾರರನ್ನು ಬೈತಾರೆ. ಕಳೆದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಪಂದ್ಯದಲ್ಲಿ ಬೌಲರ್​ ವಾಷಿಂಗ್ಟನ್ ಸುಂದರ್​ಗೆ ಅವರು ತೆಗೆದುಕೊಂಡ ಕ್ಲಾಸ್​ ಇದಕ್ಕೆ ನಿದರ್ಶನ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net