

ಮೆಲ್ಬೋರ್ನ್: ಡಬಲ್ಸ್ ವಿಶ್ವ ನಂ.1 ಪಟ್ಟಕ್ಕೇರಿದ ಅತ್ಯಂತ ಹಿರಿಯ ಆಟಗಾರನೆಂಬ ಹೆಗ್ಗಳಿಕೆ ಮತ್ತು ಪದ್ಮಶ್ರೀ ಪ್ರಶಸ್ತಿ ಗೌರವದ ಬಳಿಕ ಕನ್ನಡಿಗ ಹಾಗೂ ಟೆನಿಸ್ ತಾರೆ ರೋಹನ್ ಬೋಪಣ್ಣ ಮತ್ತೊಂದು ಮಹಾನ್ ಸಾಧನೆಗೆ ಸಜ್ಜಾಗಿದ್ದಾರೆ.
ಆತಿಥೇಯ ಆಸ್ಟ್ರೆಲಿಯಾದ ಮ್ಯಾಥ್ಯೂಸ್ ಎಬ್ಡೆನ್ ಜತೆಗೂಡಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಮೊಟ್ಟಮೊದಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲ್ಲುವ ತವಕದಲ್ಲಿರುವ ಬೋಪಣ್ಣ ಶನಿವಾರ ನಡೆಯಲಿರುವ ಫೈನಲ್ನಲ್ಲಿ ಇಟಲಿಯ ಸಿಮೋನ್ ಬೊಲೆಲ್ಲಿ-ಆಂಡ್ರೆಯ ವವಸೊರಿ ಜೋಡಿಯನ್ನು ಎದುರಿಸಲಿದ್ದಾರೆ.
43 ವರ್ಷದ ಬೋಪಣ್ಣ ವೃತ್ತಿಜೀವನದಲ್ಲಿ ಇದುವರೆಗೆ ಒಮ್ಮೆ ಮಾತ್ರ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದ್ದು, ಅದು ಮಿಶ್ರ ಡಬಲ್ಸ್ ವಿಭಾಗದಲ್ಲಿ ಆಗಿದೆ. ಪುರುಷರ ಡಬಲ್ಸ್ನಲ್ಲಿ ಅವರು 2 ಬಾರಿ ಫೈನಲ್ಗೇರಿದ್ದರೂ ರನ್ನರ್ಅಪ್ಗೆ ತೃಪ್ತಿಪಟ್ಟಿದ್ದರು. 3ನೇ ಪ್ರಯತ್ನದಲ್ಲಿ ಅವರಿಗೆ ಅದೃಷ್ಟ ಒಲಿಯುವುದೇ ಎಂಬ ಕುತೂಹಲ ಟೆನಿಸ್ ಪ್ರೇಮಿಗಳದ್ದಾಗಿದೆ.
ಡಬಲ್ಸ್ ಫೈನಲ್ ಪಂದ್ಯ ಆರಂಭ: ಮಧ್ಯಾಹ್ನ 3.15, ನೇರಪ್ರಸಾರ: ಸೋನಿ ಟೆನ್