ಡಬಲ್ಸ್​ ರ‍್ಯಾಂಕಿಂಗ್​ನಲ್ಲಿ ಅಗ್ರಸ್ಥಾನಕ್ಕೆ ಮರಳಿದ ಬೋಪಣ್ಣ; ಸಿಂಗಲ್ಸ್​ನಲ್ಲಿ ಸುಮಿತ್​ ನಗಾಲ್​ಗೆ ಜೀವನಶ್ರೇಷ್ಠ ರ‍್ಯಾಂಕ್​

web bopanna wab
Published on

ನವದೆಹಲಿ: ಭಾರತದ ಅನುಭವಿ ಆಟಗಾರ ಹಾಗೂ ಕನ್ನಡಿಗ ರೋಹನ್​ ಬೋಪಣ್ಣ ಎಟಿಪಿ ಡಬಲ್ಸ್​ ರ‍್ಯಾಂಕಿಂಗ್​​ನಲ್ಲಿ ವಿಶ್ವ ನಂ. 1 ಪಟ್ಟಕ್ಕೆ ಮರಳಿದ್ದಾರೆ. ಆಸ್ಟ್ರೆಲಿಯಾದ ಮ್ಯಾಥ್ಯೂ ಎಬ್ಡೆನ್​ ಜತೆಗೂಡಿ ಕಳೆದ ವಾರ ಮಿಯಾಮಿ ಓಪನ್​ ಪ್ರಶಸ್ತಿ ಜಯಿಸುವುದರೊಂದಿಗೆ 44 ವರ್ಷದ ಬೋಪಣ್ಣ ಅಗ್ರಸ್ಥಾನಕ್ಕೆ ಮರಳುವುದು ಖಚಿತಗೊಂಡಿತ್ತು. ಸೋಮವಾರ ರ್ಯಾಂಕಿಂಗ್​ ಪರಿಷ್ಕರಣೆಯ ವೇಳೆ ಇದಕ್ಕೆ ಅಧಿಕೃತ ಮುದ್ರೆ ಬಿದ್ದಿದೆ.

ಬೋಪಣ್ಣ ವರ್ಷಾರಂಭದಲ್ಲಿ ಆಸ್ಟ್ರೆಲಿಯನ್​ ಓಪನ್​ ಪ್ರಶಸ್ತಿ ಗೆದ್ದಾಗ ವಿಶ್ವ ನಂ. 1 ಪಟ್ಟಕ್ಕೇರಿದ ಅತ್ಯಂತ ಹಿರಿಯ ಆಟಗಾರ ಎನಿಸಿದ್ದರು. ಆದರೆ ಇತ್ತೀಚೆಗೆ 2 ಟೂರ್ನಿಗಳಲ್ಲಿ ವೈಫಲ್ಯ ಕಂಡ ಬಳಿಕ ಅವರು ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿದಿದ್ದರು. ಎಲ್ಲ ಎಟಿಪಿ-1000 ಮಾಸ್ಟರ್ಸ್​ ಟೂರ್ನಿಗಳ ಫೈನಲ್​ಗೇರಿದ 2ನೇ ಭಾರತೀಯರೆನಿಸಿರುವ ಬೋಪಣ್ಣಗೆ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ ದೃಷ್ಟಿಯಿಂದ ರ‍್ಯಾಂಕಿಂಗ್​ ಮಹತ್ವದ್ದೆನಿಸಿದೆ. ಕಟ್​-ಆಫ್​ ದಿನಾಂಕಕ್ಕೆ ಮುನ್ನ ಅಗ್ರ 10ರಲ್ಲಿ ಸ್ಥಾನ ಕಾಯ್ದುಕೊಂಡರೆ ಅವರ ಒಲಿಂಪಿಕ್ಸ್​ ಪ್ರವೇಶ ಖಚಿತವಾಗಲಿದೆ. 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಸ್ಪರ್ಧಿಸಿದ್ದ ಬೋಪಣ್ಣ, 2021ರ ಟೋಕಿಯೊ ಒಲಿಂಪಿಕ್ಸ್​ ವೇಳೆ ರ‍್ಯಾಂಕಿಂಗ್ ಕುಸಿತದಿಂದಾಗಿ ಸ್ಪರ್ಧಿಸಿರಲಿಲ್ಲ.

ಜೀವನಶ್ರೇಷ್ಠ 95ನೇ ರ‍್ಯಾಂಕ್​​ಗೆ ನಗಾಲ್​

ಭಾರತದ ಅಗ್ರ ಸಿಂಗಲ್ಸ್​ ಆಟಗಾರ ಸುಮಿತ್​ ನಗಾಲ್​ ಎಟಿಪಿ ಸಿಂಗಲ್ಸ್ ರ‍್ಯಾಂಕಿಂಗ್​ನಲ್ಲಿ ಜೀವನಶ್ರೇಷ್ಠ 95ನೇ ಸ್ಥಾನಕ್ಕೇರಿದ್ದಾರೆ. ಇತ್ತೀಚೆಗಿನ ಟೂರ್ನಿಗಳಲ್ಲಿ ತೋರಿದ ಉತ್ತಮ ನಿರ್ವಹಣೆಯಿಂದಾಗಿ ಅವರು ಬಡ್ತಿ ಪಡೆದಿದ್ದಾರೆ. ಕಳೆದ ಫೆಬ್ರವರಿಯಲ್ಲಿ 97ನೇ ಸ್ಥಾನಕ್ಕೇರಿದ್ದು ಅವರ ಹಿಂದಿನ ಶ್ರೇಷ್ಠ ರ‍್ಯಾಂಕ್​ ಆಗಿತ್ತು. ಜನವರಿಯಲ್ಲಿ ಆಸ್ಟ್ರೆಲಿಯನ್​ ಓಪನ್​ ಪ್ರಧಾನ ಸುತ್ತಿಗೇರಿದ್ದಲ್ಲದೆ, ಶ್ರೇಯಾಂಕಿತ ಆಟಗಾರನನ್ನು ಮಣಿಸಿ ಗಮನಸೆಳೆದಿದ್ದ ನಗಾಲ್​, ಬಳಿಕ ಚೆನ್ನೈ ಓಪನ್​ ಗೆದ್ದು ಬೀಗಿದ್ದರು. ನಗಾಲ್​ ಈ ವಾರ ಮೊರಾಕೊದಲ್ಲಿ ಎಟಿಪಿ 250 ಟೂರ್ನಿಯಲ್ಲಿ ಆಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net