ವಿಶಾಖಪಟ್ಟಣ: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ತಂಡ ಡೆಲ್ಲಿ ಎದುರು ಐಪಿಎಲ್-17ರ ಮೊದಲ ಸೋಲು ಅನುಭವಿಸಿತು. ಸಿಎಸ್ಕೆ ತಂಡಕ್ಕೆ ಇದು ಕಠಿಣ ದಿನವಾಗಿತ್ತು. ಇದರ ನಡುವೆ ಮಾಜಿ ನಾಯಕ ಎಂಎಸ್ ಧೋನಿ ಅವರ ಅಮೋ ಬ್ಯಾಟಿಂಗ್ ನಿರ್ವಹಣೆ ಒಂದೇ ಸಕಾರಾತ್ಮಕ ಅಂಶವೆನಿಸಿತು ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ 20 ರನ್ ಸೋಲಿನ ಬಳಿಕ ಹೇಳಿದರು.
ಡೆಲ್ಲಿ ತಂಡದ 192 ರನ್ ಸವಾಲಿಗೆ ಪ್ರತಿಯಾಗಿ ಸಿಎಸ್ಕೆ, ವೇಗಿಗಳಾದ ಖಲೀಲ್ ಅಹ್ಮದ್ (21ಕ್ಕೆ 2) ಮತ್ತು ಮುಕೇಶ್ ಕುಮಾರ್ (21ಕ್ಕೆ 3) ಬಿಗಿ ದಾಳಿ ಎದುರು 6 ವಿಕೆಟ್ಗೆ 171 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಋತುರಾಜ್ ಗಾಯಕ್ವಾಡ್ (1), ರಚಿನ್ ರವೀಂದ್ರ (2) ಉತ್ತಮ ಆರಂಭ ಒದಗಿಸಲಿಲ್ಲ. ಅಜಿಂಕ್ಯ ರಹಾನೆ (45), ಡೆರಿಲ್ ಮಿಚೆಲ್ (34) ತಂಡಕ್ಕೆ ಚೇತರಿಕೆ ನೀಡಿದರೂ, ಇಂಪ್ಯಾಕ್ಟ್ ಆಟಗಾರ ಶಿವಂ ದುಬೆ (18), ಸಮೀರ್ ರಿಜ್ವಿ (0) ವೈಫಲ್ಯ ಮತ್ತೆ ಹೊಡೆತ ನೀಡಿತು. ಕೊನೆಯಲ್ಲಿ ರವೀಂದ್ರ ಜಡೇಜಾ (21*) ಮತ್ತು ಟೂರ್ನಿಯಲ್ಲಿ ಮೊದಲ ಬಾರಿ ಬ್ಯಾಟಿಂಗ್ಗೆ ಬಂದ ಧೋನಿ (37*ರನ್, 16 ಎಸೆತ, 4 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟವಾಡಿದರೂ ಸೋಲು ತಪ್ಪಿಸಲಾಗಲಿಲ್ಲ.
ಅನ್ರಿಚ್ ನೋಕಿಯಾ ಎಸೆದ ಪಂದ್ಯದ ಕೊನೇ ಓವರ್ನಲ್ಲಿ 41 ರನ್ ಅಗತ್ಯವಿದ್ದಾಗ ಧೋನಿ ತಲಾ 2 ಸಿಕ್ಸರ್, ಬೌಂಡರಿ ಸಿಡಿಸಿ ಸೋಲಿನ ಅಂತರ ತಗ್ಗಿಸಿದರು. ಈ ಮೂಲಕ 42 ವರ್ಷದ ಧೋನಿ ತನ್ನ ತಾಕತ್ತು ಇನ್ನೂ ಕುಗ್ಗಿಲ್ಲ ಎಂಬುದನ್ನು ತೋರಿಸಿಕೊಟ್ಟರು.
“ಧೋನಿ ಟೂರ್ನಿಯ ಸಿದ್ಧತಾ ಶಿಬಿರದಿಂದಲೂ ಉತ್ತಮವಾಗಿ ಆಡುತ್ತ ಬಂದಿದ್ದರು. ಮೊಣಕಾಲು ಗಾಯಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡಿರುವ ಅವರ ಬ್ಯಾಟಿಂಗ್ ಅಮೋವಾಗಿತ್ತು. ನಮ್ಮ ಕಠಿಣ ದಿನದಲ್ಲೂ ಅವರ ಬ್ಯಾಟಿಂಗ್ ತಂಡಕ್ಕೆ ಸಕಾರಾತ್ಮಕ ಶಕ್ತಿಯೊಂದನ್ನು ತುಂಬಿತು’ ಎಂದು ಫ್ಲೆಮಿಂಗ್ ವಿವರಿಸಿದರು.
ಎರಡೂ ಪವರ್ಪ್ಲೇನಲ್ಲಿ ಕಂಡ ವೈಫಲ್ಯವೇ ಸೋಲಿಗೆ ಕಾರಣ ಎಂದು ದೂರಿದ ಪ್ಲೆಮಿಂಗ್, ಡೆಲ್ಲಿಗೆ ಆರಂಭದಲ್ಲೇ ಹೆಚ್ಚಿನ ರನ್ ಬಿಟ್ಟುಕೊಟ್ಟ ನಾವು ನಂತರ ಚೇಸಿಂಗ್ ವೇಳೆ ಆರಂಭಿಕ 6 ಓವರ್ಗಳಲ್ಲಿ ಹೆಚ್ಚಿನ ರನ್ ಗಳಿಸಲಿಲ್ಲ ಎಂದು ಬೇಸರಿಸಿದರು. ಐಪಿಎಲ್ನಲ್ಲಿ ಚೇಸಿಂಗ್ ವೇಳೆ ಧೋನಿ ಔಟಾಗದೆ ಉಳಿದರೂ, ಅವರ ತಂಡ ಸೋಲು ಕಂಡ 8ನೇ ದೃಷ್ಟಾಂತ ಇದಾಗಿದೆ.
ವಿಶಾಖಪಟ್ಟಣವನ್ನು ತವರು ತಾಣವಾಗಿಸಿಕೊಂಡ 5ನೇ ತಂಡ ಡೆಲ್ಲಿ ಕ್ಯಾಪಿಟಲ್ಸ್. ಈ ಮುನ್ನ ಐಪಿಎಲ್ನಲ್ಲಿ ಡೆಕ್ಕನ್ ಚಾರ್ಜರ್ಸ್, ಸನ್ರೈಸರ್ಸ್, ಮುಂಬೈ ಇಂಡಿಯನ್ಸ್ ಮತ್ತು ಪುಣೆ ಸೂಪರ್ಜೈಂಟ್ಸ್ಗೂ ಇದು ತವರು ಅಂಗಣವಾಗಿತ್ತು.
IPL 2024: ಮಯಾಂಕ್ ಯಾದವ್ ಎಸೆತದಷ್ಟೇ ವೇಗವಾಗಿ ಬೆಳೆಯಿತು ಜನಪ್ರಿಯತೆ!