

ಹಾಂಕಾಂಗ್: ಭಾರತದ ಮಾಜಿ ಆಟಗಾರರನ್ನು ಒಳಗೊಂಡ ತಂಡ ಹಾಂಕಾಂಗ್ ಸಿಕ್ಸಸ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿದ ಎಲ್ಲ 5 ಪಂದ್ಯಗಳಲ್ಲೂ ಸೋಲು ಕಂಡು ನಿರಾಸೆ ಅನುಭವಿಸಿದೆ. ಕನ್ನಡಿಗ ರಾಬಿನ್ ಉತ್ತಪ್ಪ ಸಾರಥ್ಯದ ತಂಡ ಯುಎಇ ಮತ್ತು ಓಮನ್ನಂಥ ಕ್ರಿಕೆಟ್ ಶಿಶು ದೇಶಗಳ ವಿರುದ್ಧವೂ ಪರಾಭವಗೊಂಡಿತು.
ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಸೋತಿದ್ದ ಭಾರತ ತಂಡ ಸಿ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಯುಎಇ ಎದುರು ಕೇವಲ 1 ರನ್ಗಳಿಂದ ಪರಾಭವಗೊಂಡಿತು. ಯುಎಇ 5 ವಿಕೆಟ್ಗೆ 130 ರನ್ ಗಳಿಸಿದರೆ, ಭಾರತ 4 ವಿಕೆಟ್ಗೆ 129 ರನ್ ಗಳಿಸಿ ಸೋತಿತು. ಕೊನೇ ಓವರ್ನಲ್ಲಿ 32 ರನ್ ಬೇಕಿದ್ದಾಗ ಸ್ಟುವರ್ಟ್ ಬಿನ್ನಿ ಸತತ 4 ಸಿಕ್ಸರ್ ಸಹಿತ 29 ರನ್ ಕಸಿದರು. ಆದರೆ ಕೊನೇ ಎಸೆತದಲ್ಲಿ 3 ರನ್ ಬೇಕಿದ್ದಾಗ ಬಿನ್ನಿ 2ನೇ ರನ್ ಕಸಿಯುವ ಯತ್ನದಲ್ಲಿ ರನೌಟಾದರು.
ನಂತರದಲ್ಲಿ ಪ್ಲೇಟ್ ವಿಭಾಗದಲ್ಲಿ ಆಡಿದ 3 ಪಂದ್ಯಗಳಲ್ಲೂ ಭಾರತ ತಂಡ ಕ್ರಮವಾಗಿ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಓಮನ್ ಎದುರು ಸೋಲು ಅನುಭವಿಸಿತು. ಇದರಿಂದ ಪ್ಲೇಟ್ ವಿಭಾಗದ ಸೆಮಿೈನಲ್ಗೇರಲು ಭಾರತ ವಿಫಲವಾಯಿತು. ಉತ್ತಪ್ಪ ಓಮನ್ ವಿರುದ್ಧದ ಪಂದ್ಯದಲ್ಲಿ 13 ಎಸೆತಗಳಲ್ಲೇ 5 ಸಿಕ್ಸರ್, 5 ಬೌಂಡರಿ ಸಹಿತ 52 ರನ್ ಸಿಡಿಸಿ ಮಿಂಚಿದರು.
ಶ್ರೀಲಂಕಾ ಚಾಂಪಿಯನ್: ಲಿಹುರು ಮಧುಶಂಕ ಸಾರಥ್ಯದ ಶ್ರೀಲಂಕಾ ತಂಡ ಹಾಂಕಾಂಗ್ ಸಿಕ್ಸಸ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು. 7 ವರ್ಷಗಳ ನಂತರ ನಡೆದ ಟೂರ್ನಿಯ ಫೈನಲ್ನಲ್ಲಿ ಲಂಕಾ, ಪಾಕಿಸ್ತಾನ ಎದುರು 3 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಶ್ರೀಲಂಕಾ 2007ರ ನಂತರ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.
ಓವರ್ಗೆ ಆರು ಸಿಕ್ಸರ್ ಚಚ್ಚಿಸಿಕೊಂಡ ಉತ್ತಪ್ಪ!
ಹಾಂಕಾಂಗ್ ಸಿಕ್ಸಸ್ ನಿಯಮಾವಳಿ ಪ್ರಕಾರ ವಿಕೆಟ್ ಕೀಪರ್ ಹೊರತಾಗಿ ಇತರ ಐವರು ಆಟಗಾರರೂ ಕನಿಷ್ಠ ಒಂದಾದರೂ ಓವರ್ ಬೌಲಿಂಗ್ ಮಾಡಬೇಕಾಗಿತ್ತು. ಇದರನ್ವಯ ರಾಬಿನ್ ಉತ್ತಪ್ಪ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ಗೆ ಇಳಿದಾಗ ರವಿ ಬೋಪಾರ ಓವರ್ನ ಎಲ್ಲ 6 ಎಸೆತಗಳಲ್ಲೂ ಸಿಕ್ಸರ್ ಸಿಡಿಸಿದರು. ಜತೆಗೆ ಒಂದು ವೈಡ್ ಕೂಡ ಎಸೆದ ಉತ್ತಪ್ಪ ಆ ಓವರ್ನಲ್ಲಿ ಒಟ್ಟು 37 ರನ್ ಬಿಟ್ಟುಕೊಟ್ಟರು. ಇದರಿಂದ ಇಂಗ್ಲೆಂಡ್ 6 ಓವರ್ಗಳಲ್ಲಿ 1 ವಿಕೆಟ್ಗೆ 120 ರನ್ ಪೇರಿಸಿದರೆ, ಭಾರತ 3 ವಿಕೆಟ್ಗೆ 105 ರನ್ ಗಳಿಸಲಷ್ಟೇ ಶಕ್ತವಾಯಿತು.