

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಆಟಗಾರ, ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ವಿರುದ್ಧ ಕೇಳಿ ಬಂದಿರುವ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದು, ಈ ಸಂಬಂಧ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ರಾಬಿನ್ (Robin Uthappa), ನನ್ನ ವಿರುದ್ಧ ಕೇಳಿ ಬಂದಿರುವ ಪಿಎಫ್ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ನಾನು ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈ.ಲಿ, ಸೆಂಟಾರಸ್ ಲೈಫ್‌ಸ್ಟೈಲ್ ಬ್ರಾಂಡ್ಸ್ ಪ್ರೈ. ಲಿಮಿಟೆಡ್, ಮತ್ತು ಬೆರಿಜ್ ಫ್ಯಾಶನ್ ಹೌಸ್ ಲಿಮಿಟೆಡ್ ಜೊತೆಗಿನ ನನ್ನ ಒಳಗೊಳ್ಳುವಿಕೆ ಸಂಬಂಧ ಕೆಲವು ಸಂಬಂಧಿಸಿದಂತೆ ಕೆಲವು ಸ್ಪಷ್ಟೀಕರಣವನ್ನು ನೀಡಲು ಬಯಸುತ್ತೇನೆ.
2018-19 ರರ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಶನ್ ಹೌಸ್ ಕಂಪನಿಗಳಿಗೆ ಸಾಲದ ರೂಪದಲ್ಲಿ ಹಣ ನೀಡಿದ ಕಾರಣ ಇದೇ ಕಾರಣಕ್ಕೆ ಆ ಕಂಪನಿಗಳು ನನ್ನನ್ನು ನಿರ್ದೇಶಕನಾಗಿ ನೇಮಕಗೊಳಿಸಿದ್ದವು. ಆದಾಗ್ಯೂ ಸಹ ನಾನು ಆ ಕಂಪನಿಗಳಲ್ಲಿ ಯಾವುದೇ ಸಕ್ರಿಯ ಕಾರ್ಯನಿರ್ವಾಹಕ ಪಾತ್ರವನ್ನು ಹೊಂದಿರಲಿಲ್ಲ. ಅಥವಾ ವ್ಯವಹಾರಗಳ ದೈನಂದಿನ ಕಾರ್ಯಾಚರಣೆಗಳಲ್ಲಿ ನಾನು ಭಾಗಿಯಾಗಿರಲಿಲ್ಲ.
ವೃತ್ತಿಪರ ಕ್ರಿಕೆಟಿಗ, ನಿರೂಪಕನಾಗಿ ಆ ಕಂಪನಿಗಳ ದೈನಂದಿನ ವ್ಯವಹಾರಗಳಲ್ಲಿ ನಾನು ಭಾಗಿಯಾಗಿಲ್ಲ. ವಾಸ್ತವವಾಗಿ, ನಾನು ಇಲ್ಲಿಯವರೆಗೆ ಹಣ ಹೂಡಿಕೆ ಮಾಡಿರುವ ಇತರೆ ಕಂಪನಿಗಳಲ್ಲಿಯೂ ಕಾರ್ಯನಿರ್ವಾಹಕ ಪಾತ್ರವನ್ನು ವಹಿಸಿರುವುದಿಲ್ಲ. ಈಗ ಆರೋಪ ಎದುರಿಸುತ್ತಿರುವ ಕಂಪನಿಗಳು ನಾನು ಸಾಲದ ರೂಪದಲ್ಲಿ ನೀಡಿದ ಹಣವನ್ನು ಮರುಪಾವತಿಸಲು ವಿಫಲವಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ನಾನು ಹಲವು ವರ್ಷಗಳ ಹಿಂದೆಯೇ ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆ ಕಂಪನಿಗಳ ವಿರುದ್ಧ ಪ್ರಸ್ತುತ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಆರೋಪ ಎದುರಿಸುತ್ತಿರುವ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಬಾಕಿಯಿರುವ ಪಿಎಫ್ ಹಣ ಪಾವತಿಸುವಂತೆ ಒತ್ತಾಯಿಸಿ ಅಧಿಕಾರಿಗಳು ನೀಡಿರುವ ನೋಟಿಸ್‌ಗಳಿಗೆ ನನ್ನ ಕಾನೂನು ಸಲಹಾ ತಂಡವು ಪ್ರತಿಕ್ರಿಯಿಸಿದೆ. ಆ ಕಂಪನಿಗಳಲ್ಲಿ ನನ್ನ ಪಾತ್ರವಿಲ್ಲ ಎಂದು ದೃಢೀಕರಿಸುವ ದಾಖಲೆಗಳನ್ನು ಸಹ ಒದಗಿಸಿದ್ದೇನೆ. ಅದರ ಹೊರತಾಗಿಯೂ ಪಿಎಫ್ ಅಧಿಕಾರಿಗಳು ತಮ್ಮ ಪ್ರಕ್ರಿಯೆಗಳನ್ನು ಮುಂದುವರೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿಷಯವನ್ನು ಬಗೆಹರಿಸಲು ನನ್ನ ಕಾನೂನು ಸಲಹೆಗಾರರು ಕ್ರಮ ಕೈಗೊಳ್ಳಲಿದ್ಧಾರೆ ಎಂದು ರಾಬಿನ್ ಉತ್ತಪ್ಪ (Robin Uthappa) ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.