2 ವಿಶ್ವಕಪ್​ ಗೆಲ್ಲಿಸಿಕೊಟ್ಟವರನ್ನೇ ತಂಡದಿಂದ ಕೈಬಿಟ್ರು! ವಿರಾಟ್​ ಕೊಹ್ಲಿ ವಿರುದ್ಧ ಕಿಡಿಕಾರಿದ ಟೀಮ್ ಇಂಡಿಯಾ ಆಟಗಾರ | Virat Kohli

ವಿಜಯವಾಣಿ (76)
Published on

Virat Kohli: 2006ರಲ್ಲಿ ಇಂಗ್ಲೆಂಡ್​ ವೇಗಿ ಸ್ಟುವರ್ಟ್​ ಬ್ರಾಡ್​ ಅವರ ಓವರ್​ನಲ್ಲಿ ಆರು ಬಾಲ್​ಗೆ ಆರು ಸಿಕ್ಸರ್​ ಬಾರಿಸಿದ ಸಿಕ್ಸರ್​ಗಳ ಸರದಾರ ಯುವರಾಜ್ ಸಿಂಗ್​ರನ್ನು ಕ್ರಿಕೆಟ್ ಪ್ರೇಮಿಗಳು ಎಂದಿಗೂ ಮರೆಯಲಾರರು. ಅಂದು ಆರು ಬಾಲ್ ಆರು ಸಿಕ್ಸ್​ ಸಿಡಿಸಿದ ಯುವಿ, ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಸ್ಟಾರ್​ ಬ್ಯಾಟರ್​ ಆಗಿ ಹೊರಹೊಮ್ಮಿದವರು. ಇಷ್ಟೇ ಅಲ್ಲದೇ 2011ರ ವಿಶ್ವಕಪ್​ ಟ್ರೋಫಿ ಗೆದ್ದ ಭಾರತಕ್ಕೆ ಪಂದ್ಯ ಶ್ರೇಷ್ಠ ಆಟಗಾರನಾಗಿ ಕಾಣಿಸಿಕೊಂಡ ಯುವಿ, ಟೂರ್ನಿ ಪೂರ ತಮ್ಮ ಅತ್ಯುತ್ತಮ ಆಲ್​ರೌಂಡ್ ಪ್ರದರ್ಶನ ತೋರಿ, ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದ ಕ್ರಿಕೆಟರ್​ ಆಗಿ ಉಳಿದರು. ಇಂದಿಗೂ ಯುವರಾಜ್​ ಕಮ್​ಬ್ಯಾಕ್​ ಮಾಡಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಹೆಬ್ಬಯಕೆ. ಆದ್ರೆ, ಅವರ ಅನಾರೋಗ್ಯದ ಸಮಸ್ಯೆಗಳಿಂದ ಹಾಗೂ ನಿವೃತ್ತಿ ಘೋಷಣೆಯಿಂದ ಸದ್ಯ ಯುವಿ ಮೈದಾನದಿಂದ ದೂರ ಉಳಿದಿದ್ದಾರೆ. ಇಷ್ಟು ದಿನ ಯುವರಾಜ್ ಬಗ್ಗೆ ಇಲ್ಲದ ಸದ್ದು ಇದೀಗ ಮತ್ತೆ ಕೇಳಿಬಂದಿರುವುದು ಭಾರತದ ಆಟಗಾರನಿಂದ.

ಬಹುದೊಡ್ಡ ಕಾರಣ

2007ರ ಟಿ20 ವಿಶ್ವಕಪ್​ ಹಾಗೂ 2011ರ ಏಕದಿನ ವಿಶ್ವಕಪ್​ ಎರಡರ ಗೆಲುವಿನಲ್ಲಿಯೂ ಪ್ರಮುಖ ಪಾತ್ರ ವಹಿಸಿದ ಯುವರಾಜ್ ಸಿಂಗ್​, ಭಾರತಕ್ಕೆ ವಿಶ್ವಕಪ್​ ಟ್ರೋಫಿ ತಂದುಕೊಡುವಲ್ಲಿ ಬಹುದೊಡ್ಡ ಕಾರಣ. ಈ ಕಾರಣಗಳನ್ನೇ ಮುಂದಿಟ್ಟು ಯುವಿ ಪರ ಮಾತನಾಡಿರುವ ಕನ್ನಡಿಗ ರಾಬಿನ್ ಉತ್ತಪ್ಪ, ಯುವರಾಜ್​ರನ್ನು ಭಾರತ ತಂಡದಿಂದ ಕೈಬಿಡಬಾರದಿತ್ತು. ಅವರಿಗೆ ಟೀಮ್​ನಲ್ಲಿ ಸ್ಥಾನ ಕೊಡಬೇಕಿತ್ತು. ಆದರೆ, ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಅದಕ್ಕೆ  ಅವಕಾಶವೇ ಸಿಗಲಿಲ್ಲ ಎಂದು ದೂರಿದ್ದಾರೆ. ಯುವರಾಜ್ ಎಡ ಶ್ವಾಸಕೋಶದಲ್ಲಿ ಕ್ಯಾನ್ಸರ್ ಗೆಡ್ಡೆಯ ಸ್ಟೇಜ್​ 1 ಇರುವುದು ಪತ್ತೆಯಾದ ಕಾರಣ ಅವರು ಕ್ರಿಕೆಟ್​ ತಾತ್ಕಾಲಿಕ ಗುಡ್​ಬೈ ಹೇಳಿ ಕೀಮೋಥೆರಪಿಗೆ ಒಳಗಾದರು. ದೀರ್ಘಕಾಲದ ಹೋರಾಟದ ಡಿ. 2012ರಲ್ಲಿ ಮತ್ತೆ ತಂಡಕ್ಕೆ ಮರಳಿದ್ದೇ ಆದರೂ ಯುವಿ ನಿರಸ ಪ್ರದರ್ಶನದಿಂದ ಅವರನ್ನು 2013ರ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈಬಿಡಲಾಯಿತು. ಇದಾದ ಬಳಿಕ ವಿರಾಟ್​ ಕ್ಯಾಪ್ಟನ್ಸಿಯಲ್ಲಿ ಮತ್ತೇ ಕಮ್​ಬ್ಯಾಕ್​ ಮಾಡಲು ಇಚ್ಛಿಸಿದ ಯುವಿಗೆ ಆಡಲು ಅವಕಾಶ ಕೊಡಲಿಲ್ಲ ಎಂದಿದ್ದಾರೆ ರಾಬಿನ್.

ಯುವಿ ಹೋರಾಟ

"ಆಟಗಾರರು ಫಿಟ್ನೆಸ್, ಆಹಾರ ಪದ್ಧತಿ, ಆಲಿಸುವುದು ಮತ್ತು ಒಪ್ಪಿಕೊಳ್ಳುವುದರಲ್ಲಿ ತಮ್ಮ ಮಟ್ಟವನ್ನು ತಲುಪಬೇಕೆಂದು ವಿರಾಟ್ ಕ್ಯಾಪ್ಟನ್ ಆಗಿ ಬಯಸಿದ್ದರು. ಎಲ್ಲರೂ ಭಿನ್ನವಾಗಿರುವುದರಿಂದ ಹೊಂದಾಣಿಕೆ ಕಷ್ಟ. ಯುವರಾಜ್​ರನ್ನು ರಾಷ್ಟ್ರೀಯ ತಂಡದಿಂದ ಹೊರಗಿಡಲು ಕೊಹ್ಲಿಯೇ ಕಾರಣ ಎಂದು ಉತ್ತಪ್ಪ ಇಲ್ಲಿ ಪರೋಕ್ಷವಾಗಿ ದೂರಿದ್ದಾರೆ. ಯುವಿ ಕ್ಯಾನ್ಸರ್ ಅನ್ನೇ ಮಣಿಸಿ ಮತ್ತೆ ಕ್ರಿಕೆಟ್​ನತ್ತ ಮರಳಿದರು. ಆದರೆ, ಅವರನ್ನು ತಂಡದಿಂದ ಕೈಬಿಡಲಾಯಿತು. ನಮಗೆ ಎರಡು ವಿಶ್ವಕಪ್ ಗೆದ್ದುಕೊಟ್ಟವರು ಅವರು. ನೀವು ನಾಯಕನಾದಾಗ, ಅವರ ಶ್ವಾಸಕೋಶದ ಸಾಮರ್ಥ್ಯ ಕುಗ್ಗಿದ ಬಗ್ಗೆ ಮಾತನಾಡುತ್ತೀರಿ. ನೀವು ಯುವಿ ಹೋರಾಟಗಳನ್ನು ನೋಡಿದ್ದೀರಿ ಮತ್ತು ಅವರಿಗೆ ಬೆಂಬಲ ನೀಡುವ ಹಾಗೂ ಹಿಂತಿರುಗಲು ಸ್ವಲ್ಪ ಸಮಯ ಕೊಡುವ ಅಗತ್ಯವಿತ್ತು. ಈ ಹಿಂದೆ ಹಲವು ಪಂದ್ಯವನ್ನು ಗೆದ್ದಿದ್ದರಿಂದ ಯುವಿಗೆ ಕೆಲವು ವಿನಾಯಿತಿಗಳನ್ನು ನೀಡಬಹುದಿತ್ತು. ಅದಕ್ಕೆ ಅವರು ಅರ್ಹರಿದ್ದರು. ಆದರೆ ನೀವದನ್ನು ಮಾಡಲಿಲ್ಲ" ಎಂದು ಹೇಳಿದ್ದಾರೆ.

ಪ್ರಕಾರವೇ ಎಲ್ಲವೂ ನಿರ್ಧಾರ

“ಅಂದು ಯುವಿ ಫಿಟ್ನೆಸ್ ಪರೀಕ್ಷೆಯಲ್ಲಿ ಎರಡು ಅಂಕಗಳಷ್ಟು ಕಡಿಮೆ ಮಾಡಬೇಕೆಂದು ಬಯಸಿದ್ದರು. ಆದರೆ, ವಿರಾಟ್ ಇದಕ್ಕೆ ಒಪ್ಪಲಿಲ್ಲ. ಯುವಿ ಮಾಡಿಕೊಂಡ ಕೋರಿಕೆಗೆ ಅಲ್ಲಿ ಪ್ರಾಮುಖ್ಯತೆ ನೀಡಲಿಲ್ಲ. ಅವರು ದೇಶಕ್ಕಾಗಿ ಆಡುವುದನ್ನು ಬೆಂಬಲಿಸಲಿಲ್ಲ. ಆದರೆ, ಈ ಸಮಯದಲ್ಲಿ ಯುವಿ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆದರು. ಆದಾಗ್ಯೂ, ಕೆಲವು ವೈಫಲ್ಯಗಳ ನಂತರ ಅವರನ್ನು ಕೈಬಿಡಲಾಯಿತು. ಅಂದು ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು ಮತ್ತು ಅವರ ಸೂಚನೆಗಳ ಪ್ರಕಾರವೇ ಎಲ್ಲವೂ ನಿರ್ಧಾರವಾಗುತ್ತಿತ್ತು. ಅಸಲಿಗೆ ಕೊಹ್ಲಿ ಕ್ಯಾಪ್ಟನ್ಸಿ ಅಡಿಯಲ್ಲಿ ನಾನು ಹೆಚ್ಚಿನ ಕಾಲ ಆಡಲಿಲ್ಲ" ಎಂದು ರಾಬಿನ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net