ಡೈರೆಕ್ಟ್​ ಬೀಮರ್​ ಎಸೆಯುವೆ ಎಂದು ರಾಬಿನ್​ ಉತ್ತಪ್ಪಗೆ ಬೆದರಿಕೆ ಹಾಕಿದ್ದ ಪಾಕ್​ ಮಾಜಿ ವೇಗಿ..!

robin and uthappa
Published on

ಬೆಂಗಳೂರು: ಪಾಕಿಸ್ತಾನ ತಂಡದ ಮಾಜಿ ವೇಗಿ ಶೋಯಿಬ್​ ಅಖ್ತರ್​ ಕ್ರಿಕೆಟ್​ ಆಡುವ ದಿನಗಳಲ್ಲಿ ಎದುರಾಳಿ ತಂಡದ ಆಟಗಾರರನ್ನು ಕೆಣಕುವುದರಲ್ಲಿ ನಿಪುಣರಾಗಿದ್ದರು. ದಿಗ್ಗಜರಾದ ಸಚಿನ್​ ತೆಂಡುಲ್ಕರ್​, ಬ್ರಿಯಾನ್​ ಲಾರಾ, ರಿಕ್ಕಿ ಪಾಂಟಿಂಗ್​, ವೀರೇಂದ್ರ ಸೆಹ್ವಾಗ್​, ಮ್ಯಾಥ್ಯೂ ಹೇಡನ್​..ಹೀಗೆ ಅಖ್ತರ್​ ಕೆದಕುತ್ತಿದ್ದ ಆಟಗಾರರ ಪಟ್ಟಿ ದೊಡ್ಡದಾಗಿಯೇ ಸಾಗುತ್ತದೆ. ಇದೇ ರೀತಿ ಕನ್ನಡಿಗ ರಾಬಿನ್​ ಉತ್ತಪ್ಪ ಅವರನ್ನು ಪಾಕ್​ ವೇಗಿ ಒಮ್ಮೆ ಕೆಣಕಿದ್ದರಂತೆ. 2007ರಲ್ಲಿ ಭಾರತದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಸರಣಿಯ ಪಂದ್ಯವೊಂದರಲ್ಲಿ ನಡೆದ ಘಟನೆ ಕುರಿತು ರಾಬಿನ್​ ಉತ್ತಪ್ಪ ಯೂಟ್ಯೂಬ್​ ಚಾನೆಲ್​ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

2007ರಲ್ಲಿ ಪಾಕಿಸ್ತಾನ ತಂಡ 3 ಟೆಸ್ಟ್​ ಹಾಗೂ 5 ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲು ಭಾರತ ಪ್ರವಾಸ ಕೈಗೊಂಡಿತ್ತು. ಟಿಸ್ಟ್​ ಸರಣಿಯಲ್ಲಿ 1-0 ಯಿಂದ ಗೆದ್ದಿದ್ದ ಭಾರತ, ಮೊದಲ ಏಕದಿನ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಯಿಂದ ಮುನ್ನಡೆ ಸಾಧಿಸಿತ್ತು. ಗುವಾಹಟಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಉತ್ತಪ್ಪ ಫಿನಿಷರ್​ ಆಗಿ ಕಾರ್ಯನಿರ್ವಹಿಸಿದ್ದರು. ಈ ಪಂದ್ಯದಲ್ಲಿ ಭಾರತ ಜಯ ದಾಖಲಿಸಲು 25 ಎಸೆತಗಳಲ್ಲಿ 12 ರನ್​ಗಳ ಅವಶ್ಯಕತೆಯಿತ್ತು. ನಾನು ಹಾಗೂ ಇರ್ಫಾನ್​ ಪಠಾಣ್​ ಕ್ರೀಸ್​ನಲ್ಲಿದ್ದೇವು. ಈ ವೇಳೆ ನನಗೆ ಶೋಯಿಬ್​ ಯಾರ್ಕರ್​ ಎಸೆತವೊಂದನ್ನು ಎಸೆದರು. ಫುಲ್​ಟಾಸ್​ ಬಂದ ಮರು ಎಸೆತದಲ್ಲಿ ಬೌಂಡರಿ ಸಿಡಿಸಿದೆ. ಶೋಯಿಬ್​ ಅಖ್ತರ್​ಗೆ ಹೊಡೆಯಲು ಇಂಥ ಅವಕಾಶ ಸಿಗುವುದಿಲ್ಲ ಎಂದು ಮನಸಿನಲ್ಲೇ ಹೇಳಿಕೊಂಡು ಮರು ಎಸೆತದಲ್ಲೆ ಮತ್ತೊಂದು ಬೌಂಡರಿ ಸಿಡಿಸಿದೆ ಎಂದು ಉತ್ತಪ್ಪ ಮೆಲುಕು ಹಾಕಿದ್ದಾರೆ.

2ನೇ ಪಂದ್ಯ ಮೊಹಲಿ ಹಾಗೂ 3ನೇ ಪಂದ್ಯ ಕಾನ್ಪುರದಲ್ಲಿ ನಡೆದ ಬಳಿಕ, 4ನೇ ಪಂದ್ಯ ಗ್ವಾಲಿಯರ್​ನಲ್ಲಿ ನಡೆಯಿತು. ಎರಡೂ ತಂಡಗಳ ಆಟಗಾರರು ಒಟ್ಟಿಗೆ ರಾತ್ರಿ ಊಟ ಮಾಡುತ್ತಿದ್ದೇವು. ಈ ವೇಳೆ ನನ್ನ ಬಳಿ ಬಂದ ಶೋಯಿಬ್​ ಬಾಯ್​, ರಾಬಿನ್​ ಉತ್ತಮ ಚೆನ್ನಾಗಿ ಆಡುತ್ತಿದ್ದೀರಾ ಎಂದು ಹೇಳಿದರು. ನೀನು ನನಗೆ ಹೊಡೆಯಲು ಬರುತ್ತಿದ್ದೆ ಎನಿಸುತ್ತದೆ. ನಾನು ಮುಂದೆ ಏನು ಮಾಡುತ್ತಿದ್ದೆ ಎಂದು ಗೊತ್ತಿಲ್ಲ. ನಿನ್ನ ತಲೆಗೆ ನೇರವಾಗಿ ಬಿಮರ್​ ಎಸೆಯುತ್ತಿದ್ದೆ ಎಂದು ಶೋಯಿಬ್​ ಹೇಳಿದರಂತೆ. ಆ ಬಳಿಕ ನಾನು ಶೋಯಿಬ್​ ಅವರ ಬಳಿ ಹೋಗಲು ಧೈರ್ಯವಾಗಲಿಲ್ಲ ಎಂದು ರಾಬಿನ್​ 14 ವರ್ಷದ ಹಿಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net