

ಬೆಂಗಳೂರು: ಮೊಣಕಾಲು ನೋವಿನಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟಿ.ನಟರಾಜನ್ ಇದೀಗ ಚೇತರಿಕೆ ಹಾದಿಯಲ್ಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಮುಂಬರುವ ಇಂಗ್ಲೆಂಡ್ ಪ್ರವಾಸ ತಪ್ಪಿಸಿಕೊಂಡ ತಮಿಳುನಾಡಿನ ನಟರಾಜನ್, ರಾಷ್ಟ್ರೀಯ ತಂಡಕ್ಕೆ ವಾಪಸಾಗುವ ನಿಟ್ಟಿನಲ್ಲಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ. ತಮ್ಮ ಮನೆಯಲ್ಲಿ ಫಿಟ್ನೆಸ್ಗಾಗಿ ಮಾಡುತ್ತಿರುವ ವರ್ಕ್ಔಟ್ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಪ್ರತಿದಿನವೂ ಏಳುವಾಗ ಶಕ್ತಿಶಾಲಿಯಾಗಿಯೇ ಹೊರಹೊಮ್ಮುತ್ತೇನೆ ಎಂದು ಬರೆದುಕೊಂಡಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನ ಶಿಬಿರದಲ್ಲಿ ನಟರಾಜನ್ ಭಾಗವಹಿಸಲು ಸಾಧ್ಯವಾಗಿಲ್ಲ.
ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ತಂಡದ ಪರ ಕೇವಲ 2 ಪಂದ್ಯಗಳನ್ನಷ್ಟೇ ಆಡಿದ್ದರು. ಏಪ್ರಿಲ್ ಕಡೇ ವಾರದಲ್ಲಿ ಮೊಣಕಾಲು ನೋವಿಗೆ ತುತ್ತಾದ ನಟರಾಜನ್ ಬಳಿಕ ಐಪಿಎಲ್ನಿಂದಲೇ ಹೊರಗುಳಿದಿದ್ದರು. ಇದಕ್ಕೂ ಮೊದಲು ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ನಿಗದಿತ ಓವರ್ಗಳ ಸರಣಿಯಲ್ಲಿ ಆಡಿದ್ದರು. 30 ವರ್ಷ ನಟರಾಜನ್, ಎನ್ಸಿಎಗೆ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ವರ್ಷ ಯುಎಇಯಲ್ಲಿ ಐಪಿಎಲ್-13 ಮುಕ್ತಾಯಗೊಂಡ ಬೆನ್ನಲ್ಲೇ ರಾಷ್ಟ್ರೀಯ ತಂಡದೊಂದಿಗೆ ನೆಟ್ ಬೌಲರ್ ಆಗಿ ಆಸ್ಟ್ರೆಲಿಯಾ ಪ್ರವಾಸ ಕೈಗೊಂಡಿದ್ದರು. ಅದೃಷ್ಟವಶಾತ್ ಮೂರು ಮಾದರಿಯಲ್ಲೂ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡುವ ಅವಕಾಶಗಿಟ್ಟಿಸಿಕೊಂಡಿದ್ದರು. 1 ಟೆಸ್ಟ್, 2 ಏಕದಿನ ಹಾಗೂ ಟಿ20 ಪಂದ್ಯಗಳನ್ನಾಡಿದ್ದರು