

RJ Mahvash: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್ ಹಣಾಹಣಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಗೊಂದಲ ಹುಟ್ಟುಹಾಕಿದ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಅವರ ಆಪ್ತ ಸ್ನೇಹಿತೆ ಆರ್.ಜೆ. ಮಹ್ವಾಶ್, ದುಬೈ ಸ್ಟೇಡಿಯಂನಲ್ಲಿ ಫ್ಯಾನ್ಸ್ಗಳ ಮಧ್ಯೆಯೇ ಕುಳಿತು ಪಂದ್ಯ ವೀಕ್ಷಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಂದಿನಿಂದ ಇಂದಿನವರೆಗೂ ಇಬ್ಬರ ಓಡಾಟ, ಸುತ್ತಾಟ ಜೋರಾಗಿದ್ದು, ಇದು ವದಂತಿಗಳಿಗೆ ಪುಷ್ಠಿ ನೀಡಿದೆ.
ಐಪಿಎಲ್ ಆರಂಭದಿಂದಲೂ ಆರ್.ಜೆ. ಮಹ್ವಾಶ್ ಹೆಸರು ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಮಹ್ವಾಶ್ ಯುಜ್ವೇಂದ್ರ ಚಹಲ್ ಜೊತೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದು. ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ವೀಕ್ಷಿಸುವುದರಿಂದ ಹಿಡಿದು ಪಂಜಾಬ್ ಕಿಂಗ್ಸ್ ಪರ ಚಹಲ್ ಆಡುವ ಹಲವು ಐಪಿಎಲ್ ಪಂದ್ಯಗಳಿಗೆ ಮಹ್ವಾಶ್ ಆಗಮಿಸಿದ್ದಾರೆ. ಇದು ನೆಟ್ಟಿಗರಿಗೆ ಅವರಿಬ್ಬರ ನಡುವೆ ಪ್ರೀತಿ ಸಂಬಂಧವಿದೆ ಎಂಬುದನ್ನು ಬಲವಾಗಿ ಒತ್ತಿ ಹೇಳುತ್ತಿದೆ. ಇಬ್ಬರ ಫೋಟೋಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವಾರು ರೀತಿಯ ಊಹಾಪೋಹಗಳಿಗೆ ಕಾರಣವಾಗುತ್ತಿದೆ.
ಇಲ್ಲಿಯವರೆಗೆ ಯಾವ ವದಂತಿಗಳಿಗೂ ಪ್ರತಿಕ್ರಿಯಿಸದ ಆರ್.ಜೆ. ಮಹ್ವಾಶ್, ಇತ್ತೀಚೆಗೆ ಭಾಗವಹಿಸಿದ್ದ ಸಂದರ್ಶನದಲ್ಲಿ ಈ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. "ಕೆಲವು ಟ್ರೋಲ್‌ಗಳಿಂದಾಗಿ ಇಂತಹ ವಿಷಯಗಳು ಪದೇ ಪದೇ ಮುನ್ನೆಲೆಗೆ ಬರುತ್ತಿವೆ. ಆದರೆ, ಇವುಗಳಲ್ಲಿ ಯಾವುದೂ ಸತ್ಯಕ್ಕೆ ಹತ್ತಿರವಿಲ್ಲ. ಎಲ್ಲವೂ ಊಹಾಪೋಹಗಳಿಂದಲೇ ಕೂಡಿವೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಇವರೆಲ್ಲ ಏಕೆ ಹೀಗೆ ಮಾಡುತ್ತಿದ್ದಾರೆ ಅನ್ನೋದೇ ಅರ್ಥ ಆಗ್ತಿಲ್ಲ. ಸತ್ಯ ಗೊತ್ತಿಲ್ಲ ಅಂದಮೇಲೆ ಏಕೆ ಸುಖಾಸುಮ್ಮನೆ ನನ್ನ ಜೀವನದ ಬಗ್ಗೆ ಹೀಗೆಲ್ಲ ವರ್ತಿಸುತ್ತಾರೆ ಎಂಬುದು ಮನಸ್ಸಿಗೆ ತೀವ್ರ ಘಾಸಿ ಮಾಡಿದೆ" ಎಂದಿದ್ದಾರೆ.
"ಇದರಿಂದಲೇ ಕಳೆದ ಕೆಲವು ದಿನಗಳಿಂದ ನಾನು ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದೇನೆ. ಈ ಮಧ್ಯೆಯೂ ನನ್ನ ವಿರುದ್ಧ ಹರಿದುಬರುತ್ತಿರುವ ಕೆಲವು ವದಂತಿಗಳು ಮತ್ತು ಟ್ರೋಲ್‌ಗಳು ತುಂಬಾ ನೋವುಂಟು ಮಾಡಿವೆ. ಇಲ್ಲಿಯವರೆಗೂ ನೆಟ್ಟಿಗರು ಹೇಳಿರುವುದೆಲ್ಲ ಶುದ್ಧ ಸುಳ್ಳು. ಕಟ್ಟು ಕಥೆ" ಎಂದು ತಮ್ಮ ಹಾಗೂ ಚಹಲ್ ನಡುವಿನ ಪ್ರೀತಿ ಸಂಬಂಧ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ,(ಏಜೆನ್ಸೀಸ್).