ಸಿಎಸ್​ಕೆ ಎದುರು ಗೆದ್ದರೂ ಸಂತಸ, ಸಂಭ್ರಮಕ್ಕಿಲ್ಲ ಜಾಗ! ಮೌನಕ್ಕೆ ಜಾರಿದ ಕ್ಯಾಪ್ಟನ್​ ರಿಯಾನ್ ಪರಾಗ್​ | Riyan Parag

ವಿಜಯವಾಣಿ - 2025-03-31T182337.590
Published on

Riyan Parag: ನಿನ್ನೆ (ಮಾರ್ಚ್ 30) ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಆರ್​ಆರ್​ 6 ರನ್‌ಗಳಿಂದ ರೋಚಕ ಜಯ ಸಾಧಿಸಿತು. ಈ ಆವೃತ್ತಿಯಲ್ಲಿ ಸತತ ಎರಡು ಸೋಲುಗಳ ಬಳಿಕ ರಾಯಲ್ಸ್‌ಗೆ ಇದು ಮೊದಲ ಗೆಲುವು. ತಂಡದ ಕ್ಯಾಪ್ಟನ್​ ಆಗಿ ರಿಯಾನ್ ಪರಾಗ್‌ಗೆ ಇದು ಮೊದಲ ಜಯ. ನಾಯಕನಾಗಿ ತಮ್ಮ ಮೊದಲ ಪಂದ್ಯವನ್ನು ಗೆದ್ದ ಸಂತೋಷ ರಿಯಾನ್‌ಗೆ ಹೆಚ್ಚು ಕಾಲ ಉಳಿಯಲಿಲ್ಲ. ಅದಕ್ಕೆ ಕಾರಣ ಬಿಸಿಸಿಐ ಹಾಕಿದ ಭಾರೀ ದಂಡ.

ಸಿಎಸ್​ಕೆ ಚೇಸಿಂಗ್​ ವೇಳೆ ಮಂದಗತಿಯ ಓವರ್‌ರೇಟ್‌ಗಾಗಿ ಕ್ಯಾಪ್ಟನ್ ರಿಯಾನ್ ಪರಾಗ್​ಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು. ಈ ಸೀಸನ್​ನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಇದು ಮೊದಲ ಸ್ಲೋ ಓವರ್‌ರೇಟ್ ಉಲ್ಲಂಘನೆ. ಕಳೆದ ಆವೃತ್ತಿಯವರೆಗೂ ಒಂದು ತಂಡ ಆ ಸೀಸನ್​ನಲ್ಲಿ ಮೂರು ಬಾರಿ ಮಂದಗತಿಯ ಓವರ್ ರೇಟ್ ಮಾಡಿದರೆ, ತಂಡದ ಕ್ಯಾಪ್ಟನ್​ ಅನ್ನು ಒಂದು ಪಂದ್ಯದಿಂದ ಹೊರಗಿಡಲಾಗುತ್ತಿತ್ತು. ಅಂದರೆ ಅವರಿಗೆ ದಂಡದ ಜತೆ ನಿಷೇಧ ಹೇರಲಾಗುತ್ತಿತ್ತು. ಆದಾಗ್ಯೂ, 18ನೇ ಆವೃತ್ತಿಯಿಂದ ಈ ನಿಮಯನ್ನು ತೆಗೆದುಹಾಕಲಾಗಿದೆ.

ಐಪಿಎಲ್ ಆಡಳಿತ ಮಂಡಳಿಯು ಈ ಕಠಿಣ ನಿಯಮವನ್ನು ಇದೀಗ ರದ್ದುಗೊಳಿಸಿದೆ. ಇದರ ಬದಲಿಗೆ ಹೆಚ್ಚಿನ ದಂಡವನ್ನು ವಿಧಿಸಲು ನಿರ್ಧರಿಸಿದೆ. ಕಳೆದ ಸೀಸನ್​ನಲ್ಲಿ ಮೂರು ಬಾರಿ ಮಂದಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯರನ್ನು ಈ ಬಾರಿಯ ಐಪಿಎಲ್​ ಆವೃತ್ತಿಯ ಮೊದಲ ಒಂದು ಪಂದ್ಯದಿಂದ ನಿಷೇಧಿಸಲಾಗಿತ್ತು. ಆದರೆ, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತದೇ ತಪ್ಪನ್ನು ಮಾಡಿದ ಕ್ಯಾಪ್ಟನ್​ ಹಾರ್ದಿಕ್​ಗೆ 12 ಲಕ್ಷ ರೂ. ದಂಡ ವಿಧಿಸಲಾಯಿತು,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net