

ಚೆನ್ನೈ: ಆತಿಥೇಯರ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ವಿಕೆಟ್ಗಾಗಿ ಪರದಾಡುತ್ತಿದ್ದ ಪ್ರವಾಸಿ ಬಾಂಗ್ಲಾದೇಶ ತಂಡಕ್ಕೆ ಫೀಲ್ಡಿಂಗ್ ಸೆಟ್ ಮಾಡಲು ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ನೆರವಾಗಿದ್ದು ವಿಚಿತ್ರವೆನಿಸಿತು!
ಶುಭಮಾನ್ ಗಿಲ್ ಜತೆಗೂಡಿ ಶತಕ ಸಿಡಿಸಿದ ಪಂತ್, ಈ ಜತೆಯಾಟದ ವೇಳೆ, "ಓರ್ವ ಫೀಲ್ಡರ್ ಇಲ್ಲಿಗೆ ಬೇಕು' ಎಂದು ಮಿಡ್ವಿಕೆಟ್ನತ್ತ ತೋರಿಸಿದರು. ಅದರಂತೆ ಬಾಂಗ್ಲಾ ನಾಯಕ ನಜ್ಮುಲ್ ಹೊಸೈನ್ ಶಾಂಟೊ, ಮಿಡ್ವಿಕೆಟ್ಗೆ ಫೀಲ್ಡರ್ ಕಳುಹಿಸಿದರು. ಈ ಕುತೂಹಲಕಾರಿ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧೋನಿ ಸಾಧನೆ ಸರಿಗಟ್ಟಿದ ಪಂತ್
ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಶತಕ ಸಿಡಿಸಿದ ಭಾರತೀಯ ವಿಕೆಟ್ ಕೀಪರ್ ಎಂಬ ಎಂಎಸ್ ಧೋನಿ ಅವರ ದಾಖಲೆಯನ್ನು ರಿಷಭ್ ಪಂತ್ ಸರಿಗಟ್ಟಿದರು. ಧೋನಿ 6 ಶತಕ ಸಿಡಿಸಲು 144 ಇನಿಂಗ್ಸ್ ಆಡಿದ್ದರೆ, ಪಂತ್ 58 ಇನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷವೆನಿಸಿದೆ. ಪಂತ್ 2018ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಬಳಿಕ ವಿಶ್ವದ ಬೇರಾವುದೇ ತಂಡದ ವಿಕೆಟ್ ಕೀಪರ್ ಅವರಷ್ಟು ಶತಕ ಸಿಡಿಸಿಲ್ಲ ಎಂಬುದು ಗಮನಾರ್ಹ. ಕ್ವಿಂಟನ್ ಡಿಕಾಕ್, ಲಿಟನ್ ದಾಸ್ ಮತ್ತು ಮೊಹಮದ್ ರಿಜ್ವಾನ್ ತಲಾ 3 ಶತಕ ಸಿಡಿಸಿರುವುದು ನಂತರದ ಗರಿಷ್ಠವಾಗಿದೆ.