

ಚೆನ್ನೈ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದೊಂದಿಗೆ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ 632 ದಿನಗಳ ಬಳಿಕ ಟೆಸ್ಟ್ ಪಂದ್ಯ ಆಡಲಿದ್ದಾರೆ.
2022ರ ಅಂತ್ಯದಲ್ಲಿ ಭೀಕರ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಪಂತ್, ಅದಕ್ಕೆ ಮುನ್ನ 2022ರ ಡಿಸೆಂಬರ್ 22ರಿಂದ 25ರವರೆಗೆ ಬಾಂಗ್ಲಾ ವಿರುದ್ಧವೇ ಮೀರ್ಪುರದಲ್ಲಿ ಕೊನೇ ಟೆಸ್ಟ್ ಆಡಿದ್ದರು. ನಂತರದಲ್ಲಿ ಪಂತ್ ಗೈರಿನ ಸಮಯದಲ್ಲಿ ಇಶಾನ್ ಕಿಶನ್, ಕೆಎಲ್ ರಾಹುಲ್, ಕೆಎಸ್ ಭರತ್, ಧ್ರುವ ಜುರೆಲ್ ಟೆಸ್ಟ್ನಲ್ಲಿ ಕೀಪಿಂಗ್ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ 26 ವರ್ಷದ ಪಂತ್ ಟೆಸ್ಟ್ನಲ್ಲಿ ತೋರುವ ನಿರ್ಭೀತಿಯ ಆಕ್ರಮಣಕಾರಿ ಆಟವನ್ನು ತುಂಬಲು ಯಾರಿಂದಲೂ ಸಾಧ್ಯವಾಗಿಲಿಲ್ಲ.
2018ರಲ್ಲಿ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪಂತ್ ಇದುವರೆಗೆ 33 ಪಂದ್ಯ ಆಡಿದ್ದು, 5 ಶತಕಗಳ ಸಹಿತ 2,271 ರನ್ ಬಾರಿಸಿದ್ದಾರೆ. ಅಜೇಯ 159 ಅವರ ಗರಿಷ್ಠ ಗಳಿಕೆಯಾಗಿದ್ದು, 119 ಕ್ಯಾಚ್ಗಳನ್ನು ಹಿಡಿದಿದ್ದಾರೆ.